ADVERTISEMENT

ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಖಚಿತ: ಶಾಸಕ ನೇಮಿರಾಜ ನಾಯ್ಕ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 2:58 IST
Last Updated 21 ಫೆಬ್ರುವರಿ 2026, 2:58 IST
ನೇಮಿರಾಜ ನಾಯ್ಕ
ನೇಮಿರಾಜ ನಾಯ್ಕ   

ಬಳ್ಳಾರಿ: ‘ರಾಜ್ಯದ ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಅವರ ಬಗ್ಗೆ ಜನರಿಗೆ ವಿಶ್ವಾಸವಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲೂ ಎನ್‌ಡಿಎ ಸರ್ಕಾರ ರಚನೆಯಾಗುವುದರಲ್ಲಿ ಅನುಮಾನವಿಲ್ಲ’ ಎಂದು ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ ನಾಯ್ಕ ಹೇಳಿದರು.

ಬಳ್ಳಾರಿ ಜಿಲ್ಲಾ ಜೆಡಿಎಸ್‌ ಘಟಕದ ಅಧ್ಯಕ್ಷರಾಗಿ ಮರು ನೇಮಕಗೊಂಡಿರುವ ಮೀನಹಳ್ಳಿ ತಾಯಣ್ಣ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಖಂಡ ಬಳ್ಳಾರಿಯಲ್ಲಿ ಜೆಡಿಎಸ್‌ಗೆ ನೆಲೆ ಇದೆ. ಆದರೆ, ಇತ್ತೀಚೆಗೆ ಸಂಘಟನೆ ಸರಿಯಾಗಿ ಆಗಿರಲಿಲ್ಲ. ಮಾರ್ಚ್‌ 1ರಂದು ಹಗರಿಬೊಮ್ಮನಹಳ್ಳಿಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಬಳಿಕ ಕೊಪ್ಪಳಲ್ಲೂ ಸಮಾವೇಶ ನಡೆಯಲಿದೆ. ವಿಜಯಪುರದಲ್ಲಿ ಏಳು ಜಿಲ್ಲೆಗಳನ್ನು ಒಳಗೊಂಡ ಬೃಹತ್‌ ಸಮಾವೇಶವನ್ನೂ ನಡೆಸಲಾಗುತ್ತಿದೆ’ ಎಂದು ಹೇಳಿದರು.

ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನೂ ಅವರು ಟೀಕಿಸಿದರು. ಬೆಲೆ ಏರಿಕೆಯನ್ನು ಖಂಡಿಸಿದರು. ಕಲ್ಯಾಣ ಕರ್ನಾಟಕಕ್ಕೆ ಅನುದಾನ ಕೊರತೆಯಾಗಿರುವುದನ್ನು ಪ್ರಸ್ತಾಪಿಸಿದರು.

ADVERTISEMENT

‘ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ₹5 ಸಾವಿರ ಕೋಟಿ ನೀಡಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಯಾವ ಜಿಲ್ಲೆಗೆ ಎಷ್ಟು ಹಣ ಕೊಡಲಾಗಿದೆ? ಕೆಕೆಆರ್‌ಡಿಬಿಯು ಒಂದೇ ಪಕ್ಷದವರ ಆಸ್ಥಾನವೆಂಬಂತೆ ಆಗಿದೆ. ಅವರ ಕೆಲಸ ಸಾಧಿಸಿಕೊಳ್ಳಲು ಹೀಗೆ ಒಂದೇ ಪಕ್ಷದವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿದೆ’ ಎಂದು ಟೀಕಿಸಿದರು.  

ವಿಜಯನಗರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಮೃತ್ಯುಂಜಯ ಬಾದಾಮಿ, ಕ್ಷೇತ್ರಾಧ್ಯಕ್ಷ ಮಲ್ಲಿಕಾರ್ಜುನ ಇದ್ದರು.

ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ತಾಲ್ಲೂಕು ಜಿಲ್ಲಾ ಪಂಚಾಯಿತಿಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಲಾಗುತ್ತದೆ. ‘ಮನೆಮನೆಗೆ ಕುಮಾರಣ್ಣ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ
ಮೀನಹಳ್ಳಿ ತಾಯಣ್ಣ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಳ್ಳಾರಿ
ಮೀನಹಳ್ಳಿ ತಾಯಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.