ಕೂಡ್ಲಿಗಿ: ‘ಪಾರದರ್ಶಕ ಆಡಳಿತ, ಸ್ವಚ್ಚ ಪರಿಸರ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಗಾಂಧಿ ಕನಸನ್ನು ನನಸು ಮಾಡೋಣ’ ಎಂದು ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಹೇಳಿದರು.
ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯ ಕಾಂಗ್ರೆಸ್ ಅಧಿವೇಶನಕ್ಕ ನೂರು ವರ್ಷ ತುಂಬಿದ ನೆನಪಿಗಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕೂಡ್ಲಿಗಿ ಹಾಗೂ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1924ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಇತಿಹಾಸ ಸೃಷ್ಟಿಸಿತ್ತು.
ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವುದರ ಜೊತೆಗೆ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಪಕ್ಷದ ನೂರಾರು ಕಾರ್ಯಕರ್ತರು ಗಾಂಧಿ ಟೋಪಿ ಧರಿಸಿ, ರಾಷ್ಟ್ರಧ್ವಜ ಹಿಡಿದು ಗಾಂಧೀಜಿ ಚಿತಾಭಸ್ಮವಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಹೊರಟು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿದರು.
ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಕೆಪಿಸಿಸಿ ಕಾರ್ಯದರ್ಶಿ ಹಿರೇಕುಂಬಳಗುಂಟೆ ಉಮೇಶ್, ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ಪಟ್ಟಣ ಪಂಚಾಯ್ತಿ ಸದಸ್ಯರಾದ ಕೆ.ಈಶಪ್ಪ, ಬಸು ನಾಯ್ಕ್, ಪೂರ್ಯ ನಾಯ್ಕ್, ಮುಖಂಡರಾದ ಉದಯಜನ್ನು, ಡಾಣಿ ರಾಘವೇಂದ್ರ, ಡಿ.ಬಿ.ಚಿತ್ತಪ್ಪ, ಜಿ.ಆರ್.ಸಿದ್ದೇಶ್, ಬಡೇಲಡಕು ಕೊಟ್ರೇಶ್, ಬಣಕಾರ್ ವೀರಭದ್ರಪ್ಪ, ಜಿಲಾನ್ ಪಾಲ್ಗೊಂಡಿದ್ದರು.
ಮನಸೆಳೆದ ಗಾಂಧಿ ಸ್ಮೃತಿ ಗಾಯನ
ಕಂಪ್ಲಿ: ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಜಯಂತಿ ಅಂಗವಾಗಿ ಸ್ಥಳೀಯ ಭಾರತಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿ ಕೆ.ಎಂ.ರಕ್ಷಾ, ಎಚ್.ಎಂ.ಅಮೂಲ್ಯ, ಗುರುಪ್ರಸಾದ್, ಶ್ರದ್ಧಾ ಅವರು ಪ್ರಸ್ತುತಪಡಿಸಿದ ಗಾಂಧಿಸ್ಮೃತಿ ಗಾಯನ ಮತ್ತು ಭಜನೆ ಜನಮನಸೂರೆಗೊಂಡಿತು.
ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ಎಸ್.ಶಿವರಾಜ, ಗಾಂಧೀಜಿ ಮತ್ತು ಶಾಸ್ತ್ರಿಯವರ ಕುರಿತು ಮಾತನಾಡಿದರು. ರಾಮಸಾಗರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸುಗ್ಗೇನಹಳ್ಳಿ ರಮೇಶ ‘ಗಾಂಧಿ ತತ್ವ ಆದರ್ಶ’ ಕುರಿತು ಉಪನ್ಯಾಸ ನೀಡಿದರು.
ಬಳಿಕ ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಹಶೀಲ್ದಾರ್ ಕಚೇರಿ ರಸ್ತೆ, ಆವರಣವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು, ನಾಗರಿಕರು ಸ್ವಚ್ಛಗೊಳಿಸಿದರು. ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ಅಧಿಕಾರಿಗಳಾದ ಎಂ.ಆರ್.ಷಣ್ಮುಖ, ಆರ್.ಕೆ.ಶ್ರೀಕುಮಾರ್, ಕೆ.ದುರುಗಣ್ಣ, ಬಿ.ರವೀಂದ್ರಕುಮಾರ್, ಕೆ.ವಿರುಪಾಕ್ಷಿ, ಪಿ.ಬಸವರಾಜ ಸೇರಿ ಪೌರ ಕಾರ್ಮಿಕರು, ತಾಲ್ಲೂಕು ಮಟ್ಟದ ಅಧಿಕಾರಿಗಳು, ನಾಗರಿಕರು ಭಾಗವಹಿಸಿದ್ದರು.
