ADVERTISEMENT

ಮರಿಯಮ್ಮನಹಳ್ಳಿ | ಸಾರ್ವಜನಿಕವಾಗಿ ಭಕ್ತರಿಗೆ ದರ್ಶನ ನೀಡುವ ಅಮ್ಮ

ನವರಾತ್ರಿ: ನವದುರ್ಗೆಯರ ವೈಭವ, ಗೊಂಬೆ ಪ್ರದರ್ಶನ– ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಎಚ್.ಎಸ್.ಶ್ರೀಹರಪ್ರಸಾದ್
Published 29 ಸೆಪ್ಟೆಂಬರ್ 2025, 7:11 IST
Last Updated 29 ಸೆಪ್ಟೆಂಬರ್ 2025, 7:11 IST
ಮರಿಯಮ್ಮನಹಳ್ಳಿಯ ಲಕ್ಷ್ಮಿನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಘಟಸ್ಥಾಪನೆ ಮಾಡಿರುವ ದೃಶ್ಯ.
ಮರಿಯಮ್ಮನಹಳ್ಳಿಯ ಲಕ್ಷ್ಮಿನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಘಟಸ್ಥಾಪನೆ ಮಾಡಿರುವ ದೃಶ್ಯ.   

ಮರಿಯಮ್ಮನಹಳ್ಳಿ: ಈ ಬಾರಿ ಉತ್ತಮ ಮುಂಗಾರಿನಿಂದಾಗಿ ಸಂತಸದಲ್ಲಿರುವ ರೈತಾಪಿ ವರ್ಗ ಒಂದೆಡೆಯಾದರೆ, ಇತ್ತ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ನವರಾತ್ರಿ ಹಬ್ಬದ ಸಡಗರ ಇಮ್ಮಡಿಗೊಂಡಿದೆ.

ಶಕ್ತಿದೇವತೆಯ ದೇವಾಲಯಗಳು ಸೇರಿದಂತೆ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ನಿತ್ಯ ವಿಶೇಷ ಪೂಜೆ ಪುನಸ್ಕಾರಗಳು, ದೇವಿ ಪುರಾಣ ಪ್ರವಚನಗಳನ್ನು ಶ್ರದ್ಧಾಭಕ್ತಿಯಿಂದ ಭಕ್ತರು ಕೈಗೊಂಡಿದ್ದಾರೆ.

ಪಟ್ಟಣದ ಗ್ರಾಮದೇವತೆ ರಾಂಪುರ ದುರ್ಗಾದೇವಿ ದೇವಸ್ಥಾನದಲ್ಲಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಅಮ್ಮ ದುರ್ಗಾದೇವಿ, ಸಾರೆಮ್ಮ ಹಾಗೂ ಗಾಳೆಮ್ಮದೇವಿಯ ಜೊತೆಗೂಡಿ ಗರ್ಭಗುಡಿಯಿಂದ ಹೊರ ಬಂದು ಸಾರ್ವಜನಿಕವಾಗಿ ಭಕ್ತರಿಗೆ ದರ್ಶನ ನೀಡುವುದು ಈ ಹಬ್ಬದ ವಿಶೇಷವಾಗಿದೆ.

ADVERTISEMENT

ದೇವಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ ದೇವಿಯನ್ನು ಗರ್ಭಗುಡಿಯಿಂದ ಹೊರ ತಂದು ಪ್ರಾಂಗಣದಲ್ಲಿನ ತೂಗುಯ್ಯಾಲೆಯಲ್ಲಿ ಪ್ರತಿಷ್ಠಾಪಿಸಿ, ನಿತ್ಯ ವಿಶೇಷ ಪೂಜಾಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ವರ್ಷಕ್ಕೊಮ್ಮೆ ನವಮಿಯ ರಾತ್ರಿ ಗರ್ಭಗುಡಿಯಿಂದ ಹೊರ ಬಂದು ಸಾರ್ವಜನಿಕವಾಗಿ ಸಕಲವಾದ್ಯಗಳ ಸಮೇತ ಉಚ್ಛಾಯದ ಮೇಲೆ ಬನ್ನಿಮುಡಿಯಲು ಬನ್ನಿಕಟ್ಟೆಗೆ ತೆರಳುತ್ತಾಳೆ. ಅಮ್ಮನ ಈ ವೈಭವದ ಮೆರವಣಿಗೆ ಸಾಗುವ ದೃಶ್ಯವನ್ನು ನೋಡಲು ಭಕ್ತರು, ಪಟ್ಟಣದ ಮುಖ್ಯರಸ್ತೆ ಇಕ್ಕೆಲಗಳಲ್ಲಿ ನಿಂತು ದರ್ಶನ ಪಡೆಯುವು ವಿಶೇಷವಾಗಿದೆ.

