ADVERTISEMENT

ಬಳ್ಳಾರಿ: 10 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು

ಐದು ದಿನಗಳ ಜಿಲ್ಲಾ ಪ್ರದಕ್ಷಿಣೆ ಬಗ್ಗೆ ಆಹಾರ ಆಯೋಗದ ಅಧ್ಯಕ್ಷ ಎಚ್‌. ಕೃಷ್ಣ ಮಾಹಿತಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 14:30 IST
Last Updated 21 ಫೆಬ್ರುವರಿ 2025, 14:30 IST
ಆಹಾರ ಆಯೋಗ ಅಧ್ಯಕ್ಷ ಎಚ್‌. ಕೃಷ್ಣ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಆಯೋಗದ ಅಧಿಕಾರಿಗಳು ಜತೆಗೆಇದ್ದರು. 
ಆಹಾರ ಆಯೋಗ ಅಧ್ಯಕ್ಷ ಎಚ್‌. ಕೃಷ್ಣ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಆಯೋಗದ ಅಧಿಕಾರಿಗಳು ಜತೆಗೆಇದ್ದರು.    

ಬಳ್ಳಾರಿ: ‘ಜಿಲ್ಲೆಯ ವಿವಿಧ ತಾಲ್ಲೂಕುಗಳ ನ್ಯಾಯಬೆಲೆ ಅಂಗಡಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದಾಗ ಹೆಚ್ಚುವರಿಯಾಗಿ ಪಡಿತರ ದಾಸ್ತಾನು ಕಂಡುಬಂದ ಒಟ್ಟು 10 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಗೊಳಿಸಿ, ಒಂದು ಗೋದಾಮಿನ ವ್ಯವಸ್ಥಾಪಕರನ್ನು ಅಮಾನತುಗೊಳಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹೇಳಿದರು.

ಶುಕ್ರವಾರ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಐದು ದಿನಗಳಿಂದ ಜಿಲ್ಲಾದ್ಯಂತ ಆಯೋಗದ ಸದಸ್ಯರು ಒಳಗೊಂಡಂತೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಆಹಾರ ನಾಗರಿಕ ಸರಬರಾಜು ನಿಗಮದ ಸಗಟು ಗೋದಾಮುಗಳಿಗೆ ಭೇಟಿ ನೀಡಿ ತಪಾಸಣೆ ಮಾಡಲಾಗಿದೆ. ಅಲ್ಲಿ ನೈರ್ಮಲ್ಯದ ಸಮಸ್ಯೆ ಇರುವುದು ಕಂಡು ಬಂದಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯ ವಿವಿಧ ತಾಲ್ಲೂಕುಗಳ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದಾಗ ಅಲ್ಲಿ ಯಾವುದೇ ರೀತಿಯ ಮಾಹಿತಿ ಫಲಕ ಪ್ರದರ್ಶಿಸುವುದು ಕಂಡುಬಂದಿಲ್ಲ. ಗ್ರಾಹಕರಿಗೆ ನ್ಯೂನತೆ ಕಂಡುಬಂದಲ್ಲಿ ಅವರು ಯಾರನ್ನು ವಿಚಾರಿಸಬೇಕು ಎಂಬುದರ ಕುರಿತ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಹೆಸರು ಹಾಗೂ ಸಂಪರ್ಕ ವಿವರ ಸಹಿತ ಮಾಹಿತಿ ಪ್ರದರ್ಶಿಸಬೇಕು’ ಎಂದು ಸೂಚಿಸಲಾಗಿದೆ ಎಂದರು.

ADVERTISEMENT

‘ನ್ಯಾಯಬೆಲೆ ಅಂಗಡಿಗಳಲ್ಲಿಯೂ ಸ್ವಚ್ಛತೆ ಮರೀಚಿಕೆ ಆಗಿದೆ. ಜಾಗೃತಿ ಸಮಿತಿ ಸದಸ್ಯರ ಪಟ್ಟಿ ಹಾಗೂ ಆಹಾರ ಆಯೋಗದ ಸದಸ್ಯರ ನಾಮಫಲಕ ಅಳವಡಿಸಿಲ್ಲ. ಜಾಗೃತಿ ಸಮಿತಿ ಕೊರತೆ, ಭೌತಿಕ ಹಾಗೂ ತಾಂತ್ರಿಕ ದಾಸ್ತಾನು ವ್ಯತ್ಯಾಸ ಕಂಡುಬಂದಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ  ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧ್ಯಕ್ಷರು ತಿಳಿಸಿದರು.

‘ಪಡಿತರ ಅಕ್ಕಿ ಸಂಗ್ರಹಿಸುವ ಉಗ್ರಾಣಗಳಲ್ಲಿ ಸರಿಯಾದ ವ್ಯವಸ್ಥೆಯಿಲ್ಲ. ಮಾನದಂಡ ಇಲ್ಲದೆ ಪರವಾನಗಿ ನೀಡಲಾಗಿದೆ. ತಿಂಗಳಲ್ಲಿ ನಾಲ್ಕು ದಿನ ಮಾತ್ರ ಪಡಿತರ ವಿತರಿಸುವುದು. ಮುಂಚಿತವಾಗಿ ಬೆರಳು ಗುರುತು ಹಾಕಿಸಿಕೊಳ್ಳುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯ ಹಲವು ವಸತಿ ಶಾಲೆಯಲ್ಲಿ ಮೂಲ ಸೌಕರ್ಯಗಳು ಇಲ್ಲ. ಗುಣಮಟ್ಟದ ಆಹಾರ ನೀಡುತ್ತಿಲ್ಲ. ಈ ಕುರಿತು ನಿಲಯ ಪಾಲಕರ ಅಮಾನತಿಗೆ ಶಿಫಾರಸ್ಸು ಮಾಡಲಾಗಿದೆ’ ಎಂದು ತಿಳಿಸಿದರು. 

ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಲಿಂಗರಾಜ್ ಕೋಟೆ, ರೋಹಿಣಿ ಪ್ರಿಯ, ಮಾರುತಿ ಎಂ.ದೊಡ್ಡಲಿಂಗಣ್ಣನವರ್, ಸುಮಂತ್ ರಾವ್ ಇದ್ದರು.

ಮಂಗಳವಾರ ಹಾಗೂ ಸರ್ಕಾರಿ ರಜೆ ಹೊರತುಪಡಿಸಿ ನ್ಯಾಯಬೆಲೆ ಅಂಗಡಿ ತೆರೆದಿರಬೇಕು. ಸಮರ್ಪಕವಾಗಿ ಪಡಿತರ ವಿತರಿಸಬೇಕು. ನಿರ್ಲಕ್ಷಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು
ಡಾ. ಎಚ್.ಕೃಷ್ಣ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.