ADVERTISEMENT

ಶಿವಶರಣರಲ್ಲಿ ಮಾಚಿದೇವ ಅಗ್ರಗಣ್ಯರು: ತಹಶೀಲ್ದಾರ್‌ ಎಚ್‌. ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 8:44 IST
Last Updated 1 ಫೆಬ್ರುವರಿ 2021, 8:44 IST
ಹೊಸಪೇಟೆ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು
ಹೊಸಪೇಟೆ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು   

ಹೊಸಪೇಟೆ: ತಾಲ್ಲೂಕು ಆಡಳಿತದಿಂದ ಸೋಮವಾರ ನಗರದಲ್ಲಿ ವೀರಗಣಾಚಾರಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರು ಮಾಚಿದೇವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ‘ಹನ್ನೆರಡನೇ ಶತಮಾನದ ಶಿವಶರಣರಲ್ಲಿ ಮಾಚಿದೇವರು ಅಗ್ರಗಣ್ಯರು. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ್ದರು. ಅನೇಕ ವಚನಗಳನ್ನು ಬರೆದಿದ್ದಾರೆ’ ಎಂದರು.

‘ಕೋವಿಡ್–19 ಕಾರಣಕ್ಕಾಗಿ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ. ಯುವಜನರಿಗೆ ಜಯಂತಿಗಳ ಮೂಲಕ ಶರಣರು, ಮಹಾನ್‌ ಚೇತನಗಳ ಅನುಭಾವ ಪರಿಚಯವಾಗುತ್ತದೆ’ ಎಂದು ಹೇಳಿದರು.

ADVERTISEMENT

ಮಡಿವಾಳ ಸಮಾಜದ ಮುಖಂಡ ಅಪ್ಪಣ್ಣ ಮಾತನಾಡಿ, ‘ಮಡಿವಾಳ ಮಾಚಿದೇವರು ಕೆಟ್ಟ ಆಚರಣೆಗಳ ಕಳೆಯನ್ನು ಕಿತ್ತೊಗೆದು, ಸನ್ಮಾರ್ಗದಲ್ಲಿ ಜೀವನ ನಡೆಸಿದ್ದರು. ಸ್ವತಃ ಅವರು ಅನೇಕ ವಚನಗಳನ್ನು ರಚಿಸಿದ್ದರೂ ಕೂಡ ಯಾವುದೇ ಅಹಂ ಇಲ್ಲದೆ ಅವರ ಕೆಲಸ ಅವರೇ ಮಾಡಿಕೊಳ್ಳುತ್ತಿದ್ದರು. ಪರಾವಲಂಬಿಗಳಾಗದೇ ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವುದು ಅವರ ಆಶಯವಾಗಿತ್ತು. ಜೀವನದುದ್ದಕ್ಕೂ ಅವರು ಹಾಗೆಯೇ ಬದುಕಿದ್ದರು’ ಎಂದು ತಿಳಿಸಿದರು.

ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಎ.ರವಿಕುಮಾರ್, ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ರಾಜಕುಮಾರ್, ಮುಖಂಡರಾದ ಎಂ.ಶಾಮಪ್ಪ ಆಗೋಲಿ, ಪಂಪಣ್ಣ, ಪ್ರಹ್ಲಾದ್ ಸ್ವಾಮಿ,ಗಾಳೆಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.