ಸಂಡೂರು: ತಾಲ್ಲೂಕಿನ ಐತಿಹಾಸಿಕ ದೇವಗಿರಿಹಳ್ಳಿ (ಕಮ್ಮತ್ತೂರು ಗ್ರಾಮ)ಯು ಗಣಿ ಕಂಪನಿಗಳ ಅಬ್ಬರಕ್ಕೆ ನಲುಗಿಹೋಗಿದ್ದು, ಗ್ರಾಮದ ಜನರ ಬದುಕು ಮೂರಾಬಟ್ಟೆಯಾಗಿದೆ.
ಕಮ್ಮತ್ತೂರು ಗ್ರಾಮ 1937ರಲ್ಲಿ ಇನಾಂ ಗ್ರಾಮವಾಗಿದ್ದು ಸುಮಾರು ಒಂಭತ್ತು ದಶಕಗಳ ಇತಿಹಾಸದ ಪಾರಂಪರಿಕ ತಾಣ. ಈ ಗ್ರಾಮದ ಎಡ ಭಾಗಕ್ಕೆ ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‍ಎಂಡಿಸಿ)’, ಬಲ ಭಾಗಕ್ಕೆ ‘ಸ್ಮಯೋರ್’ ಗಣಿಗಳಿವೆ. ಗಣಿ ಕಂಪನಿಗಳ ಮಧ್ಯದಲ್ಲಿ ಸಿಲುಕಿ, ಸ್ಪೋಟಕಗಳ ಶಬ್ದ, ಗಣಿ ಲಾರಿಗಳ ಅಬ್ಬರ, ಕೆಂಪು ಧೂಳಿನ ಮಜ್ಜನದಿಂದ ನಲುಗಿರುವ ಇಲ್ಲಿನ ಜನರು ಜಿಲ್ಲಾಡಳಿತ, ಜನ ಪ್ರತಿನಿಧಿಗಳ ವಿರುದ್ಧ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
ಕುಮಾರಸ್ವಾಮಿ ಮೀಸಲು ಅರಣ್ಯದ ಸ್ವಾಮಿಮಲೈ ಬ್ಲಾಕ್‍ನಲ್ಲಿರುವ ಈ ಹಳ್ಳಿ, ಸಮುದ್ರ ಮಟ್ಟದಿಂದ ಸುಮಾರು 3400 ಅಡಿ ಎತ್ತರದಲ್ಲಿ ನೆಲೆಯಾಗಿದೆ. ಆದಿವಾಸಿ, ಬುಡಕಟ್ಟು ಜನಾಂಗದವರೇ ಹೆಚ್ಚು ವಾಸವಿದ್ದು, ದಶಕಗಳಿಂದಲೂ ಸಂಡೂರಿನ ಆರಾಧ್ಯ ದೈವ ಕುಮಾರಸ್ವಾಮಿಗೆ ನಡೆದುಕೊಂಡು ಬರುತ್ತಿದ್ದಾರೆ.
ಗ್ರಾಮವು ದೇವಗಿರಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿದ್ದು, ಸುಮಾರು 500 ಮನೆಗಳಿವೆ. ಅಂದಾಜು 2,000 ಜನಸಂಖ್ಯೆ ಇದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಮುಸ್ಲಿಮರು ಈ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಗಣಿ ಕಂಪನಿಗಳಲ್ಲಿ ಕಾರ್ಮಿಕರಾಗಿ ಕಷ್ಟಕರ ಜೀವನ ಸಾಗಿಸುತ್ತಿದ್ದಾರೆ.
ಸರ್ಕಾರವು ಸಂಡೂರು ತಾಲ್ಲೂಕಿನ 14 ಇನಾಂ ಗ್ರಾಮಗಳನ್ನು ಸರ್ವೇ ಸೆಟೆಲ್‍ಮೆಂಟ್ ಮಾಡಿ ಆ ಎಲ್ಲ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಿದೆ. ಆದರೆ ಪುರತಾನ ಗ್ರಾಮವಾದರೂ, ಕಮ್ಮತ್ತೂರಿನ ಸರ್ವೇ ಸೆಟೆಲ್‍ಮೆಂಟ್ ನಡೆದಿಲ್ಲ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.
ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿ, ಎನ್‍ಎಂಡಿಸಿ ಕಂಪನಿಯಿಂದ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಎರಡು ಘಟಕಗಳು ನಿರ್ವಹಣೆ ಕೊರತೆಯಿಂದ ನಲುಗಿವೆ. ಪಂಚಾಯಿತಿಯಿಂದ ಎರಡು ಕೊಳವೆ ಬಾವಿಗಳನ್ನು ಕೊರೆಸಿದ್ದು ಅತಿಯಾದ ಗಣಿಗಾರಿಕೆಯಿಂದ ಅವುಗಳಲ್ಲಿ ಅಂತರ್ಜಲ ಕುಸಿದಿದೆ. ಗ್ರಾಮದ ಜನರು ‘ನಿಸರ್ಗದತ್ತ ಕಾಟೇಶನ್’ ಕೊಳದಲ್ಲಿನ ಸಿಹಿ ನೀರನ್ನೆ ಅವಲಂಬಿಸಿದ್ದಾರೆ.
ಸುತ್ತಲೂ ಇರುವ ಗಣಿಗಳಲ್ಲಿ ನಿತ್ಯ ಎರಡು, ಮೂರು ಬಾರಿ ಸ್ಪೋಟಕಗಳನ್ನು ಬಳಸಲಾಗುತ್ತದೆ. ಸ್ಫೋಟವಾದಾಗ ಮನೆಯಲ್ಲಿನ ಮಕ್ಕಳು ಚಿರುವುದು, ಮನೆಗಳು ನಡುಗುವುದು, ಮನೆಯಲ್ಲಿನ ಪಾತ್ರೆ ಸಾಮಾನುಗಳು ಕೆಳಗೆ ಬಿಳುವುದು ಸಾಮಾನ್ಯ.
ನ್ಯಾ. ಬಿ.ಸುದರ್ಶನರೆಡ್ಡಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿದ್ದ ‘ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮದ(ಕೆಎಂಇಆರ್‌ಸಿ) ಮೇಲುಸ್ತುವಾರಿ ಸಭೆಯಲ್ಲಿ ಗಣಿಪೀಡಿತ ಕಮ್ಮತ್ತೂರು ಗ್ರಾಮಕ್ಕೆ ಯಾವುದೇ ಯೋಜನೆಗಳನ್ನು ಪ್ರಸ್ತಾಪಿಸದೇ ಇರುವುದು, ಗಣಿ ಬಾಧಿತ ಪ್ರದೇಶಗಳಿಗಿಂತಲೂ ಹೆಚ್ಚಾಗಿ ನಗರ ಪ್ರದೇಶಗಳಿಗೆ ಅನುದಾನ ಹಂಚಿಕೆ ಮಾಡಿ, ಡಿಎಂಎಫ್ ನಿಯಮಗಳನ್ನು ಗಾಳಿಗೆ ತೂರಿ ಅನ್ಯಾಯವೆಸಗಿದ ಸಿಇಸಿ, ಕೆಎಂಇಆರ್‌ಸಿಯ ನಡೆಯ ಬಗ್ಗೆ ಜನರು ಆಕ್ರೋಶಗೊಂಡಿದ್ದಾರೆ.
ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರವನ್ನು ತೆರೆಯಲಾಗಿದೆ. ಆದರೆ, ಕೇವಲ ಒಬ್ಬ ಮಹಿಳಾ ಸಿಬ್ಬಂದಿ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಆ ಸಿಬ್ಬಂದಿಯೂ ಹೆರಿಗೆಗಾಗಿ ರಜೆಯ ಮೇಲೆ ತೆರಳಿದ್ದರಿಂದ ಕೇಂದ್ರಕ್ಕೆ ಸುಮಾರು ಮೂರು ತಿಂಗಳಿಂದ ಬೀಗ ಬಿದ್ದಿದೆ. ಗಣಿ ಬಾಧಿತ ಜನರ, ಗಣಿ ಕಾರ್ಮಿಕರ ಉತ್ತಮ ಆರೋಗ್ಯಕ್ಕಾಗಿ ಸರ್ಕಾರವು ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಾಪನೆ, ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ ಜನ ಒತ್ತಾಯಿಸಿದ್ದಾರೆ.
