ADVERTISEMENT

ಹೊಸಪೇಟೆ: ಜಂಟಿ ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪಿ ಮುಷ್ಕರ

ಬಸ್ ಸಂಚಾರ ತಡೆದ ಪ್ರತಿಭಟನಾಕಾರರು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 4:35 IST
Last Updated 26 ನವೆಂಬರ್ 2020, 4:35 IST
ಪ್ರತಿಭಟನಾಕಾರರು ಹೊಸಪೇಟೆ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಬಸ್‌ಗಳ ಓಡಾಟ ತಡೆದಿದ್ದಾರೆ.
ಪ್ರತಿಭಟನಾಕಾರರು ಹೊಸಪೇಟೆ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಬಸ್‌ಗಳ ಓಡಾಟ ತಡೆದಿದ್ದಾರೆ.   

ಹೊಸಪೇಟೆ: ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ಕೊಟ್ಟಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎಂದಿನಂತೆ ಅಂಗಡಿ, ಹೋಟೆಲ್‌ಗಳು ಬಾಗಿಲು ತೆರೆದಿವೆ. ಜನರ ಓಡಾಟ ಸಹಜವಾಗಿದೆ. ದಿನಪತ್ರಿಕೆ, ಹಾಲು ಪೂರೈಕೆಯಾಗಿದೆ. ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸಾಮಾನ್ಯವಾಗಿತ್ತು.‌ಆದರೆ, ಪ್ರತಿಭಟನಾಕಾರರು ಇಲ್ಲಿನ ಕೇಂದ್ರ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಬಸ್‌ಗಳ ಓಡಾಟ ತಡೆದಿದ್ದಾರೆ.

ಸದ್ಯ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪರ ಊರುಗಳಿಗೆ ಹೋಗಬೇಕಿರುವ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದಾರೆ.

ADVERTISEMENT

ಆಟೊ ಯೂನಿಯನ್ ನವರು ಮುಷ್ಕರಕ್ಕೆ ಬೆಂಬಲ ಸೂಚಿಸಿ ಪಾಲ್ಗೊಂಡಿದ್ದಾರೆ. ಆಟೊಗಳಲ್ಲಿ ಧ್ವನಿವರ್ಧಕಗಳ ಮೂಲಕ ಮುಷ್ಕರ ಬೆಂಬಲಿಸುವಂತೆ ಕೋರುತ್ತಿದ್ದಾರೆ. ಕೆಲವೆಡೆ ಪ್ರತಿಭಟನಾ ನಿರತರು ಮಳಿಗೆಗಳನ್ನು ಮುಚ್ಚಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಿಪಿಐಎಂ, ಡಿವೈಎಫ್ ಐ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.

ಬಳ್ಳಾರಿ ಬಂದ್ ಇಲ್ಲ: ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಕರೆ ಕೊಟ್ಟಿರುವ ಬಳ್ಳಾರಿ ಬಂದ್ ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾವೊಂದು ಸಂಘಟನೆಯೂ ಬಂದ್ ಗೆ ಬೆಂಬಲ ಸೂಚಿಸಿಲ್ಲ. ಜಿಲ್ಲೆಯ ಪಶ್ಚಿಮ ತಾಲ್ಲೂಕು ಗಳಾದ ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹೂವಿನಹಡಗಲಿ, ಕೊಟ್ಟೂರಿನಲ್ಲೂ ಬಂದ್ ಗೆ ಸ್ಪಂದನೆ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.