ಪಟ್ಟಣದ ಆರಾಧ್ಯ ಲಕ್ಷ್ಮಿನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಈಗಾಗಲೇ ಗೊಂಬೆಗಳನ್ನು ಕೂಡಿಸಿ ಘಟಸ್ಥಾಪನೆ ಮಾಡಿದ್ದು, ನಿತ್ಯ ಉಭಯ ದೇವರಿಗೆ ವಿಶೇಷಪೂಜೆ ನಡೆಸಲಾಗುತ್ತಿದೆ.

ದಶಮಿಯಂದು 6ನೇ ವಾರ್ಡ್‍ನ ಕಾಳಿಕಾದೇವಿ ಹಾಗೂ ದುರ್ಗಾಷ್ಟಮಿಯಂದು ಗಾಳೆಮ್ಮನಗುಡಿಯ ಗಾಳೆಮ್ಮದೇವಿಯ ರಥೋತ್ಸವ ನಡೆಯುತ್ತದೆ. ನಗರೇಶ್ವರ ದೇವಸ್ಥಾನದಲ್ಲಿ ಕನ್ನಿಕಾಪರಮೇಶ್ವರಿ ಮಾತೆಗೆ ನಿತ್ಯ ವಿವಿಧ ಅಲಂಕಾರ ಹಾಗೂ ವೆಂಕಟೇಶ್ವರಸ್ವಾಮಿಗೆ ದಶಾವತಾರದಿಂದ ಅಲಂಕರಿಸಿ ಪೂಜಿಸಲಾಗುತ್ತದೆ.

ಗೊಲ್ಲರಹಳ್ಳಿಯ ಕಾಳಿಕಾದೇವಿ ದೇವಸ್ಥಾನ, ಜಿ.ನಾಗಲಾಪುರದ ಒಪ್ಪತ್ತೇಶ್ವರ ಮಠ, ಹನುಮನಹಳ್ಳಿಯ ಬನ್ನಿಕಟ್ಟೆ ಸೇರಿದಂತೆ ವಿವಿಧ ದೇವಿ ದೇವಸ್ಥಾನಗಳಲ್ಲಿ ನಿತ್ಯ ದೇವಿ ಪುರಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಭಕ್ತರು ದೇವಿಯ ಆರಾಧನೆಯಲ್ಲಿ ತೊಡಗಿದ್ದಾರೆ.

ವಿಜಯದಶಮಿಯ ಸಂಜೆ ದೇವರುಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಭಕ್ತರು ಬನ್ನಿಕಟ್ಟೆಗೆ ತೆರಳಿ ಪೂಜೆ ಸಲ್ಲಿಸಿ, ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವುದರ ಮೂಲಕ ಹಬ್ಬಕ್ಕೆ ತೆರೆ ಬೀಳುತ್ತದೆ.

‘ಪಲ್ಲಕ್ಕಿ ಯಾತ್ರೆ–ಅವಸರ ಬೇಡ’

ಹೊಸಪೇಟೆ (ವಿಜಯನಗರ): ಆಯುಧ ಪೂಜೆಯ ದಿನವಾದ ಅ.1ರಂದು ನಾಗೇನಹಳ್ಳಿಯ ಧರ್ಮದಗುಡ್ಡದ ಚನ್ನಬಸವೇಶ್ವರ, ನಿಜಲಿಂಗಮ್ಮನಿಗೆ ಬನ್ನಿ ಮುಡಿಸುವ ಸಲುವಾಗಿ ತೆರಳುವ ಪಲ್ಲಕ್ಕಿಗಳು ಯಾವುದೇ ಅವಸರ, ಅನಾಹುತಗಳಿಗೆ ಎಡೆ ಮಾಡದಂತೆ ತೆರಳಬೇಕು ಎಂದು ಡಿವೈಎಸ್‌ಪಿ ಟಿ.ಮಂಜುನಾಥ್ ಸೂಚಿಸಿದರು.

