ADVERTISEMENT

ಸಿರುಗುಪ್ಪ ವಸತಿ ಶಾಲೆಯಲ್ಲಿ ಕಳಪೆ ಮಟ್ಟದ ಗೋಧಿ ಬಳಕೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:20 IST
Last Updated 3 ಮಾರ್ಚ್ 2026, 2:20 IST
ಹುಳು ಬಿದ್ದ ಕಳಪೆ ಮಟ್ಟದ ಗೋಧಿ
ಹುಳು ಬಿದ್ದ ಕಳಪೆ ಮಟ್ಟದ ಗೋಧಿ   

ಸಿರುಗುಪ್ಪ: ಸರ್ಕಾರವು ಇಲ್ಲಿನ ವಸತಿಯುತ ಶಾಲೆಯ ಮಕ್ಕಳಿಗಾಗಿ ಲಕ್ಷಾಂತರ ಅನುದಾನ ವ್ಯಯ ಮಾಡಿದರೂ ಪೌಷ್ಟಿಕ ಆಹಾರಕ್ಕಾಗಿ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ.

ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿನ ಸಮಸ್ಯೆಗಳು ಪೋಷಕರ ಮುಂದೆ ಹೇಳಿದರೆ, ವಸತಿ ಶಾಲೆಯಿಂದ ನೆಪ ಹೇಳಿ ಹೊರಗೆ ಹಾಕುತ್ತಾರೆ ಎಂಬ ಹೆದರಿಕೆಯಿಂದಾಗಿ ಸಮಸ್ಯೆ ಬಗ್ಗೆ ಯಾರ ಮುಂದೆ ಹೇಳಿ ಕೊಳ್ಳುವಂತಿಲ್ಲ. ಇಲ್ಲಿನ ಕಳಪೆ ಊಟದ ಕಥೆಯು ಮಕ್ಕಳ ಚಲನವಲನ ಹೇಳುತ್ತವೆ.

ತಾಲ್ಲೂಕಿನ ಹಚ್ಚೋಳ್ಳಿ ಗ್ರಾಮದ ಬಳಿ ಇರುವ ಪರಿಶಿಷ್ಟ ಪಂಗಡಗಳ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಕ್ಕಳಿಗೆ ವಿವಿಧ ಸೌಲಭ್ಯಗಳು ಹಾಗೂ ಗುಣಮಟ್ಟದ ಆಹಾರವಿಲ್ಲದೇ ನೋವು ಅನುಭವಿಸುವ ಸಂಗತಿಯಾಗಿದೆ.

ADVERTISEMENT

ವ್ಯವಸ್ಥೆಯು ಪ್ರಾಚಾರ್ಯರ ಮೇಲೆ ನಿಂತಿದೆ. ಅಧಿಕಾರವಿದ್ದರೂ ವಾರ್ಡನ್ ಅಸಹಾಯಕರಾಗಿದ್ದಾರೆ. ಅಡುಗೆ ಸಿಬ್ಬಂದಿ ಅವರು ಪ್ರಾಚಾರ್ಯರ ಮಾತು ಕೇಳುವ ಪರಿಸ್ಥಿತಿ ಇದೆ. 6 ರಿಂದ 10ನೇ ತರಗತಿವರೆಗಿನ ಈ ವಸತಿ ಶಾಲೆಯಲ್ಲಿ 276 ಮಕ್ಕಳಿದ್ದಾರೆ. ಮಕ್ಕಳಿಗೆ ಲಘು ಉಪಹಾರವೂ ಹಿಂದಿನ ವರ್ಷದಲ್ಲಿ ಮಕ್ಕಳು ಬಳಸಿ ಬಿಸಾಡಿದ ನೋಟ ಪುಸ್ತಕದ ಹಾಳೆಯಲ್ಲಿ ಕಾರ್ ಮಂಡಕ್ಕಿ ಹಾಕಿ ಕೊಡುವುದರಲ್ಲಿ ತಿಳಿಯುತ್ತದೆ ಈ ವಸತಿ ಶಾಲೆಯಲ್ಲಿ ಎಷ್ಟರ ಮಟ್ಟಿಗೆ ಗುಣಮಟ್ಟದ ಆಹಾರ ನೀಡುತ್ತಾರೆ ಎಂದು!.

