ADVERTISEMENT

ಹೊಸಪೇಟೆ | ‘ಬಸ್‌ ಇರುವುದಕ್ಕೆ ಅಂತ್ಯಕ್ರಿಯೆಗೆ ಹೋಗುತ್ತಿರುವೆ’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ಮೇ 2020, 20:00 IST
Last Updated 19 ಮೇ 2020, 20:00 IST
ರಾಮಚಂದ್ರ
ರಾಮಚಂದ್ರ   

ಹೊಸಪೇಟೆ: ‘ಇಂದು ಬಸ್‌ ಇರುವುದಕ್ಕೆ ಮಾವನ ಅಂತ್ಯಕ್ರಿಯೆಗೆ ಹೋಗುತ್ತಿರುವೆ. ಬಸ್‌ ಇರದಿದ್ದರೆ ಹೋಗಲು ಆಗುತ್ತಿರಲಿಲ್ಲ’ ಇದು ಇಲ್ಲಿನ ಡಾ.ಬಿ.ಆರ್‌. ಅಂಬೇಡ್ಕರ್‌ ನಗರದ ನಿವಾಸಿ ಎಸ್‌. ರಾಮಚಂದ್ರ ಅವರ ಮಾತು.

ನಗರದ ಕೇಂದ್ರ ಬಸ್‌ ನಿಲ್ದಾಣದಿಂದ ಮಂಗಳವಾರ ಬಸ್‌ ಸಂಚಾರ ಆರಂಭಗೊಂಡಿದ್ದು, ಬಸ್ಸಿನಲ್ಲಿ ಬಳ್ಳಾರಿಗೆ ಹೋಗುವುದಕ್ಕೂ ಮುನ್ನ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

‘ಬಸ್‌ ಸಂಚಾರ ಆರಂಭಿಸಿ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಸೋಮವಾರ ಸಂಜೆ ನನ್ನ ಮಾವ ತೀರಿಕೊಂಡಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ಇದೆ. ಬಸ್‌ ಇರದಿದ್ದರೆ ಅಲ್ಲಿಗೆ ಹೋಗಲು ಆಗುತ್ತಿರಲಿಲ್ಲ. ಕೊನೆಯ ಸಲ ಅವರ ಮುಖ ನೋಡಲು ಆಗುತ್ತಿರಲಿಲ್ಲ. ಮೊದಲೇ ಟ್ಯಾಕ್ಸಿಗಳು ಓಡಾಡುತ್ತಿಲ್ಲ’ ಎಂದು ಹೇಳಿದರು.

ADVERTISEMENT

‘ಕೆಲಸ ಉಳಿಸಿದ ಬಸ್‌’:‘ಬಸ್‌ ಸಂಚಾರದಿಂದ ನನ್ನ ಕೆಲಸ ಉಳಿದುಕೊಂಡಿದೆ. ಎರಡು ತಿಂಗಳಿಂದ ಮನೆಯಲ್ಲೇ ಇದ್ದೆ’ ಎಂದು ಕೊಪ್ಪಳದ ನಿವಾಸಿ ಪ್ರಶಾಂತ್‌ ತಮ್ಮ ಗೋಳು ತೋಡಿಕೊಂಡರು.

‘ನಾನು ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ನಿರ್ವಹಿಸುತ್ತೇನೆ. ಲಾಕ್‌ಡೌನ್‌ನಿಂದ ಕೊಪ್ಪಳದಲ್ಲೇ ಉಳಿದುಕೊಂಡಿದ್ದೆ. ಕೆಲಸವಿಲ್ಲದಿದ್ದರೂ ನನ್ನ ಕಂಪನಿಯವರು ಎರಡು ತಿಂಗಳ ವೇತನ ಕೊಟ್ಟಿದ್ದಾರೆ. ಆದರೆ, ಇನ್ನೂ ಕೆಲವು ದಿನಗಳ ಕಾಲ ಬಸ್‌ ಆರಂಭಗೊಳ್ಳದಿದ್ದರೆ ನನ್ನ ಕೆಲಸಕ್ಕೆ ಕಂಟಕ ಬರುತ್ತಿತ್ತು’ ಎಂದು ಹೇಳಿದರು.