ತಮ್ಮ ಕಚೇರಿಯಲ್ಲಿ ಶುಕ್ರವಾರ ಏಳು ಕೇರಿಗಳಿಂದ ಬಂದ ಯಜಮಾನರು ಹಾಗೂ ಇತರ ಸಾರ್ವಜನಿಕರ ಸಭೆ ನಡೆಸಿದ ಅವರು, ಪಲ್ಲಕ್ಕಿ ಉತ್ಸವ ಸ್ಪರ್ಧೆಯಲ್ಲ, ಹೀಗಾಗಿ ವೇಗವಾಗಿ ಓಡುತ್ತ ಹೋದರೆ ಕೆಲವರಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ, ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.

ಪಲ್ಲಕ್ಕಿಗಳು ಮರಳಿ ಬಂದ ಬಳಿಕವೂ ಕೇರಿಗಳಲ್ಲಿ ಸೌಹಾರ್ದದಿಂದ ಕೋಲಾಟ, ಡೊಳ್ಳುಕುಣಿತ ಸಹಿತ ಉತ್ಸವ ಆಚರಿಸಬೇಕು, ಯುವಕರು ಬೈಕ್‌ ವೀಲಿಂಗ್‌, ಸೈಲೆನ್ಸರ್‌ ಕಳಚಿಟ್ಟು ಕರ್ಕಶವಾಗಿ ಶಬ್ದ ಮಾಡುತ್ತ ಬೈಕ್ ಸವಾರಿ ಮಾಡಕೂಡದು ಎಂದು ಅವರು ಸೂಚಿಸಿದರು.

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ ಮಾತನಾಡಿ, ದಸರಾ ಹಬ್ಬವನ್ನು ಶಾಂತಿಯುತವಾಗಿ, ಸೌಹಾರ್ದದಿಂದ ಆಚರಿಸುವ ಭರವಸೆ ನೀಡಿದರು ಹಾಗೂ ಗುರುವಾರ ನಗರದಲ್ಲಿ ನಡೆದ ಪ್ರತಿಭಟನೆ ಶಾಂತಿಯುತವಾಗಿ ನಡೆದುದಕ್ಕೆ ಕೃತಜ್ಞತೆ ಸಲ್ಲಿಸಿದರು. 

ಸಮಾಜದ ಮುಖಂಡರಾದ ಎಸ್.ಎಸ್‌.ಚಂದ್ರಶೇಖರ್, ದೇವರಮನೆ ಶ್ರೀನಿವಾಸ್ ಸಹಿತ ಹಲವಾರು ಮಂದಿ ಪಾಲ್ಗೊಂಡು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

‘ಮಕ್ಕಳಿಗೆ ಸಂಸ್ಕಾರ ನೀಡಿ’

ಹೂವಿನಹಡಗಲಿ : ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಿ, ಉತ್ತಮ ನಾಗರಿಕರನ್ನಾಗಿ ಬೆಳೆಸಬೇಕು ಎಂದು ಉತ್ತಂಗಿಯ ಸೋಮಶಂಕರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹೊಳಗುಂದಿ ಗ್ರಾಮದ ಊರಮ್ಮ ದೇವಸ್ಥಾನದಲ್ಲಿ ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಆಶೀರ್ವಚನ ನೀಡಿದರು.

‘ಶಕ್ತಿ ದೇವತೆಗಳ ಆರಾಧನೆಯಿಂದ ಗ್ರಾಮಗಳಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲಿದೆ. ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು’ ಎಂದರು.

ಎಚ್.ಎಂ.ಮಲ್ಲಿಕಾರ್ಜುನ. ಪಿ.ನಿತ್ಯಾನಂದಾಚಾರಿ ಪ್ರವಚನ ನಡೆಸಿದರು. ಊರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಎಸ್.ಸುರೇಶ, ಕಾರ್ಯದರ್ಶಿ ಚಾವಡಿ ಮಂಜುನಾಥ, ಎಚ್.ಅಶೋಕ, ಎಂ.ಪ್ರಕಾಶ, ಯು.ಶರತ್, ಎನ್.ಸಿದ್ದೇಶ, ಎಚ್.ಡಿ.ಸಂತೋಷ ಇದ್ದರು. ಕಲಾವಿದರಾದ ಪೂಜಾರ ಬಸವರಾಜ, ಶಿಕ್ಷಕ ಎ.ಚಂದ್ರಪ್ಪ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ‌

