ADVERTISEMENT

ಗ್ಯಾರಂಟಿಗಳಿಂದ ಜನರ ಆರ್ಥಿಕ ಸ್ಥಿತಿ ಸಬಲ: ಸಚಿವ ಬಿ.ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 16:03 IST
Last Updated 23 ಏಪ್ರಿಲ್ 2024, 16:03 IST
ಸಚಿವ ಬಿ. ನಾಗೇಂದ್ರ ಅವರು ಮಂಗಳವಾರ ಬಳ್ಳಾರಿ ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿ ತುಕಾರಾಂ ಅವರ ಪರವಾಗಿ ಮತಯಾಚಿಸಿದರು. 
ಸಚಿವ ಬಿ. ನಾಗೇಂದ್ರ ಅವರು ಮಂಗಳವಾರ ಬಳ್ಳಾರಿ ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿ ತುಕಾರಾಂ ಅವರ ಪರವಾಗಿ ಮತಯಾಚಿಸಿದರು.    

ಬಳ್ಳಾರಿ: ‘ಗೃಹಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು ₹2 ನೀಡಲಾಗುತ್ತಿದೆ. ಇದು ಮಹಿಳೆಯರ ಮತ್ತು ಕುಟುಂಬಗಳ ಸಬಲೀಕರಣಕ್ಕೆ ಕಾರಣವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ಬಳ್ಳಾರಿಯ ಕಾಂಗ್ರೆಸ್‌ ಅಭ್ಯರ್ಥಿ ಇ. ತುಕಾರಾಮ್‌ ಅವರ ಪರವಾಗಿ ನಗರದ 23ನೇ ವಾರ್ಡ್‌ನಲ್ಲಿ ಪ್ರಚಾರ ನಡೆಸಿದ ಅವರು, ಈ ವೇಳೆ ಮಾತನಾಡಿದರು. 

‘ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಬಿಜೆಪಿಯನ್ನು ಸೋಲಿಸಬೇಕು. ಈ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಿದರೆ ಜನರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ’ ಎಂದರು.

ADVERTISEMENT

‘ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷಕ್ಕೆ ₹1 ಲಕ್ಷ ನೀಡಲು ಮಹಾಲಕ್ಷ್ಮೀ ಯೋಜನೆ ಜಾರಿಗೆ ಬರಲಿದೆ. ಈ ಯೋಜನೆಯಿಂದ ಕುಟುಂಬಗಳು ಆರ್ಥಿಕವಾಗಿ ಸಬಲವಾಗಲಿವೆ‘ ಎಂದು ಅವರು ಹೇಳಿದರು.

‘ಇದು ಅತ್ಯಂತ ಮುಖ್ಯ ಚುನಾವಣೆ. ಕಾಂಗ್ರೆಸ್‌ ಗೆಲ್ಲಲೇಬೇಕು. ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ಮನವೊಲಿಸಬೇಕು‘ ಎಂದು ಅವರು ಮನವಿ ಮಾಡಿದರು. 

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ‘ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರಿಗೆ ಜನ ಮತ ನೀಡಬೇಕು. ತುಕಾರಾಂ ಅವರು ಬೇರೆ ಅಲ್ಲ, ನಾನು ಬೇರೆ ಅಲ್ಲ. ತುಕಾರಾಂ ಅವರಿಗೆ ಮತ ನೀಡಿದರೆ ನನಗೆ ಮತ ನೀಡಿದಂತೆ’ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎ.ಮಾನಯ್ಯ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಾನಂದಪ್ಪ, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಮಾಜಿ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯುಡು ಮತ್ತಿತರರು ಇದ್ದರು. 

ವಕೀಲರ ಭೇಟಿ

ಬಳ್ಳಾರಿ ನಗರದ ವಕೀಲರನ್ನು ಭೇಟಿಯಾದ ಕಾಂಗ್ರೆಸ್‌ ಅಭ್ಯರ್ಥಿ ತುಕಾರಾಂ ಮತ್ತು ಶಾಸಕ ಭರತ್‌ ರೆಡ್ಡಿ, ಅವರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು. ಈ ಲೋಕಸಭಾ ಚುನಾವಣೆಯಲ್ಲಿ ವಕೀಲರು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.