
ಕುರುಗೋಡು: ತಾಲ್ಲೂಕಿನ ದಮ್ಮೂರು ಗ್ರಾಮದ ಹುಲಿಗೆಮ್ಮ, ಫಕ್ಕೀರಮ್ಮ, ಉಪ್ಪಾರಳ್ಳಿ ಹೊನ್ನೂರಪ್ಪ ಸಿರಿಗೇರಿ ಗ್ರಾಮದ ಸುಗ್ನಳ್ಳಿ ರುದ್ರಪ್ಪ, ಲಿಂಗಪ್ಪ ಮತ್ತು ಪ್ರಕಾಶ ಅವರ 15 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಲ್ಲಿ ಕೊಚ್ಚಿಹೋಗಿದೆ.
ಕಟಾವು ಮಾಡಿದ ಈರುಳ್ಳಿಯನ್ನು ಚೀಲಗಳಿಗೆ ತುಂಬಿ ಮಾರಾಟ ಮಾಡಬೇಕು ಎನ್ನುವ ಸಂದರ್ಭದಲ್ಲಿ ನಿರಂತರವಾಗಿ ಸುರಿದ ಮಳೆ ಅವರ ಲಾಭದ ನಿರೀಕ್ಷೆಗೆ ತಣ್ಣೀರೆರಚಿದೆ. ಮಳೆಯಲ್ಲಿ ತೋಯ್ದು ನಷ್ಟವಾಗಿರುವುದು ಒಂದಾದರೆ ಮಾರುಕಟ್ಟೆಯಲ್ಲಿ ಬೆಲೆಕುಸಿತ ರೈತರ ಗಾಯದ ಮೇಲೆ ಬಲೆ ಎಳೆದಂತಾಗಿದೆ.
ಈರುಳ್ಳಿ ಮಳೆಯಲ್ಲಿ ತೋಯ್ದ ಪರಿಣಾಮ ಜಮೀನುಗಳಲ್ಲಿಯೇ ಮೊಳಕೆಯೊಡೆಯಲಾರಂಭಿಸಿದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹10 ಬೆಲೆದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಲ್ಲಿ ತೋಯ್ದ ಈರುಳ್ಳಿಯನ್ನು ಚೀಲಗಳಿಗೆ ತುಂಬಿಸಿ ಮಾರುಕಟ್ಟೆಗೆ ಸಾಗಿಸಿ ಮಾರಾಟಮಾಡಿದರೆ ಕಾರ್ಮಿಕರ ಕೂಲಿ ಮತ್ತು ಸಾಗಾಟ ವೆಚ್ಚಕೂಡ ದೊರೆಯುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತಾಶರಾದ ರೈತರು ಈರುಳ್ಳಿಯನ್ನು ಜಮೀನುಗಳಲ್ಲಿಯೇ ಬಿಟ್ಟು ಕೈಕಟ್ಟಿಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ಮೆಣಸಿನಕಾಯಿ ಬೆಳೆದು ಜೇಬು ತುಂಬಿಸಿಕೊಂಡಿದ್ದೆವು. ಈ ವರ್ಷ 4 ಎಕರೆಯಲ್ಲಿ ಬೆಳೆದ ಈರುಳ್ಳಿ ಜಮೀನಿನಲ್ಲಿಯೇ ಮೊಳಕೆ ಬಂದು ಸಂಪೂರ್ಣ ನಾಶವಾಗಿದೆ. ಈ ವರ್ಷ ಈರುಳ್ಳಿ ಬೆಳೆದು ಜೇಬು ಖಾಲಿ ಮಾಡಿಕೊಂಡಿದ್ದೇವೆ ಎಂದು ರೈತರಾದ ಸುಗ್ನಳ್ಳಿ ರುದ್ರಪ್ಪ, ಲಿಂಗಪ್ಪ ಮತ್ತು ಪ್ರಕಾಶ್ ಅಳಲು ತೋಡಿಕೊಂಡರು.
ಜಿಲ್ಲಾಡಳಿತ ಕೂಡಲೇ ಈರುಳ್ಳಿ ಬೆಳೆದ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಳೆಯಿಂದ ನಷ್ಟವಾದ ಈರುಳ್ಳಿ ಬೆಳೆದ ಜಮೀನುಗಳಿಗೆ ಸೋಮವಾರ ಭೇಟಿ ನೀಡಿದ್ದು, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ತಹಶೀಲ್ದಾರ್ ನರಸಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.