ತೆಕ್ಕಲಕೋಟೆ: ನಿರಂತರ ಸುರಿಯುತ್ತಿರುವ ಮಳೆಯಿಂದ ಒಂದೆಡೆ ಮೆಕ್ಕೆಜೋಳ ನೆಲಕಚ್ಚಿದ್ದರೆ, ಮತ್ತೊಂದೆಡೆ ಕಟಾವು ಮಾಡಿದ್ದ ಫಸಲು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಕೊಯ್ಲು ಮಾಡಿರುವ ಮೆಕ್ಕೆಜೋಳ ನಿರಂತರ ಮಳೆ ಹಾಗೂ ತೇವಾಂಶ ಹೆಚ್ಚಳದಿಂದ ಮೊಳಕೆಯೊಡೆಯಲು ಆರಂಭಿಸಿದೆ. ಇದೇ ರೀತಿ ಮಳೆ ಸುರಿಯತೊಡಗಿದರೆ ಜೋಳವನ್ನು ಕಸವಾಗಿ ಎಸೆಯಬೇಕಾಗುತ್ತದೆ ಎಂದು ರೈತರು ಆತಂಕ ಪಡುತ್ತಿದ್ದಾರೆ.
ಸಿರುಗುಪ್ಪ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 2,680 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದ್ದು, 2.34 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳದ ಉತ್ಪಾದನೆ ನಿರೀಕ್ಷಿಸಲಾಗಿದೆ. ಎಕರೆಗೆ 30 ರಿಂದ 35 ಕ್ವಿಂಟಲ್‌ವರೆಗೆ ಇಳುವರಿ ಬರುತ್ತಿದ್ದು, ರೈತರಿಗೆ ಸಂತಸ ನೀಡಿದ್ದರೂ ದರ ಕುಸಿತ ಹಾಗೂ ಖರೀದಿ ಕೇಂದ್ರ ತೆರೆಯದ ಕಾರಣ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಕಳೆದ ವರ್ಷ ₹2,600-2,800 ರವರೆಗೆ ಪ್ರತಿ ಕ್ವಿಂಟಲ್‌ಗೆ ಮಾರಾಟವಾಗಿ ಲಾಭ ಗಳಿಸಿದ್ದರು. ಈ ವರ್ಷವೂ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆ ಉಂಟಾಗಿದೆ. ಬೆಲೆ ಕ್ವಿಂಟಲ್ ₹1800-₹2000 ಕ್ಕೆ ಕುಸಿದಿದೆ. ‘ಪಾಪ್ ಕಾರ್ನ್ ಮಾಡಲು ಬಳಕೆಯಾಗುವ ಮೆಕ್ಕೆಜೋಳದ ದರ ವಾರದ ಹಿಂದೆ ₹5,550 ಇತ್ತು. ಈಗ ₹4,300ಕ್ಕೆ ಕೇಳುತ್ತಿದ್ದಾರೆ‘ ಎಂದು ರೈತ ಬಸವರಾಜ ಬೇಸರ ವ್ಯಕ್ತಪಡಿಸಿದರು.
ಬೆಲೆ ಕುಸಿತದ ಸಂಕಷ್ಟದೊಂದಿಗೆ ರೈತರು ನಷ್ಟದ ಸುಳಿಗೆ ಸಿಲುಕುವಂತಾಗಿದೆ. ಮುಂಗಾರಿನಲ್ಲಿ ಮೆಕ್ಕೆ ಜೋಳ ಬಿತ್ತನೆ ಮಾಡಿದ್ದ ರೈತರು ಬೆಳೆ ಕಟಾವು ಮಾಡಿ, ಜೋಳ ಒಣಗಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಆದರೆ, ಮಳೆಯಿಂದ ಬೆಳೆ ರಕ್ಷಿಸಿಕೊಳ್ಳಲು ಕಣದಲ್ಲಿ ಟರ್ಪಾಲ್ ಹೊದಿಸಿ, ಮಳೆ ನಿಲ್ಲುವುದನ್ನು ಕಾಯುತ್ತಿದ್ದಾರೆ.
‘ಟಾರ್ಪಾಲ್ ಒಳಗಿರುವ ಜೋಳ ಮೊಳೆಕೆಯೊಡತೊಡಗಿದೆ. ಮಳೆ ಹಾಗೂ ತಂಪಾದ ವಾತಾವರಣ ಕಡಿಮೆ ಆಗದಿದ್ದರೆ ಜೋಳವನ್ನು ತಿಪ್ಪೆಗೆ ಎಸೆಯಬೇಕಾಗುತ್ತದೆ’ ಎನ್ನುತ್ತಾರೆ ಚಲುವಾದಿ ಭೀಮ, ಜಡೆ ಸಿದ್ದನಗೌಡ, ಕೆ. ವೀರೇಶ ರೈತರು.
ತಾಲ್ಲೂಕಿನಾದ್ಯಂತ - ಈ ಬಾರಿ ಮೆಣಸಿನಕಾಯಿ ಬೆಳೆಗೆ ಬದಲಾಗಿ ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆದಿದ್ದು ಉತ್ತಮ ಬೆಳೆ ಬರುವ ನಿರೀಕ್ಷೆ ಇದೆಮಂಜುನಾಥರೆಡ್ಡಿ ಸಿ. ಎ. ಕೃಷಿ ಸಹಾಯಕ ನಿರ್ದೇಶಕ ಸಿರುಗುಪ್ಪ ತಾಲ್ಲೂಕು
ಬಳ್ಳಾರಿಯ ಎಪಿಎಂಸಿಗೆ ಜೋಳ ಮಾರಾಟಕ್ಕೆ ಹೋದರೆ ಮನಸೋಇಚ್ಚೆ ದರ ಹೇಳುತ್ತಾರೆ. ರೈತರು ಬೆಳೆ ಮಾರಾಟ ಮಾಡಲು ಆಗದೆ ಇತ್ತ ವಾಪಸ್ ಬರಲು ಆಗದೆ ಪರಿತಪಿಸುವಂತಾಗಿದೆಬೆಳಗಲ್ ಮಲ್ಲಿಕಾರ್ಜುನ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.