ADVERTISEMENT

ಮರಿಯಮ್ಮನಹಳ್ಳಿ : ರಾಷ್ಟ್ರೀಯ ಹೆದ್ದಾರಿ-50ರ ಕಥೆ ವ್ಯಥೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:39 IST
Last Updated 15 ಸೆಪ್ಟೆಂಬರ್ 2025, 5:39 IST
ಮರಿಯಮ್ಮನಹಳ್ಳಿ ಸಮೀಪದ ದೇವಲಾಪುರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-50ರ ಮಧ್ಯದಲ್ಲಿ ‘ಅಪಘಾತ ಪೀಡಿತ ಪ್ರದೇಶ, ನಿಧಾನವಾಗಿ ಚಾಲನೆ ಮಾಡಿ’ ಎಂಬ ಫಲಕ ಅಳವಡಿಸಲಾಗಿದೆ
ಮರಿಯಮ್ಮನಹಳ್ಳಿ ಸಮೀಪದ ದೇವಲಾಪುರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-50ರ ಮಧ್ಯದಲ್ಲಿ ‘ಅಪಘಾತ ಪೀಡಿತ ಪ್ರದೇಶ, ನಿಧಾನವಾಗಿ ಚಾಲನೆ ಮಾಡಿ’ ಎಂಬ ಫಲಕ ಅಳವಡಿಸಲಾಗಿದೆ   

ಮರಿಯಮ್ಮನಹಳ್ಳಿ: ಹೊಸಪೇಟೆ ತಾಲ್ಲೂಕಿನ ಪಟ್ಟಣದ ಹೋಬಳಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-50 ಸಮಸ್ಯೆಗಳ ಸರಮಾಲೆಯ ಗೂಡಾಗಿದೆ.

ಹೊಸಪೇಟೆಯಿಂದ ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ-50 ಸುಮಾರು 120ಕಿ.ಮೀ ಉದ್ದವಿದ್ದು, ತಾಲ್ಲೂಕಿನ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 30ಕಿ.ಮೀನಷ್ಟು ಹಾದು ಹೋಗಿದೆ.

ವ್ಯಾಸನಕೆರೆ ರೈಲು ನಿಲ್ದಾಣದ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರಿನ ಬಳಿಯ ಟನಲ್ (ಸುರಂಗ ಮಾರ್ಗ)ನಿಂದ ಆರಂಭವಾಗಿ ಪಟ್ಟಣ ಸಮೀಪದ 114-ಡಣಾಪುರ ಗ್ರಾಮದ ಬಿಎಂಎಂ ಕಾರ್ಖಾನೆ ಬಳಿಯ ಸೇತುವೆವರೆಗೆ ಮಾತ್ರ ಕೇವಲ 12ಕಿ.ಮೀ ದೂರ ಮಾತ್ರ ಹೆದ್ದಾರಿ ಬದಿ ಸರ್ವಿಸ್ ರಸ್ತೆ ಮಾತ್ರ ಮಾಡಲಾಗಿದೆ.

ADVERTISEMENT

ಆದರೆ ಅಲ್ಲಿಂದ ತಾಲ್ಲೂಕಿನ ಗಡಿಯವರೆಗೆ ಎಲ್ಲಿಯೂ ಸರ್ವಿಸ್ ರಸ್ತೆ ಇಲ್ಲದಿರುವುದರಿಂದ ವಿವಿಧ ಗ್ರಾಮಗಳ ಕ್ರಾಸ್ ಬಳಿ ಹಲವಾರು ಅಪಘಾತಗಳು ನಡೆದಿದ್ದು, ಅನೇಕ ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಅಪಘಾತಗಳಿಗೆ ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳು ಸಹ ಬಲಿಯಾಗಿದ್ದು, ಒಂದು ರೀತಿಯಲ್ಲಿ ಹೋಬಳಿ ವ್ಯಾಪ್ತಿಯ ಹೆದ್ದಾರಿ ಅಪಘಾತವಲಯವಾಗಿ ಮಾರ್ಪಟ್ಟಿದೆ.

