
ಬಳ್ಳಾರಿ: ಜಿಲ್ಲೆಯ ರೈತರ ಬೇಡಿಕೆಯ ಮೇರೆಗೆ ಪಪ್ಪಾಯ ಬೆಳೆಯನ್ನು ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಸೇರ್ಪಡೆ ಮಾಡಿ 2025–26ನೇ ಸಾಲಿಗೆ ಅಧಿಸೂಚನೆ ಹೊರಡಿಸುವಂತೆ ಕೆಳಹಂತದಿಂದ ಪ್ರಸ್ತಾವನೆ ಕಳುಹಿಸಿದ್ದರೂ, ತೋಟಗಾರಿಕೆ ಇಲಾಖೆ ಈ ವರೆಗೆ ಕ್ರಮ ಕೈಗೊಂಡಿಲ್ಲ.
ಪರಿಣಾಮವಾಗಿ, ಪಪ್ಪಾಯ ಬೆಳೆಗಾರರಿಗೆ ಜಿಲ್ಲೆಯಲ್ಲಿ ವಿಮೆ ಸೌಲಭ್ಯವೇ ಸಿಗುತ್ತಿಲ್ಲ. ಸದ್ಯದ ಅತೀವೃಷ್ಟಿಯಂಥ ಪರಿಸ್ಥಿತಿಯಲ್ಲಿ ಬೆಳೆ ಹಾನಿಯಾದರೆ ಪರಿಹಾರವೇ ಇಲ್ಲ ಎಂಬಂತಾಗಿದೆ.
‘ಪಪ್ಪಾಯ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮುಖ್ಯ ತೋಟಗಾರಿಕಾ ಬೆಳೆಯಾಗಿ ವಿಸ್ತರಿಸುತ್ತಿದೆ. ರಾಜ್ಯದಿಂದ ಹೊರರಾಜ್ಯಗಳಿಗೂ ಪಪ್ಪಾಯವನ್ನು ಕಳುಹಿಸಲಾಗುತ್ತಿದೆ. ಆದರೆ, ಅತ್ಯಂತ ಸೂಕ್ಷ ಬೆಳೆಯಾಗಿರುವ ಈ ಬೆಳೆ, ಅತಿವೃಷ್ಟಿ, ಆಲಿಕಲ್ಲು ಮಳೆ, ಬಿರುಗಾಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಈ ಬೆಳೆಯನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಪಸಲ್ ಬೀಮಾ ಯೋಜನೆ ವ್ಯಾಪ್ತಿಗೆ ತರಬೇಕು’ ಎಂದು ಬಳ್ಳಾರಿ ತಾಲೂಕಿನ ಕಪ್ಪಗಲ್‌ನ ರೈತ ಸಿ.ಎಚ್. ಸುಬ್ರಹ್ಮಣ್ಯೇಶ್ವರ ರಾವ್ ಎಂಬುವವರು 2024ರ ನ. 13ರಂದು ಪ್ರಧಾನ ಮಂತ್ರಿ ಕಚೇರಿಗೆ, ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದರು.
ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಇಲಾಖೆಯ ಸ್ಥಳೀಯ ಮಟ್ಟದಿಂದ ಸಲ್ಲಿಸಲು ಸರ್ಕಾರದಿಂದ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅದರಂತೆ ತೋಟಗಾರಿಕೆ ಇಲಾಖೆ ಬಳ್ಳಾರಿ ಉಪ ನಿರ್ದೇಶಕರು, 2025ರ ಮೇ 29ರಂದು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು ಪಪ್ಪಾಯಕ್ಕೆ ವಿಮೆ ಸೌಲಭ್ಯ ನೀಡಲು ಮನವಿ ಮಾಡಿದ್ದರು.
