ADVERTISEMENT

ಕೂಡ್ಲಿಗಿ | ಬೀದಿನಾಯಿ ಹಾವಳಿ‌: ಜನರ ಆತಂಕ

ಎ.ಎಂ.ಸೋಮಶೇಖರಯ್ಯ
Published 1 ಡಿಸೆಂಬರ್ 2024, 5:05 IST
Last Updated 1 ಡಿಸೆಂಬರ್ 2024, 5:05 IST
ಕೂಡ್ಲಿಗಿ ಪಟ್ಟಣದ ವೆಂಕಟೇಶ್ವರ ದೇವಸ್ಥಾನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತ ನಿಂತ ಬೀದಿ ನಾಯಿಗಳು
ಕೂಡ್ಲಿಗಿ ಪಟ್ಟಣದ ವೆಂಕಟೇಶ್ವರ ದೇವಸ್ಥಾನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತ ನಿಂತ ಬೀದಿ ನಾಯಿಗಳು   

ಕೂಡ್ಲಿಗಿ: ಪಟ್ಟಣದ ಬಹುತೇಕ ಕಡೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನ ಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟವಾಗಿದೆ.

ರಸ್ತೆಯಲ್ಲಿ ಹೋಗುವ ವಾಹನಗಳನ್ನು ನಾಯಿಗಳು ಹಿಂಬಾಲಿಸಿಕೊಂಡು ಓಡಿ ಬರುತ್ತವೆ. ಇದರಿಂದ ಬೈಕ್ ಸವಾರರು ಬಿದ್ದ ಘಟನೆಗಳು ನಡೆದಿವೆ. ಪಟ್ಟಣದಲ್ಲಿ 20 ವಾರ್ಡ್‍ಗಳು ಇಲ್ಲಿದ್ದು ಬಹುತೇಕ ಕಡೆ ಇದೇ ಸಮಸ್ಯೆ ಇದೆ. ಈ ಕುರಿತು ಪಟ್ಟಣ ಪಂಚಾಯ್ತಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ದೂರು.

ಪಟ್ಟಣದ ಪ್ರಮುಖ ವೃತ್ತಗಳಾದ ಮದಕರಿ, ಅಂಬೇಡ್ಕರ್, ಪಾದಗಟ್ಟೆ, ಹೊಸಹಳ್ಳಿ ರಸ್ತೆ, ಗುಡೇಕೋಟೆ ರಸ್ತೆ ಸೇರಿದಂತೆ ಅನೇಕ ಕಡೆ ನಾಯಿಗಳ ಹಾವಳಿ ಹೆಚ್ಚಾಗಿದೆ. ಅತಿ ಕಿರಿದಾದ ಹಾಗೂ ಜನನಿಬಿಡ ರಸ್ತೆಗಳಲ್ಲಿ ಹಿಂಡುಹಿಂಡು ನಾಯಿಗಳು ಏಕಾಏಕಿ ರಸ್ತೆಗಳಿಗೆ ನುಗ್ಗುತ್ತವೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಗಾಬರಿ ಬಿದ್ದು, ಅಡ್ಡಾದಿಡ್ಡಿ ಓಡಬೇಕಾಗುತ್ತದೆ. ಪಟ್ಟಣದ ಅತ್ಯಂತ ಪ್ರಮುಖ ರಸ್ತೆಯಾದ ಕೊಟ್ಟೂರು ರಸ್ತೆಯಲ್ಲಿ ಎಲ್ಲೆಂದರಲ್ಲಿ ನಾಯಿಗಳು ಮಲಗಿರುತ್ತವೆ.

ADVERTISEMENT

ಸಾರಿಗೆ ಬಸ್ಸುಗಳು ಸೇರಿದಂತೆ ದೊಡ್ಡ ವಾಹನಗಳು ಸಹ ಸಂಚಾರ ಮಾಡಲು ಸಾಧ್ಯವಾಗದ ಸ್ಥಿತಿ ಇದೆ.
ಪಟ್ಟಣದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಅವುಗಳ ಸಂಖ್ಯೆ ತೀವ್ರವಾಗಿ ಬೆಳೆಯುತ್ತಿದ್ದು, ಬೀದಿನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಲು ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಅದರಂತೆ ಶೀಘ್ರದಲ್ಲಿ ನಾಯಿಗಳನ್ನು ಹಿಡಿಯುವ ಕಾರ್ಯ ಆರಂಭವಾಗಲಿದೆ.
–ಎಂ.ಕೆ.ಮುಗಳಿ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ
ಪಟ್ಟಣದಲ್ಲಿ ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇವುಗಳನ್ನು ನಿಯಂತ್ರಣ ಮಾಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
–ಎಚ್.ವೀರಣ್ಣ, ಜಿಲ್ಲಾ ಕಾರ್ಯದರ್ಶಿ ಸಿಪಿಐ ಪಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.