ADVERTISEMENT

ಸಂಡೂರು | ಲಾರಿ ಚಾಲಕರ ಅಟ್ಟಹಾಸ : ಪೊಲೀಸರಿಂದಲೇ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 16:21 IST
Last Updated 30 ಜುಲೈ 2024, 16:21 IST

ಸಂಡೂರು: ಗಣಿ ತಾಲ್ಲೂಕು ಸಂಡೂರಿನಲ್ಲಿ ಲಾರಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಸ್ತೆಯ ಇಕ್ಕೆಲಗಳಲ್ಲಿ, ನಡು ರಸ್ತೆಯಲ್ಲಿ ಅದಿರು ಲಾರಿ ನಿಲ್ಲಿಸುತ್ತಿರುವುದರಿಂದ ಬಸ್‌, ಕಾರು, ಬೈಕ್‌ ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ಆಗುತ್ತಿರುವ ತೊಂದರೆಗೆ ಜನ ರೋಸಿಹೋಗಿದ್ದಾರೆ.

ಇದೀಗ ಸ್ವತಃ ಪೊಲೀಸರ ಓಡಾಟಕ್ಕೂ ಲಾರಿ ಅಡಚಣೆ ಉಂಟು ಮಾಡುತ್ತಿದ್ದು, ಸಂಡೂರು ಠಾಣೆ ಸಿಬ್ಬಂದಿಯೇ ನಡುರಸ್ತೆಯಲ್ಲಿ ನಿಲ್ಲಿಸಿದ್ದ 10 ಲಾರಿ ಮಾಲೀಕರು ಹಾಗೂ ಇಲ್ಲಿನ ಜಯಲಕ್ಷ್ಮಿ ವಾಷಿಂಗ್ ಪ್ಲಾಂಟ್ ವ್ಯವಸ್ಥಾಪಕರ ಮೇಲೆ ದೂರು ದಾಖಲಿಸಿದ್ದಾರೆ.

ಸಂಡೂರು ಠಾಣೆಯ ನಂದಿಹಳ್ಳಿ ಬೀಟ್ ಪೊಲೀಸ್ ಸೋಮಪ್ಪ ಎಂಬುವವರು ಗ್ರಾಮಕ್ಕೆ ತಮ್ಮ ಕರ್ತವ್ಯದ ನಿಮಿತ್ತ ತೆರಳುತ್ತಿದ್ದಾಗ ಜಯಲಕ್ಷ್ಮಿ ವಾಷಿಂಗ್ ಪ್ಲಾಂಟ್ ಬಳಿ ನಡು ರಸ್ತೆಯಲ್ಲಿ ಅದಿರು ತುಂಬಿದ ಲಾರಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿದೆ.

ADVERTISEMENT

ಲಾರಿಗಳ ಮಾಲೀಕರು, ಚಾಲಕರನ್ನು ಹುಡುಕಿದರೂ ಯಾರೂ ಕಂಡು ಬಂದಿಲ್ಲ. ಸಾರ್ವಜನಿಕ ರಸ್ತೆ ಸುಗಮ ಸಂಚಾರಕ್ಕೆ ಅಡೆತಡೆಯುಂಟು ಮಾಡಿರುವ ಸಂಬಂಧ ಸ್ವತಃ ಪೊಲೀಸ್ ಸಿಬ್ಬಂದಿಯೇ ಸಂಡೂರು ಠಾಣೆಯಲ್ಲಿ‌ ರಸ್ತೆಗೆ ಅಡ್ಡಗಟ್ಟಿ ನಿಂತಿರುವ 10 ಲಾರಿಗಳ ಮಾಲೀಕರು ಹಾಗೂ ಅದಿರು ಸಾಗಿಸಲಾಗುತ್ತಿದ್ದ, ಜಯಲಕ್ಷ್ಮಿ ಪ್ಲಾಂಟ್ ವ್ಯವಸ್ಥಾಪಕ ಷರೀಫ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.