ಗ್ರಾಮದ ಹೊರ ವಲಯದಲ್ಲಿ ಪ್ರಮುಖ ರಸ್ತೆಯಲ್ಲಿ ಗಣಿ ಲಾರಿಗಳ ನಿರಂತರ ಸಂಚಾರದಿಂದ ಬೈಕ್ ಸೇರಿದಂತೆ ಇತರೆ ವಾಹನಗಳ ಸವಾರರು ಜೀವ ಭಯದಲ್ಲೆ ಸಂಚರಿಸುತ್ತಿದ್ದಾರೆ.
ಹಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು, ಅದರಲ್ಲಿ 1-5ನೇ ತರಗತಿಯವರೆಗಿನ ಸುಮಾರು 80 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ ಒಬ್ಬರು ಮಾತ್ರ ಖಾಯಂ ಶಿಕ್ಷಕರಿದ್ದು, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಯು ಒಟ್ಟು ಏಳು ಕೊಠಡಿಗಳನ್ನು ಹೊಂದಿದ್ದು, ಮೂರು ಶಾಲಾ ಕೊಠಡಿಗಳು ಉದ್ಘಾಟನೆಗೆ ಮುನ್ನ ಕಳಪೆ ಕಾಮಗಾರಿಯಿಂದ ಪಾಳು ಬಿದ್ದಿವೆ. ಎರಡು ಕೊಠಡಿಗಳು ಮಳೆ ಬಂದರೆ ಸೋರುತ್ತವೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನ, ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನ ಸೇರಿದಂತೆ ರಾಜ್ಯ, ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಲಭ್ಯವಿದ್ದರೂ, ಕಮ್ಮತೂರು ಗ್ರಾಮ ಮಾತ್ರ ಬಡವಾಗಿದೆ. ಜನರ ಬದುಕು ಶೋಚನೀಯ ಸ್ಥಿತಿಯಲ್ಲಿದೆ.
ಇವರೇನಂತಾರೆ?
ಸುಪ್ರಿಂಕೋರ್ಟ್ ಆದೇಶದಂತೆ ಡಿಎಂಎಫ್, ಸಿಇಸಿ, ಕೆಎಂಇಆರ್‌ಸಿ ನಿಗಮಗಳು ಗಣಿ ಬಾಧಿತ ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡದೇ ಗಣಿ ಕಂಪನಿಗಳ ಪರ ಇರುವುದು ಶೋಚನೀಯಎನ್.ಎಚ್.ಮಲ್ಲಿಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರು ಕಮ್ಮತ್ತೂರು ಗ್ರಾಮ
ಶತಮಾನಗಳ ಇತಿಹಾಸದ ಊರಿದು. ನಮ್ಮ ಜಮೀನುಗಳನ್ನು ಗಣಿ ಕಂಪನಿಗಳು ಕಸಿದಿವೆ. ಜಿಲ್ಲಾಡಳಿತ ನಮ್ಮ ಗ್ರಾಮದ ಸರ್ವೇ ಸೆಟೆಲ್‍ಮೆಂಟ್ ಮಾಡದೇ ಇರುವುದು ಸರಿಯಲ್ಲ.ಮಾಳಾಗಿ ಪಿ.ಪೆನ್ನಪ್ಪ, ಕಮ್ಮತ್ತೂರು ಗ್ರಾಮದ ರೈತ ಮುಖಂಡ
ಗಣಿಗಳಲ್ಲಿ ಸಿಡಿ ಮದ್ದಿನ ಸ್ಫೋಟದಿಂದ ಜನರು ಜೀವ ಭಯದಲ್ಲೆ ವಾಸಿಸುತ್ತಿದ್ದಾರೆ. ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ. ದುರಸ್ತಿ ಮಾಡುವುದೇ ಕಾಯಕವಾಗಿದೆ.ತಿಮ್ಮಪ್ಪ, ಕಮ್ಮತ್ತೂರು ಗ್ರಾಮದ ನಿವಾಸಿ
ಕಮ್ಮತ್ತೂರಿನಲ್ಲಿ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶೀಘ್ರವೇ ದುರಸ್ತಿ ಮಾಡಲಾಗುವುದು. ಶಿಕ್ಷಣ, ಆರೋಗ್ಯ, ರಸ್ತೆ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲಾಗುವುದು.ಮಡಗಿನ ಬಸಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಡೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.