ಮರಿಯಮ್ಮನಹಳ್ಳಿಯಲ್ಲಿ ನವರಾತ್ರಿ ದಸರಾ ಹಬ್ಬದ ಅಂಗವಾಗಿ ತೂಗುಯ್ಯಾಲೆಯಲ್ಲಿ ಪ್ರತಿಷ್ಠಾಪಿತಗೊಂಡ ಗ್ರಾಮದೇವತೆ ರಾಂಪುರ ದುರ್ಗಾದೇವಿ ಹಾಗೂ ಗಾಳೆಮ್ಮ ಸಾರೆಮ್ಮ.
ಗ್ರಾಮೀಣ ಕಲೆ ಬಿಂಬಿಸುವ ಗೊಂಬೆಗಳ ಪ್ರದರ್ಶನ ಹರಪನಹಳ್ಳಿ:
ಮೈಸೂರು ಅರಮನೆ ಗ್ರಾಮೀಣ ಬದುಕಿನ ಚಿತ್ರಣ ಗಣೇಶ ಚಾಮುಂಡೇಶ್ವರಿ ಶ್ರೀಕೃಷ್ಣ ಸೇರಿ ದೇವಾನುದೇವತೆಗಳು ರಾಮಾಯಣ ಮಹಾಭಾರತದ ಕಥನ ಬಿಂಬಿಸುವ ಗೊಂಬೆಗಳ ಪ್ರದರ್ಶನ ದಸರಾ ಉತ್ಸವ ಅಂಗವಾಗಿ ನಗರದ ಆಚಾರ್ಯ ಬಡಾವಣೆಯ ಡಾ.ರಮೇಶ್ ಮತ್ತು ಅರ್ಚನಾ ರಮೇಶ್ ದಂಪತಿ ಅವರ ಮನೆಯಲ್ಲಿ 7ನೇ ವರ್ಷದಲ್ಲಿ ಜೋಡಿಸಿರುವ ಗೊಂಬೆಗಳಲ್ಲಿ ಕಾಣುದ ದೃಶ್ಯ ಕಾವ್ಯ ಇದು. ನವರಾತ್ರಿಯ ಸಮಯದಲ್ಲಿ ಶೈಲಪುತ್ರಿ ಕೂಷ್ಮಾಂಡಾ ಕಾಲರಾತ್ರಿ ಬ್ರಹ್ಮಚಾರಿಣಿ ಸ್ಕಂಧ ಮಾತಾ ಮಹಾಗರಿ ಚಂದ್ರಘಂಟಾ ಕಾತ್ಯಾಯಿನಿ ಸಿದ್ದಿಧಾತ್ರಿಯಾಗಿ 9 ದಿನ ದುರ್ಗಾದೇವಿಯಾಗಿ ಪೂಜಿಸಲಾಗುತ್ತಿದೆ. ಹಾಗೂ ಆಧುನಿಕ ಕ್ರಿಕೆಟ್ ಟೀಂ ಎತ್ತಿನ ಬಂಡಿ ದೇವಾನುದೇವತೆಗಳ ಗೊಂಬೆಗಳು ಗಮನ ಸೆಳೆಯುತ್ತಿವೆ. ‘ವೈದ್ಯರ ಮನೆಯಲ್ಲಿ ಸಂಗ್ರಹಿಸಿ ಅಚ್ಚುಕಟ್ಟಾಗಿ ಜೋಡಿಸಿರುವ ಗೊಂಬೆಗಳು ವಸ್ತು ಸಂಗ್ರಹಾಲಯದಂತೆ ಭಾಸವಾಗುತ್ತಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ದುರ್ಗಾಸಪ್ತಶತಿ ಪರಾಯಣ ಕಣ್ತುಂಬಿಕೊಳ್ಳಲು ಸ್ನೇಹಿತರು ಹಿತೈಷಿಗಳು ಹೆಚ್ಚಿನ ಆಗಮಿಸಿ ಗೊಂಬೆಗಳನ್ನು ದರ್ಶನ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಡಾ.ರಮೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.