ADVERTISEMENT

ಬಳ್ಳಾರಿ | ಪಲ್ಸ್‌ ಪೋಲಿಯೊ: ಶೇ 96ರಷ್ಟು ಸಾಧನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 6:22 IST
Last Updated 22 ಡಿಸೆಂಬರ್ 2025, 6:22 IST
ಜಿಲ್ಲಾಸ್ಪತ್ರೆ ಆವರಣದಲ್ಲಿ ಭಾನುವಾರ ಚಾಲನೆಗೊಂಡ ಪಲ್ಸ್‌ ಪೋಲಿಯೋ ಲಸಿಕೆ ಅಭಿಯಾನದಲ್ಲಿ ಉಪ ಮೇಯರ್‌ ಮುಬಿನಾ ಅವರು ಮಗುವೊಂದಕ್ಕೆ ಲಸಿಕೆ ಹಾಕಿದರು. ಮೇಯರ್‌ ಗಾದೆಪ್ಪ, ಲಿಡ್ಕರ್‌ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಜಿ.ಪಂ ಸಿಇಒ ಮೊಹಮದ್‌ ಹ್ಯಾರಿಸ್‌ ಸುಮೇರ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ಮತ್ತಿತರರು ಇದ್ದರು. 
ಜಿಲ್ಲಾಸ್ಪತ್ರೆ ಆವರಣದಲ್ಲಿ ಭಾನುವಾರ ಚಾಲನೆಗೊಂಡ ಪಲ್ಸ್‌ ಪೋಲಿಯೋ ಲಸಿಕೆ ