ADVERTISEMENT

ಬಳ್ಳಾರಿ: ಮೆಣಸಿನಕಾಯಿಗೆ ಬೆಲೆ ಇದ್ದರೂ ಖರೀದಿದಾರರಿಲ್ಲ!

ಶೈತ್ಯಾಗಾರಗಳಲ್ಲಿ ಬಿದ್ದಿದೆ 20 ಲಕ್ಷ ಚೀಲ ಮೆಣಸಿನ ಕಾಯಿ; ರಫ್ತು ನಿರೀಕ್ಷೆಯಲ್ಲಿ ವ್ಯಾಪಾರಸ್ಥರು

​ಪ್ರಜಾವಾಣಿ ವಾರ್ತೆ
Published 24 ಮೇ 2023, 4:32 IST
Last Updated 24 ಮೇ 2023, 4:32 IST
ಬಳ್ಳಾರಿ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಶೈತ್ಯಗಾರವೊಂದರಲ್ಲಿ ಪೇರಿಸಿರುವ ಮೆಣಸಿನಕಾಯಿ ಚೀಲಗಳು  
ಬಳ್ಳಾರಿ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಶೈತ್ಯಗಾರವೊಂದರಲ್ಲಿ ಪೇರಿಸಿರುವ ಮೆಣಸಿನಕಾಯಿ ಚೀಲಗಳು     

ಬಳ್ಳಾರಿ: ಕೃಷಿಕರ ಬದುಕೇ ಹೀಗೆ... ಯಾವಾಗಲೂ ಏರಿಳಿತದ ನಡುವೆಯೇ ಜೀಕಬೇಕು... ಮಳೆ ಹೆಚ್ಚಾದರೂ ಕಷ್ಟ.. ಕಡಿಮೆಯಾದರೂ ಕಷ್ಟ.. ಬೆಳೆ ಬಂದರೂ ಕಷ್ಟ.. ಬರದಿದ್ದರೆ ಇನ್ನು ಸಂಕಷ್ಟ... ಸತತ ಎರಡು ವರ್ಷ ಅತಿವೃಷ್ಟಿಯಿಂದ ಬಳ್ಳಾರಿ ಜಿಲ್ಲೆ ರೈತರು ಅದರಲ್ಲೂ ಮೆಣಸಿನಕಾಯಿ ಬೆಳೆಗಾರರು ಅನುಭವಿಸಿದ ಪಡಿಪಾಟಲು ಅಷ್ಟಿಷ್ಟಲ್ಲ. ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ಕೈಕೊಟ್ಟಿದ್ದರಿಂದ ಕೆಲವರು ಆತ್ಮಹತ್ಯೆ ಮಾಡಿಕೊಂಡರು.

ಈ ವರ್ಷ ಮೆಣಸಿನಕಾಯಿ ಬೆಳೆ ಚೆನ್ನಾಗಿ ಬಂದಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಇದೆ. ಆದರೆ, ಖರೀದಿ ಮಾತ್ರ ಅತ್ಯಂತ ಮಂದಗತಿಯಲ್ಲಿ ನಡೆದಿದೆ. ದೊಡ್ಡ ಕಂಪನಿಗಳು ಖರೀದಿಸಿ ಬೇರೆ ದೇಶಗಳಿಗೆ ರಫ್ತು ಮಾಡಿದರೆ ಬಂಗಾರದ ಬೆಲೆ ಬರಲಿದೆ. ಇದೇ ನಿರೀಕ್ಷೆಯಲ್ಲಿ ಬೆಳೆಗಾರರು ಮೆಣಸಿನಕಾಯಿ ಚೀಲಗಳನ್ನು ಶೈತ್ಯಾಗಾರಗಳಲ್ಲಿ ಇಟ್ಟಿದ್ದಾರೆ. 

ಬಳ್ಳಾರಿ ಜಿಲ್ಲೆಯಲ್ಲಿರುವ ಒಟ್ಟು ಕೃಷಿ ಪ್ರದೇಶ 1.73 ಲಕ್ಷ ಎಕರೆ. ಇದರಲ್ಲಿ 37,000 ಹೆಕ್ಟೇರ್‌ನಲ್ಲಿ (ಒಂದು ಹೆಕ್ಟೇರ್‌ಗೆ 2.5 ಎಕರೆ) ಮೆಣಸಿನಕಾಯಿ ಬೆಳೆಯಲಾಗಿದೆ. ಕೃಷಿ ಇಲಾಖೆಯ ಉಪ ನಿರ್ದೇಶಕ ಶರಣಪ್ಪ ಡಿ. ಭೋಗಿ ಅವರ ಪ್ರಕಾರ ಎಂಟು ಲಕ್ಷ ಕ್ವಿಂಟಲ್‌ ಮೆಣಸಿನಕಾಯಿ ಬೆಳೆ ಬಂದಿದೆ. ಈಗಾಗಲೇ ಶೇ60ರಷ್ಟು ಮಾರಾಟವಾಗಿದೆ.

ADVERTISEMENT

‘ಜಿಲ್ಲೆಯಲ್ಲಿ ಗುಂಟೂರು ಮತ್ತು ಬ್ಯಾಡಗಿ ತಳಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಉತ್ತಮ ಗುಣಮಟ್ಟದ ಗುಂಟೂರು ಮೆಣಸಿನಕಾಯಿ ಕ್ವಿಂಟಲ್‌ಗೆ ₹15ರಿಂದ ₹25 ಸಾವಿರದವರೆಗೆ ಮಾರಾಟವಾಗಿದೆ. ಬ್ಯಾಡಗಿ ತಳಿ ₹28 ಸಾವಿರದಿಂದ ₹40 ಸಾವಿರದವರೆಗಿದೆ. ಆದರೆ, ಸಿಜೆಂಟಾ ಕಂಪನಿಯ 2043 ತಳಿಯ ಬಿತ್ತನೆ ಬೀಜಕ್ಕೆ ಕೆ.ಜಿಗೆ ₹1 ಲಕ್ಷ ಕೊಡಬೇಕು. 5531 ತಳಿಯ ಬಿತ್ತನೆ ಬೀಜಕ್ಕೆ ಕೆ.ಜಿಗೆ ₹86 ಸಾವಿರ ದರವಿದೆ. ಶೇ15ರಷ್ಟು ರಿಯಾಯಿತಿ ಇದೆ. ಬೇರೆ ಕೆಲವು ಕಂಪನಿಯ ಬಿತ್ತನೆ ಬೀಜಗಳು ಕೆ.ಜಿಗೆ ₹ 50ರಿಂದ ₹ 60 ಸಾವಿರದವರೆಗಿದೆ. ರೈತರು ಈ ಬಿತ್ತನೆ ಬೀಜಗಳನ್ನು ಬಳಸುವುದರಿಂದ ವೆಚ್ಚ ಕಡಿಮೆ ಮಾಡಬಹುದು’ ಎಂಬುದು ಭೋಗಿ ಅವರ ಅಭಿಪ್ರಾಯ.

‘ಚುನಾವಣೆ ಮುಗಿದ ಬಳಿಕ ಮೆಣಸಿನಕಾಯಿ ವ್ಯಾಪಾರ ಮಂದ ಗತಿಯಲ್ಲಿ ಸಾಗಿದೆ. ಮೆಣಸಿನಕಾಯಿಗೆ ಒಳ್ಳೆ ಬೆಲೆ ಬಂದಿದೆ. ಗುಂಟೂರು ತಳಿ ಕ್ವಿಂಟಲ್‌ಗೆ ₹ 15ರಿಂದ 21 ಸಾವಿರದವರೆಗಿದೆ.  ಡಬ್ಬಿ ಬ್ಯಾಡಗಿ ತಳಿ ಕ್ವಿಂಟಲ್‌ಗೆ  ₹40 ರಿಂದ 60ಸಾವಿರ ಇದೆ. ಕಡ್ಡಿ ಬ್ಯಾಡಗಿಗೆ ₹40 ರಿಂದ 50 ಸಾವಿರದವರೆಗಿದೆ. 2043 ಸಿಜೆಂಟಾ ತಳಿಗೆ ₹ 40ರಿಂದ 45 ಸಾವಿರದವರೆಗಿದೆ’ ಎಂದು ಮೆಣಸಿನಕಾಯಿ ವ್ಯಾಪಾರಿ ಬಳ್ಳಾರಿಯ ದಂಡಮೂರಿ ಶಿವಯ್ಯ ಹೇಳುತ್ತಾರೆ.

‘ಮೆಣಸಿನಕಾಯಿ ಖರೀದಿಗೆ ದೊಡ್ಡ ದೊಡ್ಡ ಕಂಪನಿಗಳು ಬಂದರೆ ವ್ಯಾಪಾರ ಚುರುಕುಗೊಳ್ಳುತ್ತದೆ. ದರವೂ ಜಿಗಿಯುತ್ತದೆ. ಕಂಪನಿಗಳು ಮೆಣಸಿನಕಾಯಿಯನ್ನು ಹೊರ ದೇಶಗಳಿಗೆ ಕಳಿಸುತ್ತವೆ. ಏಕೋ ಏನೋ ಇದುವರೆಗೆ ಕಂಪನಿಗಳು ಬಂದಿಲ್ಲ. ಶೈತ್ಯಾಗಾರಗಳಲ್ಲಿ ಗುಂಟೂರು ಮೆಣಸಿನಕಾಯಿ ಸುಮಾರು 18 ಲಕ್ಷ ಚೀಲ, ಬ್ಯಾಡಗಿ ತಳಿ 2 ಲಕ್ಷ ಚೀಲ (ಪ್ರತಿ ಚೀಲದಲ್ಲಿ 30 ಕೆ.ಜಿ ಕಾಯಿ ಇರುತ್ತದೆ) ದಾಸ್ತಾನಿದೆ. ಇದು ರೈತರು ಹಾಗೂ ವ್ಯಾಪಾರಿಗಳ ಆತಂಕಕ್ಕೆ ಕಾರಣ’ ಎಂಬುದು ಶಿವಯ್ಯ ಅವರ ಅಭಿಪ್ರಾಯ.

ಶೈತ್ಯಾಗಾರಗಳಲ್ಲಿ ದಾಸ್ತಾನಿಟ್ಟಿರುವ ಮೆಣಸಿನಕಾಯಿ ಮೇಲೆ ರೈತರು ಬ್ಯಾಂಕುಗಳಿಂದ ಸಾಲ ಪಡೆಯುತ್ತಾರೆ. ಈ ಕಾಯಿ ಮಾರಾಟವಾದ ಬಳಿಕ ಸಾಲ ಮರುಪಾವತಿ ಮಾಡುತ್ತಾರೆ. ಇದೊಂದು ಸಮಾಧಾನದ ಸಂಗತಿ.

ಬಳ್ಳಾರಿ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಶೈತ್ಯಗಾರವೊಂದರಲ್ಲಿ ಪೇರಿಸಿರುವ ಮೆಣಸಿನಕಾಯಿ ಚೀಲಗಳು
ಬಳ್ಳಾರಿ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಶೈತ್ಯಗಾರವೊಂದರಲ್ಲಿ ಮೆಣಸಿನಕಾಯಿ ಚೀಲಗಳನ್ನು  ಪೇರಿಸುತ್ತಿರುವ ರೈತರು
ಮಾರಾಟದ ನಿರೀಕ್ಷೆಯಲ್ಲಿ...
ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಮೆಣಸಿನಕಾಯಿಗೆ  ₹ 22ರಿಂದ ₹ 23 ಸಾವಿರ ದರ ಇದೆ. ಹೋದ ತಿಂಗಳು ಕೊಂಚ ಕಡಿಮೆಯಿತ್ತು. ಈಗ ಚೇತರಿಕೆ ಕಂಡಿದೆ. ಖರೀದಿದಾರರು ಬಂದರೆ ಮಾರಾಟ ಮಾಡಲು ಸಿದ್ಧರಿದ್ದೇವೆ ಎಂದು ಬಳ್ಳಾರಿ ತಾಲ್ಲೂಕು ಕಪ್ಪಗಲ್‌ ಗ್ರಾಮದ ರೈತ ಕುಬೇರ ಹೇಳಿದರು. ಕಳೆದ ತಿಂಗಳು ದರ ಕುಸಿದಿದ್ದರಿಂದ ಶೈತ್ಯಾಗಾರದಲ್ಲಿ ಇಟ್ಟಿದ್ದೇವೆ. ಖರೀದಿದಾರರಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.