ಹೊಸಪೇಟೆಯಿಂದ ಪಟ್ಟಣಕ್ಕೆ ಬರುವ ಮಾರ್ಗ ಮಧ್ಯೆದಲ್ಲಿ ಕೆಲ ಗ್ರಾಮಗಳಿಗೆ ಮಾತ್ರ ಸರ್ವಿಸ್ ರಸ್ತೆ ಇದ್ದರೆ, ಪಟ್ಟಣದ ಅಂಡರ್ ಪಾಸ್, 114-ಡಣಾಪುರ ಗ್ರಾಮ, ದೇವಲಾಪುರ ಕ್ರಾಸ್, ಡಣಾಯಕನಕೆರೆ ಕ್ರಾಸ್, ಗೊಲ್ಲರಹಳ್ಳಿ ಕ್ರಾಸ್, ಹಾರುವನಹಳ್ಳಿ ಕ್ರಾಸ್, ಚಿಲಕನಹಟ್ಟಿ, ತಿಮ್ಮಲಾಪುರ, ತೆಲಗುಬಾಳು, ಪೋತಲಕಟ್ಟೆ ಕ್ರಾಸ್ ಬಳಿ ಸರಿಯಾದ ಪರ್ಯಾಯ ಸರ್ವಿಸ್ ರಸ್ತೆ ಹಾಗೂ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.

114-ಡಣಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ತುಂಗಭದ್ರ ಜಲಾಶಯದ ಹಿನ್ನೀರಿಗೆ ಸೇರುವ ಹಳ್ಳಕ್ಕೆ ಸುಮಾರು 500ಮೀಟರ್‌ನಷ್ಟು ದೂರ ಒಂದೇ ಸೇತುವೆ ನಿರ್ಮಿಸಿರುವುದರಿಂದ, ಹನುಮನಹಳ್ಳಿಯಿಂದ ಏಕಾಏಕಿ ವಾಹನ ಸವಾರರು ಸೇತುವೆ ಮೇಲೆ ದ್ವಿಪಥದಿಂದ ಏಕಮುಖದ ಸಂಚಾರಕ್ಕೆ ಹೊರಳಬೇಕಾದ್ದರಿಂದ ತೊಂದರೆ ಅನುಭವಿಸುವಂತಾಗಿದೆ.

ಸೇತುವೆ ಬಳಿ ಬರುವ ಬಿಎಂಎಂ ಕಾರ್ಖಾನೆಗೆ ನಿತ್ಯ ನೂರಾರು ಕಾರ್ಮಿಕರು, ಹಲವಾರು ವಾಹನಗಳು ಓಡಾಡುವುದರಿಂದ ಸರಿಯಾದ ಮೇಲ್ಸುವೆ, ಸರ್ವಿಸ್ ರಸ್ತೆ ಇಲ್ಲದಿರುವುದರಿ ತೊಂದರೆಯಾಗಿದ್ದು, ಸದ್ಯ ಈ ಸ್ಥಳದಲ್ಲಿ ಮೊತ್ತೊಂದು ಮೇಲ್ಸುತುವೆ ನಿರ್ಮಾಣದ ಕಾರ್ಯಾ ಆರಂಭವಾಗಿದೆ.

ಇನ್ನು ಹೆದ್ದಾರಿ ಬದಿಯ ತಿಮ್ಮಲಾಪುರ ಹಾಗೂ ಚಿಲಕನಹಟ್ಟಿ ಗ್ರಾಮದ ಜನರ ಪಾಡು ಹೇಳತೀರದಂತಾಗಿದ್ದು, ಸರಿಯಾದ ಸರ್ವಿಸ್ ರಸ್ತೆ, ಚರಂಡಿ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಮಳೆ ನೀರು ನಿಲ್ಲುವುದರಿಂದ ಜನರು ಪರದಾಡುವಂತಾಗಿದೆ.

ಇದೇ ತಿಮ್ಮಲಾಪುರ ಗ್ರಾಮದ ಬಳಿಯಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಾಲೇಜು ಸೇರಿದಂತೆ ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ತೆರಳಲು ಸರಿಯಾದ ಸರ್ವಿಸ್ ರಸ್ತೆ ಇಲ್ಲ. ತಿಮ್ಮಲಾಪುರ ಬಳಿಯ ಟೋಲ್‍ಗೇಟ್ ಮೂಲಕ ನಿತ್ಯ 10ಸಾವಿರಕ್ಕೂ ಹೆಚ್ಚು ವಾಹನಗಳು ಈ ಹೆದ್ದಾರಿಯಲ್ಲಿ ಒಡಾಡುತ್ತಿವೆ ಎನ್ನಲಾಗುತ್ತಿದ್ದು, ಮುಖ್ಯವಾಗಿ ಹೆದ್ದಾರಿ ಬದಿ ಬರುವ ಗ್ರಾಮಗಳಿಗೆ ಸರಿಯಾದ ಸರ್ವಿಸ್ ರಸ್ತೆ ಇಲ್ಲದ್ದು ಅಪಘಾತಗಳಿಗೆ ಕಾರಣ ಎನ್ನಲಾಗುತ್ತಿದೆ.

