ADVERTISEMENT

ತುಂಗಭದ್ರಾ ಒಳಹರಿವು ಭಾರಿ ಹೆಚ್ಚಳ; ಸುರಕ್ಷಿತ ಸ್ಥಳಕ್ಕೆ ತೆರಳಲು ಜನರಿಗೆ ಸೂಚನೆ

ಯಾವುದೇ ಕ್ಷಣ ನದಿಗೆ ನೀರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 16:43 IST
Last Updated 24 ಜುಲೈ 2021, 16:43 IST
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯ ತುಂಬುವ ಹಂತಕ್ಕೆ ಬಂದಿದೆ
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯ ತುಂಬುವ ಹಂತಕ್ಕೆ ಬಂದಿದೆ   

ಹೊಸಪೇಟೆ(ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಹೆಚ್ಚಳವಾಗಿದ್ದು, ಯಾವುದೇ ಕ್ಷಣದಲ್ಲಿ ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ಹರಿಸಬಹುದು. ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ಹೋಗಬೇಕೆಂದು ಜಲಾಶಯ ಆಡಳಿತ ಮಂಡಳಿ ಶನಿವಾರ ಸಂಜೆ ಮುನ್ಸೂಚನೆ ನೀಡಿದೆ.

ಯಾರೂ ಕೂಡ ಅನಗತ್ಯವಾಗಿ ನದಿ ಪಾತ್ರದಲ್ಲಿ ಓಡಾಡಬಾರದು. ಜಾನುವಾರುಗಳನ್ನು ಮೇಯಿಸಬಾರದು. ತೆಪ್ಪ, ಮೋಟಾರ್‌ ದೋಣಿ ತೆಗೆದುಕೊಂಡು ನದಿಗೆ ಇಳಿಯಬಾರದು ಎಂದು ತಿಳಿಸಲಾಗಿದೆ. ಆಯಾ ಪೊಲೀಸ್‌ ಠಾಣೆಗಳವರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ತುಂಗಭದ್ರಾ ಜಲಾಶಯಕ್ಕೆ ಸದ್ಯ 1,43,756 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಪ್ರಸಕ್ತ ವರ್ಷದಲ್ಲಿ ದಾಖಲಾಗಿರುವ ಅತಿ ಹೆಚ್ಚಿನ ಒಳಹರಿವು ಇದು. ಭಾನುವಾರ ಒಳಹರಿವು ಎರಡು ಲಕ್ಷಕ್ಕೂ ಅಧಿಕವಾಗುವ ಸಾಧ್ಯತೆ ಇದೆ. ಹೀಗಾಗಿಯೇ ಆಡಳಿತ ಮಂಡಳಿಯು ನದಿಗೆ ನೀರು ಹರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ADVERTISEMENT

133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 75.986 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 32 ಟಿಎಂಸಿ ಅಡಿ ಹೂಳು ತುಂಬಿಕೊಂಡಿರುವುದರಿಂದ ನೀರು ಸಂಗ್ರಹ ಸಾಮರ್ಥ್ಯ 101 ಟಿಎಂಸಿ ಅಡಿ ಇದೆ. ಇನ್ನು 24.50 ಟಿಎಂಸಿ ಅಡಿ ನೀರು ಸಂಗ್ರಹಗೊಂಡರೆ ಜಲಾಶಯ ಸಂಪೂರ್ಣ ತುಂಬಲಿದೆ. ಎರಡು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿರುವುದರಿಂದ ತಡಮಾಡದೆ ನದಿಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಒಳಹರಿವು ಕಡಿಮೆ ಇದ್ದದ್ದರಿಂದ 95 ಟಿಎಂಸಿ ಅಡಿ ನೀರು ಸಂಗ್ರಹವಾಗುವವರೆಗೆ ನೀರು ಹರಿಸಿರಲಿಲ್ಲ.

ಶನಿವಾರ ಬೆಳಿಗ್ಗೆ 75,008 ಕ್ಯುಸೆಕ್ ಒಳಹರಿವು ಇತ್ತು. ಮಧ್ಯಾಹ್ನ 1,22,891 ಕ್ಯುಸೆಕ್ ಒಳಹರಿವು ಹೆಚ್ಚಾಗಿತ್ತು. ಬಳಿಕ ಸಂಜೆಗೆ1,43,756 ಕ್ಯುಸೆಕ್ಹೆಚ್ಚಾಗಿತ್ತು.

ಮೋಡವಷ್ಟೇ ಮಳೆ ಇಲ್ಲ:ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಗೆ ಮಹಾಪೂರ ಬಂದಿದೆ. ಆದರೆ, ಜಿಲ್ಲೆಯಲ್ಲಿ ಮಳೆ ನಿಂತಿದೆ. ದಿನವಿಡೀ ಕಾರ್ಮೋಡ ಇರುತ್ತಿದೆ. ಆಗೊಮ್ಮೆ ಈಗೊಮ್ಮೆ ತುಂತುರು ಮಳೆಯಾಗುತ್ತಿದೆ. ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿಸಿಲಿತ್ತು. ಮಧ್ಯಾಹ್ನ ಏಕಾಏಕಿ ಬಿರುಸಿನ ಮಳೆಯಾಗಿದೆ.

ಜಲಾಶಯ ತುಂಬುವ ಹಂತಕ್ಕೆ ಬಂದಿರುವುದರಿಂದ ಶನಿವಾರ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಟ್ಟಿದ್ದರು. ವಾಹನ ನಿಲುಗಡೆ ಜಾಗ ವಾಹನಗಳಿಂದ ತುಂಬಿ ಹೋಗಿತ್ತು. ಎಲ್ಲೆಡೆ ಜನಜಾತ್ರೆ ಕಂಡು ಬಂತು. ಭಾನುವಾರ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.

‌ನೆರೆಯ ಕೊಪ್ಪಳ, ರಾಯಚೂರು, ಗದಗ, ದಾವಣಗೆರೆ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ಕಡೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.