ADVERTISEMENT

ಹೊಸಪೇಟೆ: ಬೆಳಿಗ್ಗೆ ಜನಜಾತ್ರೆ, ಮಧ್ಯಾಹ್ನ ಸ್ತಬ್ಧ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 10:45 IST
Last Updated 7 ಜೂನ್ 2021, 10:45 IST
ಲಾಕ್‌ಡೌನ್‌ನಿಂದ ಸಡಿಲಿಕೆ ನೀಡಿದ್ದರಿಂದ ಸೋಮವಾರ ಜನ ಹೊಸಪೇಟೆಯ ತಾಲ್ಲೂಕು ಕ್ರೀಡಾಂಗಣದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದರು
ಲಾಕ್‌ಡೌನ್‌ನಿಂದ ಸಡಿಲಿಕೆ ನೀಡಿದ್ದರಿಂದ ಸೋಮವಾರ ಜನ ಹೊಸಪೇಟೆಯ ತಾಲ್ಲೂಕು ಕ್ರೀಡಾಂಗಣದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದರು   

ಹೊಸಪೇಟೆ: ಐದು ದಿನಗಳ ಸಂಪೂರ್ಣ ಲಾಕ್‌ಡೌನ್‌ನಿಂದ ಸೋಮವಾರ ಸಡಿಲಿಕೆ ನೀಡಿದ್ದರಿಂದ ಜನ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಸೋಮವಾರ, ಮಂಗಳವಾರ ಬೆಳಿಗ್ಗೆ ಆರರಿಂದ ಮಧ್ಯಾಹ್ನ 12ರ ವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಜಿಲ್ಲಾಡಳಿತವು ಕಾಲಾವಕಾಶ ನೀಡಿದೆ. ಹಿಂದಿನ ದಿನವೇ ಸಡಿಲಿಕೆಯ ವಿಷಯ ಗೊತ್ತಾಗಿದ್ದರಿಂದ ಸಾರ್ವಜನಿಕರು ಸೋಮವಾರ ಬೆಳ್ಳಂಬೆಳಿಗ್ಗೆ ರಸ್ತೆಗೆ ಇಳಿದಿದ್ದರು.

ನಗರದ ತಾಲ್ಲೂಕು ಕ್ರೀಡಾಂಗಣ, ಟಿ.ಬಿ. ಡ್ಯಾಂ ರಸ್ತೆ, ದೀಪಾಯನ ಶಾಲೆ ಮೈದಾನ, ಬಳ್ಳಾರಿ ರಸ್ತೆ, ಹಂಪಿ ರಸ್ತೆಯ ತಾತ್ಕಾಲಿಕ ಮಾರುಕಟ್ಟೆಗಳಿಗೆ ದಾಂಗುಡಿ ಇಟ್ಟ ಜನ ಹಣ್ಣು, ತರಕಾರಿ ಖರೀದಿಸಿದರು. ನಗರದ ಸೂಪರ್‌ ಮಾರ್ಕೆಟ್‌ ಸೇರಿದಂತೆ ಇತರೆ ದಿನಸಿ ಅಂಗಡಿಗಳ ಎದುರು ಉದ್ದನೆಯ ಸಾಲು ಕಂಡು ಬಂತು. ಪೊಲೀಸರು ಎಲ್ಲೆಡೆ ಗಸ್ತು ತಿರುಗಿ, ಜನ ಗುಂಪುಗೂಡದಂತೆ ನೋಡಿಕೊಂಡರು. ಆದರೆ, ಅವರು ಅಲ್ಲಿಂದ ನಿರ್ಗಮಿಸುತ್ತಿದ್ದಂತೆ ಗುಂಪು ಗುಂಪಾಗಿ ನಿಂತು ವಸ್ತುಗಳನ್ನು ಖರೀದಿಸಿದರು. ಅಂತರ ಮರೀಚಿಕೆಯಾಗಿತ್ತು. ಆದರೆ, ಬಹುತೇಕರು ಮಾಸ್ಕ್‌ ಧರಿಸಿಕೊಂಡು ಓಡಾಡುತ್ತಿದ್ದರು.

ADVERTISEMENT

ಅಗತ್ಯ ವಸ್ತು ಖರೀದಿಗೆ ಕೊಟ್ಟ ಕಾಲಾವಕಾಶವನ್ನು ಕೆಲವರು ಬಂಡವಾಳ ಮಾಡಿಕೊಂಡು, ಸ್ನೇಹಿತರನ್ನು ಭೇಟಿಯಾದರು. ಅಲ್ಲಲ್ಲಿ ರಸ್ತೆಬದಿಯಲ್ಲಿ ನಿಂತು ಮಾತನಾಡುತ್ತ ಕಾಲ ಕಳೆದರು. ಮತ್ತೆ ಕೆಲವರು ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗಿ ಬಂದರು.

ಮಧ್ಯಾಹ್ನ 12 ಗಂಟೆಗೆ ಕೆಲವೇ ನಿಮಿಷಗಳು ಉಳಿಯುತ್ತಿದ್ದಂತೆ ಸಾರ್ವಜನಿಕರು ಮಾರುಕಟ್ಟೆ, ದಿನಸಿ ಮಳಿಗೆಗಳಿಂದ ಮನೆಗಳತ್ತ ಮುಖ ಮಾಡಿದರು. ಅಲ್ಲಲ್ಲಿ ರಸ್ತೆಬದಿ ನಿಂತಿದ್ದವರನ್ನು ಪೊಲೀಸರು ತಾಕೀತು ಮಾಡಿ ಕಳುಹಿಸಿದರು. ಬಳಿಕ ಎಂದಿನಂತೆ ನಗರದಲ್ಲಿ ಸಾರ್ವಜನಿಕ ಸಂಚಾರ ಸಂಪೂರ್ಣ ನಿಂತು ಹೋಯಿತು. ಈ ಹಿಂದಿನಂತೆ ನಗರ ಸಂಪೂರ್ಣ ಮೌನಕ್ಕೆ ಜಾರಿತು.

ಐದು ದಿನಗಳ ನಂತರ ಬ್ಯಾಂಕುಗಳು ಬಾಗಿಲು ತೆರೆದಿದ್ದರಿಂದ ಅಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬಂತು. ಪಿಂಚಣಿದಾರರು, ರೈತರು ಸಾಲಿನಲ್ಲಿ ನಿಂತು ಹಣ ಬಿಡಿಸಿಕೊಂಡರು. ತಿಂಗಳ ಆರಂಭದಲ್ಲೇ ಬ್ಯಾಂಕುಗಳನ್ನು ಬಂದ್‌ ಮಾಡಿದ್ದರಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.