ADVERTISEMENT

ಹಂಪಿ ಉತ್ಸವ: ವಿಜಯ್‌ ಪ್ರಕಾಶ್‌ ಹಾಡಿನ ಮೋಡಿ ಡಾನ್ಸ್‌ ಮಾಡಿದ ಸಚಿವ, ಸಂಸದ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 16:41 IST
Last Updated 4 ಮಾರ್ಚ್ 2019, 16:41 IST
ಹಂಪಿ ಉತ್ಸವದ ಪ್ರಯುಕ್ತ ಭಾನುವಾರ ತಡರಾತ್ರಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಸಚಿವ ಈ. ತುಕಾರಾಂ, ಸಂಸದ ವಿ.ಎಸ್. ಉಗ್ರಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ಹಾಗೂ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಡಾನ್ಸ್‌ ಮಾಡಿ ಗಮನ ಸೆಳೆದರು–ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಹಂಪಿ ಉತ್ಸವದ ಪ್ರಯುಕ್ತ ಭಾನುವಾರ ತಡರಾತ್ರಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಸಚಿವ ಈ. ತುಕಾರಾಂ, ಸಂಸದ ವಿ.ಎಸ್. ಉಗ್ರಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ಹಾಗೂ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಡಾನ್ಸ್‌ ಮಾಡಿ ಗಮನ ಸೆಳೆದರು–ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಹೊಸಪೇಟೆ: ಗಾಯಕ ವಿಜಯ್‌ ಪ್ರಕಾಶ್‌ ಅವರು ಭಾನುವಾರ ತಡರಾತ್ರಿ ಹಂಪಿ ಎದುರು ಬಸವಣ್ಣ ಮಂಟಪ ವೇದಿಕೆಯಲ್ಲಿ ನಡೆಸಿಕೊಟ್ಟ ಸಂಗೀತ ಗಾಯನಕ್ಕೆ ಮಾರುಹೋದ ಜನಪ್ರತಿನಿಧಿಗಳು, ಅಧಿಕಾರಿಗಳು ಮೈಮರೆತು ಡಾನ್ಸ್‌ ಮಾಡಿದರು.

ನೆರೆದಿದ್ದ ಸಹಸ್ರಾರು ಜನರ ಒತ್ತಾಯಕ್ಕೆ ಮಣಿದು ವಿಜಯ್‌ ಪ್ರಕಾಶ್‌ ಅವರು ‘ಸ್ಲಂ ಡಾಗ್‌ ಮಿಲೇನಿಯರ್‌’ ಚಿತ್ರದ ‘ಜೈ ಹೋ..’ ಹಾಡು ಹಾಡಿದರು. ಗಣ್ಯರ ಗ್ಯಾಲರಿಯಲ್ಲಿ ಕೂತಿದ್ದ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಅವರು ಕೋಟ್‌ ತೆಗೆದು, ಬೀಸುತ್ತ ಹೆಜ್ಜೆ ಹಾಕಿದರು. ನಂತರ ಅವರಿಗೆ ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಸಾಥ್‌ ನೀಡಿದರು.

ವೇದಿಕೆಯಿಂದ ಕೆಳಗಿಳಿದು ಬಂದ ವಿಜಯ್‌ ಪ್ರಕಾಶ್‌ ಕೂಡ ಅವರೊಂದಿಗೆ ಕೆಲಕಾಲ ಹೆಜ್ಜೆ ಹಾಕಿದರು. ನಂತರ ಅವರನ್ನು ವೇದಿಕೆಗೆ ಕರೆದೊಯ್ದರು. ಅಲ್ಲಿ ಸಹ ಸಚಿವರು, ಜಿಲ್ಲಾಧಿಕಾರಿ ಡಾನ್ಸ್‌ ಮಾಡಿದರು. ನಂತರ ಸಂಸದ ವಿ.ಎಸ್‌. ಉಗ್ರಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ಕೂಡ ವೇದಿಕೆ ಮೇಲೇರಿ ಅವರಿಗೆ ಸಾಥ್‌ ನೀಡಿದರು. ಅದನ್ನು ನೋಡಿದ ಜನ ಸಹ ಅವರಿದ್ದ ಸ್ಥಳದಲ್ಲಿಯೇ ಹುಚ್ಚೆದ್ದು ಕುಣಿದರು. ಈ ವೇಳೆ ಜನರ ಹರ್ಷೊದ್ಘಾರ, ಕೇಕೆ ಮುಗಿಲು ಮುಟ್ಟಿತ್ತು. ಅದರೊಂದಿಗೆ ಎರಡು ದಿನಗಳ ಅದ್ದೂರಿ ಹಂಪಿ ಉತ್ಸವಕ್ಕೆ ವರ್ಣರಂಜಿತ ತೆರೆ ಬಿತ್ತು.

ADVERTISEMENT

ಇದೇ ಜಿಲ್ಲಾಧಿಕಾರಿ ಹಿಂದಿನ ಉತ್ಸವದಲ್ಲಿ ವಿದೇಶಿ ರಾಯಭಾರಿಗಳೊಂದಿಗೆ ಹೆಜ್ಜೆ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.