
ಕಂಪ್ಲಿ: 'ಕ್ಷೇತ್ರದ ಜನರ ಆಶೀರ್ವಾದ ಸದಾ ನನ್ನ ಮೇಲಿರುವುದರಿಂದ ಮುಂದಿನ ಚುನಾವಣೆಯಲ್ಲಿ ಅವರೇ ನನ್ನ ಭವಿಷ್ಯ ನಿರ್ಧರಿಸಲಿದ್ದಾರೆ' ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.
ಪಟ್ಟಣದಲ್ಲಿ ₹ 3ಕೋಟಿ ವೆಚ್ಚದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಮತ್ತು ₹ 15ಲಕ್ಷ ವೆಚ್ಚದ ಚರಂಡಿ ನಿರ್ಮಾಣಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬಳ್ಳಾರಿಯಲ್ಲಿ ಈಚೆಗೆ ನಡೆದ ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ಶಾಸಕ ನಾಗೇಂದ್ರ ಅವರೊಂದಿಗೆ ನಡೆದ ಸುದ್ದಿಗೋಷ್ಠಿಯಲ್ಲಿ ನಾನು ಆ ಘಟನೆ ಕುರಿತಂತೆ ಸಂಕ್ಷಿಪ್ತ ಮಾಹಿತಿ ಹಂಚಿಕೊಂಡಿದ್ದನ್ನು ಗಂಗಾವತಿ ಶಾಸಕ ಜಿ. ಜನಾರ್ಧನರೆಡ್ಡಿ ಗುರಿಯಾಗಿಸಿಕೊಂಡು ಮುಂದಿನ ಚುನಾವಣೆಯಲ್ಲಿ ನನ್ನನ್ನು ನೋಡಿಕೊಳ್ಳುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಮೇಲಿನಂತೆ ಸಮರ್ಥಿಸಿಕೊಂಡರು. ಹಿರಿಯರಾದ ರೆಡ್ಡಿಯವರ ಗತ್ತಿನ ಮಾತಿಗೆ ಹೆಚ್ವಿನ ವಿವರಣೆ ಕೊಡಲಾರೆ. ನನ್ನ ಬಗ್ಗೆ ಏನೆಲ್ಲ ಮಾತಾಡುವ ಅಧಿಕಾರ ಅವರಿಗಿದೆ ಎಂದರು.
ಪಟ್ಟಣದಲ್ಲಿ ಬಿಇಒ ಕಚೇರಿ ಆರಂಭಕ್ಕೆ ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರಿದ್ದು, ಪ್ರಾರಂಭಕ್ಕೆ ಭರವಸೆ ನೀಡಿದ್ದಾರೆ. ಕಂಪ್ಲಿ ತುಂಗಭದ್ರಾ ನದಿ ಸೇತುವೆ ನಿರ್ಮಾಣಕ್ಕೆ ಅಗತ್ಯ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಕೆಲವೇ ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ. ಕಂಪ್ಲಿ ಮತ್ತು ಕುರುಗೋಡು ಉತ್ಸವಕ್ಕೆ ಸರ್ಕಾರ ಅನುದಾನ ಮಂಜೂರು ಮಾಡುತ್ತಿದ್ದಂತೆ ಅಚರಣೆಗೆ ಕ್ರಮ ವಹಿಸುತ್ತೇನೆ. ಸರ್ಕಾರಿ ಡಿಪ್ಲೊಮಾ ಕಾಲೇಜು ಬಳಿ ಬಸ್ ತಂಗುದಾಣ ನಿರ್ಮಿಸಲಾಗುವುದು. ಕಂಪ್ಲಿಯಿಂದ 3ಕಿ.ಮೀ ಒಳಗೆ ಭೂಮಿ ಲಭ್ಯವಾಗದ ಕಾರಣ ಬಸ್ ಡಿಪೋ ಆರಂಭಕ್ಕೆ ಅಡಚಣೆಯಾಗಿದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ನಿಲಯ ಪಾಲಕರಾದ ವಿರುಪಾಕ್ಷಪ್ಪ, ಗಾದಿಲಿಂಗಪ್ಪ, ಪ್ರಮುಖರಾದ ಭಟ್ಟ ಪ್ರಸಾದ್, ಎಂ. ಸುಧೀರ್, ಕರಿಬಸವನಗೌಡ, ರಾಜು ಜೈನ್, ಗದ್ಗಿ ವಿರುಪಾಕ್ಷಿ, ಕೆ. ಮೆಹಬೂಬ್, ಅಕ್ಕಿ ಜಿಲಾನ್, ಎಂ. ಗೋಪಾಲ್, ಕೆ. ಮನೋಹರ, ಎಂ. ಗಾಳಿಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.