
ಹೂವಿನಹಡಗಲಿ ತಾಲ್ಲೂಕು ಕುರುವತ್ತಿ ಸುಕ್ಷೇತ್ರದಲ್ಲಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು
ಹೂವಿನಹಡಗಲಿ: ತಾಲ್ಲೂಕಿನ ಐತಿಹಾಸಿಕ ಸುಪ್ರಸಿದ್ಧ ಕುರುವತ್ತಿ ಸುಕ್ಷೇತ್ರದಲ್ಲಿ ಮಂಗಳವಾರ ಸಂಜೆ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸರ್ವಾಲಂಕೃತ ರಥಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸುತ್ತಿದ್ದಂತೆ ‘ಹರ ಹರ ಮಹಾದೇವ’ ಜಯಘೋಷ, ಹರ್ಷೋದ್ಘಾರದೊಂದಿಗೆ ರಥೋತ್ಸವ ಪ್ರಾರಂಭವಾಯಿತು. ರಥದ ಮುಂದೆ ಬಸವೇಶ್ವರ ಸ್ವಾಮಿಯ ಬೆಳ್ಳಿ ಉತ್ಸವ ಮೂರ್ತಿಯ ಮೆರವಣಿಗೆ ಸಾಗಿತು.
ಬೃಹತ್ ರುದ್ರಾಕ್ಷಿ ಮಾಲೆ, ಬಣ್ಣ ಬಣ್ಣದ ಪಟ, ತಳಿರು ತೋರಣಗಳಿಂದ ಸಿಂಗರಿಸಿದ್ದ ರಥ ಸಾಗಿ ಬರುತ್ತಿದ್ದಂತೆ ರಥ ಬೀದಿಯಲ್ಲಿ ನೆರೆದಿದ್ದ ಭಕ್ತ ಸಮೂಹ ಬಾಳೆಹಣ್ಣು, ಉತ್ತುತ್ತೆ ಎಸೆದು ಭಕ್ತಿ ಸಮರ್ಪಿಸಿದರು. ರಥವು ಪಾದಗಟ್ಟೆವರೆಗೂ ತೆರಳಿ ಮೂಲ ಸ್ಥಳಕ್ಕೆ ಹಿಂತಿರುಗಿತು. ಸಮಾಳ, ಡೋಲು, ಹಲಗೆ ಮಂಗಳ ವಾದ್ಯಗಳು ವಿಜೃಂಭಣೆಯ ರಥೋತ್ಸವಕ್ಕೆ ಮೆರುಗು ತಂದಿದ್ದವು. ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ರಥವನ್ನು ಎಳೆದು ಭಕ್ತಿಭಾವ ಮೆರೆದರು.
ಹೂವಿನಹಡಗಲಿ ತಾಲ್ಲೂಕು ಸೇರಿದಂತೆ ವಿಜಯನಗರ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಿಂದ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ತುಂಗಭದ್ರಾ ನದಿ ತೀರದ ಕುರುವತ್ತಿ ಸುಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಅಮವಾಸ್ಯೆಯಂದು ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಇಡೀ ದಿನ ಭಕ್ತರು ಸರದಿಯಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಸುಕ್ಷೇತ್ರದೆಲ್ಲೆಡೆ ‘ಬಸವಣ್ಣ ದೊರೆಯೇ ನಿನಗಾರು ಸರಿಯೇ ಸರಿ ಸರಿ ಎಂದವರ ಸೊಕ್ಕ ಮುರಿಯೇ’ ಎಂಬ ಸ್ವಾಮಿಯ ಬಹುಪರಾಕ್ ಮುಗಿಲು ಮುಟ್ಟಿತು.
ಹರಕೆ ತೀರಿಸಿದ ಭಕ್ತರು: ಕುರುವತ್ತಿ ಸುಕ್ಷೇತ್ರದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಅಪಾರ ಭಕ್ತರು ದೀಡು ನಮಸ್ಕಾರ ಹಾಕಿ ಹರಕೆ ತೀರಿಸಿದರು. ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಭಕ್ತಿಭಾವದಿಂದ ನಾನಾ ಹರಕೆಗಳನ್ನು ತೀರಿಸಿದರು. ರೈತರು ಎತ್ತಿನ ಮೆರವಣಿಗೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.