ಹೆದ್ದಾರಿ ಪ್ರಾಧಿಕಾರ ಮಾಡಿದ ಅವೈಜ್ಞಾನಿಕ ರಸ್ತೆ ನಿರ್ಮಾಣವೇ ಕಾರಣ ಎಂದು ಆರೋಪಿಸುವ ತಿಮ್ಮಲಾಪುರ, ಚಿಲಕನಹಟ್ಟಿ, ಪೋತಲಕಟ್ಟೆ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು, ಈ ಬಗ್ಗೆ ಈ ಹಿಂದೆ ಹಲವು ಬಾರಿ ಪ್ರತಿಭಟನೆ, ಹೆದ್ದಾರಿ ತಡೆ, ಹೋರಾಟ ಮಾಡಿ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎಂದು ದೂರುತ್ತಾರೆ.

ಮರಿಯಮ್ಮನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬರುವ ತಿಮ್ಮಲಾಪುರ ಗ್ರಾಮಕ್ಕೆ ತೆರಳುವುದಕ್ಕೆ ಸರಿಯಾದ ಸರ್ವಿಸ್ ರಸ್ತೆ ಇಲ್ಲದ್ದರಿಂದ ಅಂಡರ್ ಪಾಸ್‍ನಲ್ಲಿ ಮಳೆ ನೀರು ಸಂಗ್ರಹವಾಗುತ್ತಿದೆ
ಮರಿಯಮ್ಮನಹಳ್ಳಿ ಸಮೀಪದ 114-ಡಣಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ತುಂಗಭದ್ರ ಜಲಾಶಯದ ಹಿನ್ನೀರಿಗೆ ಸೇರುವ ಹಳ್ಳಕ್ಕೆ ನಿರ್ಮಿಸಿದ ಏಕಮುಖದ ಸೇತುವೆಯ ದೃಶ್ಯ
ಇ.ತುಕಾರಾಂ ಸಂಸದ
114-ಡಣಾಪುರ ಗ್ರಾಮದ ಬಳಿಯ ಹೆದ್ದಾರಿಗೆ ಮತ್ತೊಂದು ಮೇಲ್ಸುವೆ ನಿರ್ಮಾಣ ಆರಂಭಿಸಲಾಗಿದ್ದು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ.
ಇ.ತುಕಾರಾಂ, ಸಂಸದ
ಹೋಬಳಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೆದ್ದಾರಿ ಬಳಿಯ ವಿವಿಧ ಗ್ರಾಮಗಳಿಗೆ ತೆರಳಲು ಸರಿಯಾದ ಸರ್ವಿಸ್ ರಸ್ತೆ ಚರಂಡಿ ಬೆಳಕಿನ ವ್ಯವಸ್ಥೆ ಸೇರಿದಂತೆ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.
ಕೆ.ನೇಮರಾಜನಾಯ್ಕ ಶಾಸಕ
ಚಿಲಕನಹಟ್ಟಿ ಗ್ರಾಪಂ ವ್ಯಾಪ್ತಿಯ ಚಿಲಕನಹಟ್ಟಿ ತಿಮ್ಮಲಾಪುರ ಪೋತಲಕಟ್ಟ ಕ್ರಾಸ್ ಹಾರುವನಹಳ್ಳಿ ಕ್ರಾಸ್ ಬಳಿ ಸರ್ವಿಸ್ ರಸ್ತೆ ಬೆಳಕಿನ ವ್ಯವಸ್ಥೆ ಮಾಡುವಂತೆ ಪಂಚಾಯಿತಿ ಹಾಗೂ ಗ್ರಾಮಸ್ಥರ ವತಿಯಿಂದ ಅನೇಕ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಡಿ.ಹನುಮಂತಪ್ಪ, ಚಿಲಕನಹಟ್ಟಿ ಗ್ರಾ‍ಪಂ ಅಧ್ಯಕ್ಷ
ಮರಿಯಮ್ಮನಹಳ್ಳಿಯಿಂದ ಪೋತಲಕಟ್ಟೆ ಕ್ರಾಸ್‍ವರೆಗೆ ಹಾದು ಹೋಗಿರುವ ಹೆದ್ದಾರಿಯಲ್ಲಿ ನಡೆದಿರುವ ಅನೇಕ ಅಪಘಾತಗಳಿಗೆ ಹೆದ್ದಾರಿ ಪ್ರಾಧಿಕಾರ ಮಾಡಿದ ಅವೈಜ್ಞಾನಿಕ ರಸ್ತೆ ನಿರ್ಮಾಣವೇ ಕಾರಣ.
ಎಚ್.ಬಾಬು ನಧಾಫ್ ಮರಿಯಮ್ಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.