‘ನಾನು ನಿತ್ಯ ಕೊಪ್ಪಳದಿಂದ ಬಳ್ಳಾರಿಗೆ ಹೋಗಿ ಕೆಲಸ ಮಾಡುತ್ತೇನೆ. ರೈಲಿನಲ್ಲಿ ಹೆಚ್ಚಾಗಿ ಓಡಾಡುತ್ತೇನೆ. ಆದರೆ, ಈಗ ರೈಲುಗಳು ಇಲ್ಲದಿರುವುದರಿಂದ ಬಸ್ಸಿನ ಮೂಲಕ ಹೋಗುತ್ತಿದ್ದೇನೆ. ಕೊಪ್ಪಳದಿಂದ ಬಳ್ಳಾರಿಗೆ ನೇರ ಬಸ್‌ ಇರಲಿಲ್ಲ. ಹೀಗಾಗಿ ನಗರಕ್ಕೆ ಬಂದು, ಇಲ್ಲಿಂದ ಬಳ್ಳಾರಿಗೆ ಮತ್ತೊಂದು ಬಸ್ಸಿನ ಮೂಲಕ ಹೋಗುತ್ತಿದ್ದೇನೆ. ಕೆಲಸಕ್ಕೆ ಹೋಗುತ್ತಿರುವುದಕ್ಕೆ ಬಹಳ ಸಮಾಧಾನವಾಗಿದೆ’ ಎಂದು ಭಾವುಕರಾಗಿ ನುಡಿದರು.

ವಿವಿಧ ಊರುಗಳಿಗೆ ಹೊರಡಲು ನಿಲ್ದಾಣಕ್ಕೆ ಬಂದಿದ್ದ ಜನ ಬಸ್‌ ಸಂಚಾರ ಆರಂಭಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಬಸ್‌ಗಳ ಸಂಚಾರಕ್ಕೂ ಅವರಿಗಿರುವ ನಂಟನ್ನೂ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿವರಿಸಿದರು.

ಹರಪನಹಳ್ಳಿಯ ವೆಂಕಟೇಶ್‌ ಪ್ರತಿಕ್ರಿಯಿಸಿ, ‘ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸುಗಳು ಜನಸಾಮಾನ್ಯರ ಜೀವನಾಡಿ ಇದ್ದಂತೆ. ಅವುಗಳ ಸಂಚಾರ ನಿಂತರೆ ಜನಸಾಮಾನ್ಯನ ಜೀವನ ಕೂಡ ನಿಂತಂತೆ. ಉಳ್ಳವರು ಟ್ಯಾಕ್ಸಿ, ಕಾರಿನಲ್ಲಿ ಹೋಗುತ್ತಾರೆ. ಇಲ್ಲದವರು ಇದ್ದಲ್ಲೇ ಇರಬೇಕಾಗುತ್ತದೆ’ ಎಂದರು.

‘ಎರಡು ತಿಂಗಳಿಂದ ಊರಿಗೆ ಹೋಗಲಾಗದೆ ನಗರದಲ್ಲೇ ಸಿಲುಕಿಕೊಂಡಿದ್ದೆ. ಈಗ ಅಳಿದುಳಿದ ಕೆಲಸ ಮುಗಿಸಿಕೊಳ್ಳಲು ನೆರವಾಗಿದೆ. ಸಾರಿಗೆ ಸಂಸ್ಥೆಯವರು ಬಹಳ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಸಂಚಾರ ಆರಂಭಿಸಿರುವುದು ಒಳ್ಳೆಯ ಕೆಲಸ. ಈ ಸ್ವಚ್ಛತೆ, ಸುರಕ್ಷತೆ ಕೊರೊನಾ ಸೋಂಕು ಹರಡುವುದು ನಿಂತ ನಂತರವೂ ಮುಂದುವರೆಸಬೇಕು’ ಎಂದು ಸಲಹೆ ನೀಡಿದರು.

*
ಬಸ್‌ ಸಂಚಾರ ಆರಂಭಗೊಂಡಿರುವುದರಿಂದ ದೈನಂದಿನ ಕೆಲಸಕ್ಕೆ ಹೋಗಲು ಬಹಳ ಅನುಕೂಲವಾಗಿದೆ. ಸಾರಿಗೆ ಸಂಸ್ಥೆ ಒಳ್ಳೆಯ ತೀರ್ಮಾನ ತೆಗೆದುಕೊಂಡಿದೆ.
–ಪ್ರಶಾಂತ್‌, ಖಾಸಗಿ ಕಂಪನಿಯ ವ್ಯವಸ್ಥಾಪಕ

*
ಸ್ವಚ್ಛತೆ, ಸುರಕ್ಷತೆಯೊಂದಿಗೆ ಬಸ್‌ ಸಂಚಾರ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಸಂಸ್ಥೆಗೆ ಸಾರ್ವಜನಿಕರು ಕೂಡ ಸಹಕಾರ ಕೊಡಬೇಕು.
–ಎಸ್‌. ರಾಮಚಂದ್ರ, ಹೊಸಪೇಟೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.