ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಎರಡನೇ ಆಡಳಿತ ಮಂಡಳಿ ಸಭೆ ಶುಕ್ರವಾರ ಬಳ್ಳಾರಿಯ ಕೇಂದ್ರ ಕಚೇರಿಯಲ್ಲಿ ನಡೆಯಿತು. ಮೆಗಾ ಡೇರಿಗೆ ಮೀಸಲಿಟ್ಟಿರುವ ಸರ್ಕಾರಿ ಜಾಗ ಖರೀದಿಗೆ ಮುಂದಿನ ವಾರ ಹಣ ಪಾವತಿಸಲು ನಿರ್ಧಾರ ಕೈಗೊಳ್ಳಲಾಯಿತು.
ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ನೇತೃತ್ವದ ಸಭೆಯಲ್ಲಿ ಪದಾಧಿಕಾರಿಗಳು ಮತ್ತು ನಿರ್ದೇಶಕರು ಭಾಗವಹಿಸಿದ್ದರು.
ಮೆಗಾಡೇರಿಗಾಗಿ ಬಳ್ಳಾರಿ ಹೊರವಲಯದ ಕೊಳಗಲ್‌ನಲ್ಲಿ ಜಿಲ್ಲಾಡಳಿತ 15 ಎಕರೆ ಪ್ರದೇಶವನ್ನು ರಾಬಕೊವಿಗಾಗಿ ಮೀಸಲಿಟ್ಟಿದೆ. ಈ ಜಮೀನಿಗೆ ಹಣ ಪಾವತಿಸಲು ಹಿಂದಿನ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಜತೆಗೆ, ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರವು ಶುಕ್ರವಾರ ಅನುಮತಿ ಮಂಜೂರು ಮಾಡಿದ್ದು, ಮುಂದಿನ ವಾರವೇ ಹಣ ಪಾವತಿ ಮಾಡಿ ಜಮೀನು ಸಂಸ್ಥೆಯದ್ದಾಗಿಸಿಕೊಳ್ಳಲು ತೀರ್ಮಾನಿಸಲಾಯಿತು.
ಜತೆಗೆ, ಮೆಗಾ ಡೇರಿಗೆ ಹೊಸದಾಗಿ ಡಿಪಿಆರ್ (ವಿಸ್ತೃತ ಯೋಜನಾ ವರದಿ) ತಯಾರಿಸಲು ನಿರ್ಧರಿಸಲಾಯಿತು. ಡೇರಿಗೆ 2021ರಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಅದು ಅವಧಿ ಮೀರಿದೆ ಎಂಬ ಅಭಿಪ್ರಾಯ ಕೇಳಿ ಬಂದ ಕಾರಣ ಹೊಸದಾಗಿ ಡಿಪಿಆರ್ ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ.
ಸೆ. 17ರಂದು ನಡೆಯಲಿರುವ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಕ್ಕೆ ಹೊಸ ಯೋಜನೆಯೊಂದನ್ನು ತಯಾರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಬಕೊವಿ ಪ್ರಮುಖರಿಗೆ ಸೂಚಿಸಿದ್ದರು ಎನ್ನಲಾಗಿದೆ. ಅದರಂತೆ, ಏಕ ವಿನ್ಯಾಸದ ನಂದಿನಿ ಪಾರ್ಲರ್‌ಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈ ಮೂಲಕ ಉದ್ಯೋಗ ಸೃಷ್ಟಿಯ ಉದ್ದೇಶವನ್ನೂ ಹೊಂದಲಾಗಿದೆ. 30–35 ಹೊಸ ಪಾರ್ಲರ್‌ಗಳನ್ನು ಆರಂಭಿಸುವುದು, ಹಿಂದಿನ ಪಾರ್ಲರ್‌ಗಳಿಗೆ ಹೊಸ ರೂಪ ನೀಡುವುದು, ಬ್ರ್ಯಾಂಡಿಂಗ್ ಮಾಡುವ ಯೋಜನೆಯನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ.
ಡೇರಿಗಾಗಿ ಜಮೀನು ಖರೀದಿಸಲು ಸರ್ಕಾರ ಅನುಮತಿ ನೀಡಿದೆ. ಮಾರುಕಟ್ಟೆ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾಡಳಿತಕ್ಕೆ ಹಲವು ಪ್ರಸ್ತಾವ ಸಲ್ಲಿಸಲಾಗಿದೆ.– ಎನ್. ಸತ್ಯನಾರಾಯಣ, ಉಪಾಧ್ಯಕ್ಷ ರಾಬಕೊವಿ
ಡಿಸಿ ಸಿಇಒ ಜತೆಗೆ ಸಭೆ
ಕೇಂದ್ರ ಕಚೇರಿಯಲ್ಲಿನ ಸಭೆ ಬಳಿಕ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಜತೆಗೂ ಸಮಾಲೋಚನೆ ನಡೆಸಿದರು ಎಂದು ಗೊತ್ತಾಗಿದೆ.
‘ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)’ವು ‘ಗಣಿಗಾರಿಕೆ ಪರಿಣಾಮ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆ (ಸೆಪ್‌ಮಿಜ್)’ ಅಡಿಯಲ್ಲಿ ಬಳ್ಳಾರಿ ಮತ್ತು ಸಂಡೂರು ತಾಲ್ಲೂಕುಗಳಲ್ಲಿ 11 ಸಾವಿರ ಹಸು ವಿತರಿಸಲು ಮುಂದಾಗಿದ್ದು ಅದರ ಸಮರ್ಪಕ ಜಾರಿಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಹಾಲು ಉತ್ಪಾದಕರ ಸಂಘಗಳನ್ನು ಹೆಚ್ಚಿಸುವ ಗುರಿಯನ್ನು ರಾಬಕೊವಿ ಹೊಂದಿದೆ. ಅವುಗಳಿಗೆ ಮೂಲಸೌಕರ್ಯ ಒದಗಿಸಲು ಮತ್ತು ತಾಲೂಕು ಮಟ್ಟದಲ್ಲಿ ರಾಬಕೊವಿಯ ಉಪ ಕಚೇರಿ ಆರಂಭಿಸಲು ನೆರವಾಗುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು ಎಂದು ಗೊತ್ತಾಗಿದೆ. ಸರ್ಕಾರದ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ನಂದಿನಿ ಹಾಲಿನ ಉತ್ಪನ್ನ ಬಳಕೆಗೆ ಆದೇಶ ಹೊರಡಿಸಬೇಕು ಎಂದು ಜಿಲ್ಲಾಡಳಿತವನ್ನು ರಾಬಕೊವಿ ಮನವಿ ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಆದೇಶ ಮಾಡಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.