ADVERTISEMENT

ಸಾಲ ತೀರಿಸಲು ಮುಂಬೈಗೆ ಹೋಗಿದ್ದೆ, ಸಾಲ ಮಾಡಿ ಬಂದೆ: ವಲಸೆ ಕಾರ್ಮಿಕನ ಕಣ್ಣೀರ ಕಥೆ

ಮುಂಬೈನಿಂದ ವಾಪಸ್ಸಾದ ಕಾರ್ಮಿಕ ರಾಮು ಜಾಧವ ಕಣ್ಣೀರ ಕಥೆ

ತೀರ್ಥಕುಮಾರ
Published 20 ಮೇ 2020, 8:56 IST
Last Updated 20 ಮೇ 2020, 8:56 IST
ಮುಂಬೈನಿಂದ ಮರಳಿದ ಕಾರ್ಮಿಕ ಕಮಲಾಪುರ ತಾಲ್ಲೂಕಿನ ಗೋಗಿ (ಕೆ) ತಾಂಡಾದ ರಾಮು ಜಾಧವ್ ಪತ್ನಿ, ಮಕ್ಕಳೊಂದಿಗೆ ಕ್ವಾರಂಟೈನ್ ಮುಗಿಸಿ ಮಂಗಳವಾರ ಮನೆಗೆ ತೆರಳಿದರು
ಮುಂಬೈನಿಂದ ಮರಳಿದ ಕಾರ್ಮಿಕ ಕಮಲಾಪುರ ತಾಲ್ಲೂಕಿನ ಗೋಗಿ (ಕೆ) ತಾಂಡಾದ ರಾಮು ಜಾಧವ್ ಪತ್ನಿ, ಮಕ್ಕಳೊಂದಿಗೆ ಕ್ವಾರಂಟೈನ್ ಮುಗಿಸಿ ಮಂಗಳವಾರ ಮನೆಗೆ ತೆರಳಿದರು   

ಕಮಲಾಪುರ (ಕಲಬುರ್ಗಿ ಜಿಲ್ಲೆ): ಮಗನ ಆಸ್ಪತ್ರೆ ಖರ್ಚಿಗೆ ಮಾಡಿದ ಸಾಲ ತೀರಿಸಲು ಪತ್ನಿ, ಮೂವರು ಮಕ್ಕಳನ್ನು ಕಟ್ಟಿಕೊಂಡು ಮುಂಬೈಗೆ ದುಡಿಯಲು ಹೋಗಿದ್ದ ತಾಲ್ಲೂಕಿನ ಗೋಗಿ (ಕೆ) ಗ್ರಾಮದ ರಾಮು ಕಿಶನ್‌ ಜಾಧವ ಅವರು ಲಾಕ್ ಡೌನ್‌ನಿಂದ ಕಂಗಾಲಾಗಿ ₹ 5 ಸಾವಿರ ಸಾಲ ಪಡೆದು 100 ಕಿ.ಮೀ ನಡೆದು ತವರಿಗೆ ಮರಳಿದ್ದಾರೆ!

ತಮ್ಮನ್ನು ಭೇಟಿಯಾದ ‘ಪ್ರಜಾವಾಣಿ’ ಪ್ರತಿನಿಧಿ ಮುಂದೆ ತಮ್ಮ ವ್ಯಥೆಯನ್ನು ಹಂಚಿಕೊಂಡಿರುವ ರಾಮು, ‘ನನಗೆ ನಾಲ್ವರು ಪುತ್ರಿಯರು, ಒಬ್ಬ ಪುತ್ರ ಸೇರಿ ಐವರು ಮಕ್ಕಳು. 8 ತಿಂಗಳ ಹಿಂದೆ ಮಗನಿಗೆ ಟೈಫಾಯ್ಡ್‌, ಮಲೇರಿಯಾದಿಂದ ಆರೋಗ್ಯ ತೀವ್ರ ಹದಗೆಟ್ಟಿತ್ತು. ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. 3 ತಿಂಗಳವರೆಗೆ ಆಸ್ಪತ್ರೆಗಳಿಗೆ ತಿರುಗಿ ₹ 2 ಲಕ್ಷ ಸಾಲ ಮಾಡಿ ಮಗನನ್ನು ಉಳಿಸಿಕೊಂಡೆ. ಆಸ್ತಿ ಮಾರಿ ಸಾಲ ತೀರಿಸಬೇಕೆಂದರೆ ಒಂದು ಗುಂಟೆ ಜಮೀನೂ ಇಲ್ಲ. ತಾಂಡಾದಲ್ಲಿನ ಒಂದು ಕೋಣೆಯ ಮನೆಯನ್ನು ಮಾರೋಣವೆಂದರೆ ₹ 20 ಸಾವಿರಕ್ಕೂ ಕೇಳೋರಿಲ್ಲ. ನಿರಂತರ ಕೆಲಸವಿಲ್ಲ. ಸಾಲ ಮುಟ್ಟಿಸುವುದಿರಲಿ ಅನ್ನಕ್ಕೂ ಗತಿ ಇಲ್ಲದಂತಾಗಿತ್ತು. ಆಪತ್ತಿನ ಕಾಲದಲ್ಲಿ ಸಾಲ ಕೊಟ್ಟೋರಿಗೆ ಮರಳಿಸಿದಿದ್ದರೆ ಭಗವಂತ ಮೆಚ್ಚುವುದಿಲ್ಲ. ಇಬ್ಬರು ಮಕ್ಕಳನ್ನು ತಾಯಿ ಬಳಿ ಊರಲ್ಲೇ ಇರಿಸಿ ಮಾರ್ಚ್ ಮೊದಲ ವಾರದಲ್ಲಿ ಪತ್ನಿ ಮೂವರು ಮಕ್ಕಳೊಂದಿಗೆ ಮುಂಬೈಗೆ ತೆರಳಿದೆ’.

