
ಹೂವಿನಹಡಗಲಿ: ‘ಸಮತೋಲಿತ ಆಹಾರ ಪದ್ಧತಿ ಹಾಗೂ ಯೋಗ, ಪ್ರಾಣಾಯಾಮ, ಧ್ಯಾನದಂತಹ ಉತ್ತಮ ಜೀವನಶೈಲಿ ಅಳವಡಿಸಿಕೊಂಡಲ್ಲಿ ರೋಗಗಳಿಂದ ಮುಕ್ತಿ ಪಡೆಯಬಹುದು’ ಎಂದು ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಸಂಶೋಧನಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಹೇಳಿದರು.
ಪಟ್ಟಣದ ಲಿಟಲ್ ಚಾಂಪ್ಸ್ ಶಾಲೆಯಲ್ಲಿ ಶನಿವಾರ ಜನನಿ ಆಸ್ಪತ್ರೆ, ಪರಿಪೂರ್ಣ ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ತುರ್ತು ಹಾಗೂ ಶಸ್ತ್ರಚಿಕಿತ್ಸೆ ಹೊರತುಪಡಿಸಿ ಎಲ್ಲ ರೋಗಗಳಿಗೆ ಔಷಧ ರಹಿತ ವೈದ್ಯಪದ್ಧತಿಯಲ್ಲಿ ಚಿಕಿತ್ಸೆ ಇದೆ. ಇದರ ಪ್ರಯೋಜನ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ರೋಗ ಬಾರದಂತೆ ತಡೆಯುವ, ರೋಗ ಗುಣಪಡಿಸುವ ಹಾಗೂ ದೇಹವನ್ನು ಸದೃಢಗೊಳಿಸುವ ಚಿಕಿತ್ಸೆಗಳು ಪ್ರಕೃತಿ ಚಿಕಿತ್ಸಾ ಪದ್ದತಿಯಲ್ಲಿವೆ. ಈ ಕುರಿತು ಅರಿವು ಮೂಡಿಸಲು ಇಂತಹ ಶಿಬಿರ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.
ಸಂಸ್ಥೆಯ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್ ಮಾತನಾಡಿದರು.
ಪರಿಪೂರ್ಣ ಎಜ್ಯುಕೇಶನಲ್ ಟ್ರಸ್ಟ್ ಆಡಳಿತಾಧಿಕಾರಿ ಜಿ.ಕೊಟ್ರೇಶ್, ಮುಖ್ಯಶಿಕ್ಷಕರಾದ ಜಿ.ಮಲ್ಲಿಕಾರ್ಜುನ, ಎಸ್.ಶಿಲ್ಪಾ, ಶಿಕ್ಷಕ ಸೊಪ್ಪಿನ ಪ್ರಭುಗೌಡ ಉಪಸ್ಥಿತರಿದ್ದರು. 250ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.