‘ಬಳ್ಳಾರಿ ಜಿಲ್ಲೆಯಲ್ಲಿ 2024-25ನೇ ಸಾಲಿನ ಬೆಳೆ ಸಮೀಕ್ಷೆ ವರದಿ ಪ್ರಕಾರ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 100.71 ಹೆಕ್ಟೇರ್ (248.8598297 ಎಕರೆ) ಪ್ರದೇಶದಲ್ಲಿ ಪಪ್ಪಾಯ ಬೆಳೆಯನ್ನು ಬೆಳೆಯಲಾಗಿದೆ. ಬೆಳೆಯು ವಿವಿಧ ಹವಾಮಾನ ಆಧಾರಿತ ವೈಪರೀತ್ಯಗಳಿಂದ ಹಾನಿಯಾಗುತ್ತಿರುವುದರಿಂದ, ಜಿಲ್ಲೆಯ ರೈತರ ಬೇಡಿಕೆಯ ಮೇರೆಗೆ ಬೆಳೆಯನ್ನು ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಸೇರ್ಪಡಿಸಿ 2025-26 ನೇ ಸಾಲಿಗೆ ಅಧಿಸೂಚನೆ ಹೊರಡಿಸಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಪತ್ರ ಬರೆದು ಐದು ತಿಂಗಳಾಗುತ್ತಿದ್ದರೂ ತೋಟಗಾರಿಕೆ ಇಲಾಖೆ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ‘ಅಗತ್ಯವಿಲ್ಲದ ಬೆಳೆಗಳಿಗೆ ಸರ್ಕಾರ ಬೆಳೆ ವಿಮೆ ಸೌಲಭ್ಯ ನೀಡುತ್ತದೆ. ನೋಂದಣಿ ಮಾಡಿಕೊಳ್ಳುವಂತೆ ರೈತರ ಮೇಲೆ ಒತ್ತಡ ಹೇರಲಾಗುತ್ತದೆ. ಆದರೆ, ಹೆಚ್ಚು ಹಾನಿಗೀಡಾಗುವ ಬೆಳೆಯಾದ ಪಪ್ಪಾಯಕ್ಕೆ ಮಾತ್ರ ವಿಮೆ ಸೌಲಭ್ಯ ನೀಡದೇ ಇರುವುದು ಸರಿಯಲ್ಲ’ ಎಂದು ರೈತ ಸಿ.ಎಚ್. ಸುಬ್ರಹ್ಮಣ್ಯೇಶ್ವರ ರಾವ್ ಅಭಿಪ್ರಾಯಪಟ್ಟಿದ್ದಾರೆ.
‘ಪಪ್ಪಾಯವನ್ನು ವಿಮೆ ಸೌಲಭ್ಯದ ಅಡಿಗೆ ತರಬೇಕು. ಒಂದು ಗ್ರಾಮವನ್ನು ಒಂದು ಘಟಕವಾಗಿ ಪರಿಗಣಿಸಬೇಕು. ಒಂದು ಎಕರೆ ಇರುವ ರೈತರನ್ನೂ ಈ ಯೋಜನೆಯಡಿ ಪರಿಗಣಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಬೆಳೆಯೊಂದನ್ನು ವಿಮಾ ಸೌಲಭ್ಯದ ಅಡಿಗೆ ತರಬೇಕಿದ್ದರೆ ಹಲವು ಮಾನದಂಡಗಳಿವೆ. ಪಪ್ಪಾಯವನ್ನು ಸೌಲಭ್ಯದ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.–ಶಶಿಕಾಂತ ಕೋಟೆಮನಿ, ಜಂಟಿ ನಿರ್ದೇಶಕರು ತೋಟಗಾರಿಕೆ ಇಲಾಖೆ ಬಳ್ಳಾರಿ
ಪಪ್ಪಾಯವನ್ನು ವಿಮಾ ವ್ಯಾಪ್ತಿಗೆ ತರುವ ಪ್ರಸ್ತಾವನೆ ಕೆಳಹಂತದಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವೆ.–ಸಿ.ಎಚ್. ಸುಬ್ರಹ್ಮಣ್ಯೇಶ್ವರ ರಾವ್ ಪಪ್ಪಾಯ ಬೆಳೆಗಾರ ಕಪ್ಪಗಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.