‘ಮುಂಬೈನ ಬೋರಿವಿಲಿ ಸಮೀಪದ ಧೈಸರ್‌ನಲ್ಲಿ ನೆಲೆ ನಿಂತು ಪತ್ನಿ, ನಾನು ಸೇರಿ ಒಂದು ವಾರ ದುಡಿದೆವು. ನಂತರ ಕೊರೊನಾ ಹಾವಳಿ ಆರಂಭವಾಯಿತು. ಕೆಲಸ ಅಷ್ಟಕ್ಕಷ್ಟೇ. ಮತ್ತೊಂದು ವಾರ ಕಳೆಯುತ್ತಿದ್ದಂತೆ ಮಾರ್ಚ್ 22ರಂದು ಲಾಕ್ ಡೌನ್ ಘೋಷಿಸಲಾಯಿತು. ಕೆಲಸ ಸಂಪೂರ್ಣ ಸ್ಥಗಿತಗೊಂಡಿತು. ಊರಿಂದ ಕೊಂಡೊಯ್ದ ಜೋಳ, ಬೇಳೆ ತಿಂಗಳವರೆಗಾಯಿತು. ಕೈಯಲ್ಲಿದ್ದ ಮೂರ್ನಾಲ್ಕು ಸಾವಿರ ಖರ್ಚಾಯಿತು. ಮತ್ತೆ ₹ 10 ಸಾವಿರ ಸಾಲ ಮಾಡಿದೆ. ಅದೂ ಖರ್ಚಾಯಿತು. ಇನ್ನು ಊರಿಗೆ ಮರಳಲೇಬೇಕೆಂದು ಅಲ್ಲೆಯೇ ನೆಲೆಸಿರುವ ಸಂಬಂಧಿಗಳ ಹತ್ತಿರ ಕೈಯೊಡ್ಡಿದೆ. ಮತ್ತೆ ₹ 5 ಸಾವಿರ ಸಾಲ ಪಡೆದೆ. ಮೇ 3ರಂದು ಅಲ್ಲಿಂದ ಕಾಲ್ಕಿತ್ತು ಲಾರಿ ಹತ್ತಿ ಉಮರ್ಗಾಕ್ಕೆ ಬಂದಿಳಿದೆ’ ಎಂದು ತಾವು ಪಟ್ಟ ಕಷ್ಟವನ್ನು ವಿವರಿಸಿದರು.

ADVERTISEMENT

‘ಅಲ್ಲಿಂದ ಗಂಟು, ಮೂಟೆ ಮೂರು ಮಕ್ಕಳ ಹೊತ್ತು ನೂರು ಕಿ.ಮೀ ನಡೆದು ಮೇ 6ರಂದು ಕಮಲಾಪುರಕ್ಕೆ ಬಂದೆ. ಹೀಗೆ ಮಂಬೈಗೆ ಹೋಗಿ ಬರುವುದರಲ್ಲಿ ಮತ್ತೆ ₹ 20 ಸಾವಿರ ಸಾಲ ಹೆಚ್ಚಿತು. ಈಗ ಜೀವನ ನಿರ್ವಹಣೆಗೆ ಬಿಡಿಗಾಸೂ ಇಲ್ಲ, ಏನು ಮಾಡುವುದು’ ಎಂದು ಹಣೆಗೆ ಕೈ ಹಚ್ಚಿಕೊಂಡರು.

‘ಮೇ 6ರಂದು ಬಂದ ನಮಗೆ ಕ್ವಾರಂಟೈನ್‌ ಮಾಡಿದರು. ಮಂಗಳವಾರಕ್ಕೆ 14 ದಿನ ಕಳೆಯಿತು. ಈಗ ಬಿಡುಗಡೆ ಮಾಡಿದ್ದಾರೆ. 5 ಮಕ್ಕಳು, ಪತ್ನಿಯನ್ನು ಕಟ್ಟಿಕೊಂಡು ಮುಂದೇನು ಮಾಡಬೇಕೆಂದು ದಿಕ್ಕೇ ತೋಚುತ್ತಿಲ್ಲ. ಸಾಲ ತೀರಿಸುವುದು ಹೇಗೆಂಬ ಚಿಂತೆ ಕಾಡತೊಡಗಿದೆ’ ಎಂದು ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.