ತೆಕ್ಕಲಕೋಟೆ (ಸಿರುಗುಪ್ಪ): ಸಿರುಗುಪ್ಪ ತಾಲ್ಲೂಕಿನ ಶಾನವಾಸಪುರ ಗ್ರಾಮದ ರೈತ ಮಹಿಳೆ ಶಂಶಾದ್ ಬೇಗಂ ಮಿಶ್ರ ಬೇಸಾಯದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.
10 ಎಕರೆ ಭೂಮಿಯಲ್ಲಿ ಎರಡು ಕೊಳವೆ ಬಾವಿಗಳ ಮೂಲಕ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ಶಂಶಾದ್ ಬೇಗಂ, 8 ಎಕರೆಯಲ್ಲಿ ಅಂಜೂರ, 2 ಎಕರೆಯಲ್ಲಿ ಬೀನ್ಸ್ ಬೆಳೆದಿದ್ದಾರೆ. ಅಲ್ಲದೆ ತೋಟದಲ್ಲಿ ನುಗ್ಗೆ ಗಿಡಗಳು, ಹುಣಸೆ ಮರಗಳು, ಲೆಮನ್ ಗ್ರಾಸ್ (ಸುಗಂಧಿತ ಟೀ ಹುಲ್ಲು) ಮತ್ತು ಸೀತಾಫಲ ಬೆಳೆಗಳನ್ನು ಬೆಳೆಯುತ್ತಾರೆ. ಅಲ್ಲದೆ, ಅರಣ್ಯ ಬೆಳೆಗಳಾದ 160 ತೆಂಗಿನ ಮರ, ಮಾವು–15, ರಕ್ತಚಂದನ–38, ಬಿದಿರು–60, ಸೀತಾಫಲ–600, ಹಲಸು 15, ಸಿಲ್ವರ್ ವುಡ್–80, ತೇಗ–30, ಶ್ರೀಗಂಧ–15, ಡ್ರ್ಯಾಗನ್ ಫ್ರೂಟ್– 200 ಮತ್ತು ಜಂಬೂ ನೇರಳೆ 300 ಗಿಡಗಳನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಎರಡು ಎಕರೆಯ ಬೀನ್ಸ್ ಬೆಳೆಯ ಮೊದಲ ಕಟಾವಿನಲ್ಲಿ ಆರು ಕ್ವಿಂಟಲ್ ಇಳುವರಿ ಪಡೆದು ಖರ್ಚು ಕಳೆದ ₹30 ಸಾವಿರ ಲಾಭ ಗಳಿಸಿದ್ದಾರೆ. ಮುಂದಿನ ಬೆಳೆಯಲ್ಲಿ ಸಂಪೂರ್ಣ ಲಾಭ ಸಿಗಲಿದೆ’ ಎನ್ನುತ್ತಾರೆ ಶಂಶಾದ್ ಬೇಗಂ.
‘ಅಂಜೂರ ಬೆಳೆಯಲ್ಲಿ ನಿತ್ಯ ಸರಾಸರಿ 15 ಬಾಕ್ಸ್ ಇಳುವರಿ ಬರುತ್ತಿದೆ. ಒಂದು ಬಾಕ್ಸ್ ₹400ರಂತೆ ದಿನಕ್ಕೆ ₹6 ಸಾವಿರ ಆದಾಯ ಬರುತ್ತಿದೆ. ದಿನಕ್ಕೆ ₹2ರಿಂದ ₹2.5 ಸಾವಿರ ಖರ್ಚು ಇದೆ’ ಎಂದು ಶಂಶಾದ್ ಬೇಗಂ ಅವರ ಮಗ ಎಂ. ಅಹ್ಮದ್ ಬಾಷ ಹೇಳುತ್ತಾರೆ.
‘ಜಮೀನು ಸುತ್ತಲು ಬಿದಿರು, ಮಹಾಗನಿ, ತೆಂಗು, ಹುಣಸೆ, ಬೇವು, ನುಗ್ಗೆ ಹಾಗೂ ಡ್ರ್ಯಾಗನ್ ಫ್ರೂಟ್ ಗಿಡಗಳನ್ನು, ಅಲಸಂದೆಯನ್ನು ಜೈವಿಕ ಬೇಲಿಯಾಗಿ ಬೆಳೆಸಿದ್ದಾರೆ. ಇವುಗಳಿಂದ ಫಸಲನ್ನು ಎಪಿಎಂಸಿಗೆ ಮಾರಾಟ ಮಾಡಿ ನಿತ್ಯ ₹3–4 ಸಾವಿರ ಹಣ ಗಳಿಸುತ್ತಿದ್ದಾರೆ. ವಿದ್ಯುತ್ ಸಂಪರ್ಕ ದೊರೆತಲ್ಲಿ ಮುಂದೆ ಕೋಳಿ ಮತ್ತು ಕುರಿ ಸಾಕಣೆಗೆ ಒತ್ತು ನೀಡಲಾಗುವುದು’ ಎಂದರು.
'ಒಂದೇ ಬೆಳೆ ನೆಚ್ಚಿಕೊಳ್ಳುವುದಕ್ಕಿಂತ, ಮಿಶ್ರ ಬೇಸಾಯ ಉತ್ತಮ. ಒಂದು ಬೆಳೆ ಕೈಕೊಟ್ಟರೂ, ಮತ್ತೊಂದು ಕೈಹಿಡಿಯುತ್ತದೆ. ಇದರಲ್ಲಿ ಯಶಸ್ಸು ಕಂಡಿದ್ದೇವೆ. ಎಲ್ಲರೂ ಇದನ್ನು ಅನುಸರಿಸುವುದು ಒಳಿತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2024-25ನೇ ಸಾಲಿನ ಸಿರುಗುಪ್ಪ ತಾಲ್ಲೂಕಿನ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಶಂಶಾದ್ ಬೇಗಂ ಭಾಜನರಾಗಿದ್ದಾರೆ.
ಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ಅಡಿಯಲ್ಲಿ ಸೀಬೆ ಸೀತಾಫಲ ಜೀವಸಾರ ಘಟಕ ಸ್ಥಾಪನೆ ಹಾಗೂ ತೋಟಕ್ಕೆ ಬೇಲಿ ರೂಪದ ಅರಣ್ಯ ಗಿಡಗಳನ್ನು ನೀಡಲಾಗಿದೆ. ಇವರು ಯೋಜನೆ ಸದ್ಬಳಕೆ ಮಾಡಿಕೊಂಡಿದ್ದಾರೆಖಾದರ್ ಬಾಷ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.