‘ದೇಶ ಕಂಡ ಮಹಾನ್ ಚೇತನ’
ಕೊಟ್ಟೂರು: ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀಜಿ ನಮ್ಮ ದೇಶ ಕಂಡ ಮಹಾನ್ ಚೇತನಗಳು ಎಂದು ತಹಶೀಲ್ದಾರ್ ಜಿ.ಕೆ.ಅಮರೀಶ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಗಾಂಧೀಜಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಇವರು ಸರಳತೆ ಹಾಗೂ ಪ್ರಾಮಾಣಿಕತೆಯಿಂದ ಜೀವಿಸಿ ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ ಅನ್ನದಾನೇಶ್ ಬಿ.ಪತ್ತಾರ್, ಕಂದಾಯ ನಿರೀಕ್ಷಕ ಎಸ್.ಎಂ.ಹಾಲಸ್ವಾಮಿ ಶಿಕ್ಷಣ ಇಲಾಖೆ ಇಸಿಒ ನಿಂಗಪ್ಪ, ಅಣಜಿ ಸಿದ್ಧಲಿಂಗಪ್ಪ, ರವಿಕುಮಾರ್, ಸಂದೀಪ್, ನಾಗರತ್ನ, ಗಿರಿಜಾ ಬಣಕಾರ್, ಕೊಟ್ರೇಶ್, ಸಿ.ಮ.ಗುರುಬಸವರಾಜ್, ಮಂಗಳ ಅರಮನೆ, ಮಂಜಮ್ಮ, ಹನುಮಂತಪ್ಪ ಮುಂತಾದವರು ಪಾಲ್ಗೊಂಡಿದ್ದರು.
ಗಾಂಧಿ ಭಾರತಕ್ಕೆ ಕಾಂಗ್ರೆಸ್ ನಡಿಗೆ
ಹಗರಿಬೊಮ್ಮನಹಳ್ಳಿ: ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ ಆದರೆ ದೇಶವನ್ನು ಮಾರಾಟ ಮಾಡುತ್ತಿರುವುದು ಬಿಜೆಪಿ ಪಕ್ಷ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಉಪಾಧ್ಯಕ್ಷ ಅಕ್ಕಿ ತೋಟೇಶ್ ಹೇಳಿದರು.
ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ‘ಗಾಂಧಿ ನಡಿಗೆ ಗಾಂಧಿ ಭಾರತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿ ನಡೆಸಿದ ಅಹಿಂಸಾತ್ಮಕ ಅಸಹಕಾರ ಚಳುವಳಿ ಜಗತ್ತಿನಲ್ಲಿಯೇ ಮಾದರಿಯಾಗಿವೆ ಅವರು ಹಾಕಿಕೊಟ್ಟ ಮಾರ್ಗ ಇತರೆ ಅನೇಕ ದೇಶಗಳು ಅನುಸರಿಸುತ್ತಿವೆ ಯುದ್ಧವಲ್ಲದೆ ಶಾಂತಿಯಿಂದಲೂ ಗೆಲುವು ಪಡೆಯಬಹುದು ಎಂದು ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ಪಕ್ಷದ ಮುಖಂಡರಾದ ಎಂ.ಮರಿರಾಮಪ್ಪ ದಾರುಕೇಶ್ ಪತ್ರೇಶ್ ಹಿರೇಮಠ್ ಕೋರಿ ಗೋಣಿಬಸಪ್ಪ ಶಾಹೀರಾ ಬಾನು ಮಾತನಾಡಿದರು. ಯಶೋಧಾ ಮಂಜುನಾಥ ಎಚ್.ಪ್ರಭಾಕರ ಬಿ.ಮಂಜುನಾಥ ಸೊನ್ನದ ಗುರುಬಸವರಾಜ ಚಿಂತ್ರಪಳ್ಳಿ ದೇವೇಂದ್ರಪ್ಪ ಬಾಲಕೃಷ್ಣಬಾಬು ಮಂಜುನಾಥ ಜಿ.ಹನುಮಂತಪ್ಪ ವೀರೇಶ್ ರೋಗಾಣಿ ಪ್ರಕಾಶ್ ಕುರುಬರ ವೆಂಕಟೇಶ್ ಇದ್ದರು. ಕಾಂಗ್ರೆಸ್ ಕಾರ್ಯಕರ್ತರು 2 ಕಿ.ಮೀ. ಪಾದಯಾತ್ರೆ ನಡೆಸಿ ಅಹಿಂಸೆಯ ಪರ ಘೋಷಣೆ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.