
ಬಳ್ಳಾರಿ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾನೂನುಗಳಿಂದ ಕಾರ್ಮಿಕರ ಹೋರಾಟದ ಹಕ್ಕು ಸೇರಿದಂತೆ ಅನೇಕ ಶಾಸನಬದ್ಧ ಹಕ್ಕುಗಳು ನೆಲಸಮಗೊಳ್ಳಲಿವೆ’ ಎಂದು ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಎಐಯುಟಿಯುಸಿ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಬಳ್ಳಾರಿಯಲ್ಲಿ ಶನಿವಾರ ‘ಕಾರ್ಮಿಕರ ಅಧ್ಯಯನ ಶಿಬಿರ ನಡೆಯಿತು. ಗಣಿ, ಸ್ಪಾಂಜ್ ಐರನ್, ಕೆಪಿಟಿಸಿಎಲ್, ಜೆಸ್ಕಾಂ, ಆಶಾ, ಹಾಸ್ಟೆಲ್, ಬಿಸಿಯೂಟ ಸೇರಿದಂತೆ ವಿವಿಧ ವಿಭಾಗಗಳ ಕಾರ್ಮಿಕ ಮುಖಂಡರು ಇದರಲ್ಲಿ ಭಾಗವಹಿಸಿದ್ದರು.
ಚರ್ಚೆಯಲ್ಲಿ ಮಾತನಾಡಿದ ಸೋಮಶೇಖರ್, ‘ಕೇಂದ್ರ ಬಿಜೆಪಿ ಸರ್ಕಾರ ಯಾವುದೇ ಚರ್ಚೆಗೆ ಅವಕಾಶ ನೀಡದೆ, ಏಕಪಕ್ಷೀಯವಾಗಿ 4 ಕಾರ್ಮಿಕ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಹಿಂದೆ ಇದ್ದ 29 ಕಾರ್ಮಿಕ ಪರ ಕಾನೂನುಗಳನ್ನು ತಿದ್ದುಪಡಿ ಮಾಡಿ ಈ ಕಾನುನು ತರಲಾಗಿದೆ. ‘ಇದರಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ’ ಎಂದು ಬಿಜೆಪಿ ಸರ್ಕಾರ ಮಾಧ್ಯಮಗಳಲ್ಲಿ ಸುಳ್ಳು ಹೇಳುತ್ತಿದೆ. ವಾಸ್ತವವಾಗಿ, ಕಾರ್ಮಿಕರನ್ನು ಮತ್ತಷ್ಟು ಶೋಷಿಸಲು, ಲಾಭದಾಹಿ ಕಾರ್ಪೋರೇಟ್ ಮಾಲೀಕರ ಹಿತಕ್ಕಾಗಿ ಈ ಕಾನೂನು ಜಾರಿಗೆ ತರಲಾಗಿದೆ. ಖಾಯಂ ಉದ್ಯೋಗಗಳು ಭವಿಷ್ಯದಲ್ಲಿ ಸಂಪೂರ್ಣ ನಾಶವಾಗಲಿವೆ. ಆ ಜಾಗವನ್ನು ‘ನಿಗದಿತ ಅವಧಿಯ ಉದ್ಯೋಗ’ಗಳು ಆಕ್ರಮಿಸಲಿವೆ’ ಎಂದರು.
ಈ ಪರಿಸ್ಥಿತಿಯಲ್ಲಿ ಕಾರ್ಮಿಕರು ಸಂಘಟಿತರಾಗುತ್ತಾ, ಹೋರಾಟಕ್ಕೆ ಧುಮುಕಬೇಕು. ದೇಶದಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಕಾರ್ಮಿಕರು ರಸ್ತೆಗೆ ಇಳಿದು, ಸಮರಶೀಲ ಹೋರಾಟ ಬೆಳಸಬೇಕಿದೆ. ಜಾತಿ, ಧರ್ಮ, ಭಾಷೆ ಹೆಸರಲ್ಲಿ ಕಾರ್ಮಿಕರನ್ನು ಒಡೆಯುವ ಪಿತೂರಿಗಳಿಗೆ ಬಲಿಯಾಗದೆ, ಕಾರ್ಮಿಕರು ತಮ್ಮ ಐಕ್ಯತೆಯನ್ನು ಮತ್ತಷ್ಟು ಗಟ್ಟಿಯಾಗಿಸಬೇಕು. ಈ ಹಿನ್ನೆಲೆಯಲ್ಲಿ, ಫೆಬ್ರವರಿ 12 ರಂದು ಲೇಬರ್ ಕೋಡ್ ಹಾಗೂ ಇನ್ನಿತರ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ನಡೆಯುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.
ಎಐಯುಟಿಯುಸಿಯ ಜಿಲ್ಲಾ ಅಧ್ಯಕ್ಷ ಎ.ದೇವದಾಸ್, ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್, ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ್ ಗೌಡ, ಎ.ಶಾಂತಾ, ಜಂಟಿ ಕಾರ್ಯದರ್ಶಿ ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.