ADVERTISEMENT

‘ಒಬ್ಬ ವ್ಯಕ್ತಿಯ ಸ್ವಾರ್ಥಕ್ಕಾಗಿ ಜಿಲ್ಲೆ ರಚನೆ’- ಶಾಸಕ ಬಿ. ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 16:07 IST
Last Updated 22 ನವೆಂಬರ್ 2020, 16:07 IST
ಹೊಸಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿದಂತೆ ಇತರೆ ಮುಖಂಡರು ಕಾರ್ಯಕರ್ತರಿಗೆ ಹಾಕಿದ್ದ ಆಸನಗಳಲ್ಲಿಯೇ ಕುಳಿತುಕೊಂಡಿದ್ದರು. ವಂದೇ ಮಾತರಂ ಹಾಡುವಾಗ ಎದ್ದು ನಿಂತರು
ಹೊಸಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿದಂತೆ ಇತರೆ ಮುಖಂಡರು ಕಾರ್ಯಕರ್ತರಿಗೆ ಹಾಕಿದ್ದ ಆಸನಗಳಲ್ಲಿಯೇ ಕುಳಿತುಕೊಂಡಿದ್ದರು. ವಂದೇ ಮಾತರಂ ಹಾಡುವಾಗ ಎದ್ದು ನಿಂತರು   

ಹೊಸಪೇಟೆ: ‘ಒಬ್ಬ ವ್ಯಕ್ತಿಯ ಸ್ವಾರ್ಥಕ್ಕಾಗಿ ವಿಜಯನಗರ ಜಿಲ್ಲೆ ರಚನೆ ಮಾಡಲಾಗಿದೆ. ರಾಜಕೀಯ ದುರುದ್ದೇಶ ಬಿಟ್ಟರೆ ಬೇರೇನೂ ಉದ್ದೇಶ ಇದರಲ್ಲಿ ಇಲ್ಲ’ ಎಂದು ಶಾಸಕ ಬಿ. ನಾಗೇಂದ್ರ ಆರೋಪಿಸಿದರು.

ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಅನೇಕ ಹೋರಾಟಗಾರರು ಈ ಹಿಂದೆ ಜಿಲ್ಲೆ ರಚನೆಗಾಗಿ ಹೋರಾಟ ಮಾಡಿದ್ದಾರೆ. ಆಗ ಜಿಲ್ಲೆ ಮಾಡಿದ್ದರೆ ಬೇರೆಯಾಗಿರುತ್ತಿತ್ತು. ಆದರೆ, ಈಗ ಮಾಡಿರುವುದು ಕೇವಲ ಸ್ವಾರ್ಥಕ್ಕಾಗಿ’ ಎಂದರು.

‘ಜಿಲ್ಲೆ ರಚನೆ ಕುರಿತಂತೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಅದರ ಬಗ್ಗೆ ಧ್ವನಿ ಎತ್ತಲಾಗುವುದು. ನಮ್ಮ ಪಕ್ಷದ ಎಲ್ಲ ಶಾಸಕರು ಒಂದೇ ರೀತಿಯ ಹೇಳಿಕೆ ಕೊಡಬೇಕು’ ಎಂದು ಕೋರಿದರು.

ADVERTISEMENT

‘ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರು ನಮ್ಮ ಪಕ್ಷದ ಜೋಡೆತ್ತುಗಳಲ್ಲ, ಜೋಡಿ ಹುಲಿಗಳು. ಅವರಿಬ್ಬರ ನೇತೃತ್ವದಲ್ಲಿ ಪಕ್ಷ ಸಂಘಟಿಸಿ ಪುನಃ ಅಧಿಕಾರಕ್ಕೆ ಬರೋಣ. ಹೊಸಪೇಟೆ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸಬೇಕು’ ಎಂದರು.

ರಾಜ್ಯಸಭೆ ಸದಸ್ಯ ಸೈಯದ್‌ ನಾಸೀರ್‌ ಹುಸೇನ್‌ ಮಾತನಾಡಿ, ‘ಬಿಜೆಪಿ ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರುತ್ತಿದೆ. ಜನಮತ ಇಲ್ಲದಿದ್ದರೂ ಅದನ್ನು ಸೃಷ್ಟಿಸುತ್ತಿದೆ. ತಳಮಟ್ಟದಿಂದ ಪಕ್ಷ ಸಂಘಟಿಸಿ ಅದರ ವಿರುದ್ಧ ಹೋರಾಡಬೇಕಿದೆ. ಫ್ಯಾಸಿಸ್ಟ್‌ ಶಕ್ತಿಗಳಿಂದ ರಾಜ್ಯ, ದೇಶವನ್ನು ಬಿಡುಗಡೆಗೊಳಿಸಬೇಕು’ ಎಂದು ಹೇಳಿದರು.

ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಮಾತನಾಡಿ, ‘ಮುಂದಿನ ದಿನಗಳಲ್ಲಿ ಹೊಸಪೇಟೆಯಲ್ಲಿ ಕಾಂಗ್ರೆಸ್‌ ಬಾವುಟ ಹಾರಲಿದೆ. ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟರೂ ಎಲ್ಲರೂ ಅವರ ಗೆಲುವಿಗೆ ಒಗ್ಗೂಡಿ ಕೆಲಸ ಮಾಡಬೇಕಿದೆ’ ಎಂದರು.

ಶಾಸಕರಾದ ಈ. ತುಕಾರಾಂ, ಭೀಮಾ ನಾಯ್ಕ, ಪಿ.ಟಿ. ಪರಮೇಶ್ವರ ನಾಯ್ಕ, ಅಲ್ಲಂ ವೀರಭದ್ರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಭರತ್‌ ರೆಡ್ಡಿ, ಮಾಜಿಸಚಿವ ಸಂತೋಷ್‌ ಲಾಡ್‌, ಬಳ್ಳಾರಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ, ನಗರ ಅಧ್ಯಕ್ಷ ಮೊಹಮ್ಮದ್‌ ರಫೀಕ್‌, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಆಶಾಲತಾ, ಕೆಪಿಸಿಸಿ ವಕ್ತಾರ ಸಿರಾಜ್‌ ಶೇಖ್‌, ಮುಖಂಡರಾದ ವಿ.ಎಸ್‌. ಉಗ್ರಪ್ಪ, ಅನಿಲ್‌ ಲಾಡ್‌, ದೀಪಕ್‌ ಸಿಂಗ್, ಕಲ್ಲುಕಂಬ ಪಂಪಾಪತಿ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.