ಒಣಗಿದ ವಿವಿಧ ತರಕಾರಿಗಳು ಮತ್ತು ಪಲ್ಯಗಳು, ಬೂಜು ಹಿಡಿದ ಸೌತೆಕಾಯಿ, ಮೈದಾನದಲ್ಲಿ ಮೂಟೆ ಕಟ್ಟಿ ಹಾಕಿದ ಕಳಪೆ ಮಟ್ಟದ ಗೋಧಿಯಿಂದ ಚಪಾತಿ ತಯಾರಿಸುತ್ತಾರೆ ಎಂದು ಅಲ್ಲಿನ ಪ್ರಾಂಶುಪಾಲರು ಹೇಳುತ್ತಾರೆ. ಗೋಧಿಯು ಸಂಪೂರ್ಣವಾಗಿ ಹುಳ ಬಿದ್ದು ಹಿಟ್ಟಾಗಿ ಹೋಗಿದೆ, ಅದರಲ್ಲಿ ಸತ್ವ ಇಲ್ಲವಾಗಿರುವಂತಹ ಗೋಧಿಯನ್ನು ಬಳಸುವುದು ಎಷ್ಟರಮಟ್ಟಿಗೆ ಸರಿಯಾಗಿದೆ.

ಎರಡು ಮೂರು ತಿಂಗಳಾದರೂ ಹೆಣ್ಣು ಮಕ್ಕಳ ತಲೆಗೆ ಬಳಸುವ ಕೊಬ್ಬರಿ ಎಣ್ಣೆಯು ನೀಡಿಲ್ಲ, ಗುಣಮಟ್ಟವಲ್ಲದ ಟೂತ್ ಪೇಸ್ಟ್ ನೀಡುತ್ತಿದ್ದಾರೆ, ಸ್ವಚ್ಛ ಸುರಕ್ಷವಲ್ಲದ ತರಕಾರಿಗಳು ಮತ್ತು ಪಲ್ಯ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ, ಶುದ್ಧ ಕುಡಿಯುವ ನೀರನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿ ಇಟ್ಟಿರುವುದು ಕಂಡುಬಂದಿದೆ.

ಇಲ್ಲಿನ ಮಕ್ಕಳಿಗೆ ಮಾತ್ರ ಸೌಲಭ್ಯ ಮತ್ತು ಆಹಾರದಲ್ಲಿ ಬಡತನ ಇದೆ. ಹುಳುಬಿದ್ದ ಗೋಧಿ ಮತ್ತು ಕಳಪೆ ಗುಣಮಟ್ಟದ ಸಾಮಗ್ರಿಗಳು ಸರಬರಾಜ ಆಗುತ್ತಿವೆ. ಸರ್ಕಾರವು ಪ್ರತಿ ಮಗುವಿಗೆ ತಿಂಗಳಿಗೆ ಸಾವಿರಾರು ರೂಪಾಯಿ ಅನುದಾನ ಕೊಡುತ್ತಿದ್ದರು, ಗುಣಮಟ್ಟದ ಆಹಾರದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಲಕ್ಷಾಂತರ ರೂಪಾಯಿ ದುರ್ಬಳಕೆ ಆಗುತ್ತಿದೆ ಎಂಬ ಆರೋಪಗಳು ವಸತಿ ಶಾಲೆಗೆ ಬಂದಾಗ ಕೇಳಿ ಬಂದವು.

ಗುಣಮಟ್ಟವಲ್ಲದ ಆಹಾರ ಸಾಮಗ್ರಿಗಳು ನೀಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಪ್ರಾಚಾರ್ಯರ ಮತ್ತು ವಾರ್ಡನ್ ಅವರ ಕರ್ತವ್ಯ ಲೋಪದ ವಿರುದ್ಧ ನೋಟಿಸ್‌ ನೀಡಿ ಕ್ರಮ ಜರುಗಿಸುತ್ತೇನೆ
ಶಾಷು ಜಿಲ್ಲಾ ಅಧಿಕಾರಿ ಪರಿಶಿಷ್ಟ ಪಂಗಡಗಳ ಸಮಾಜ ಕಲ್ಯಾಣ ಇಲಾಖೆ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.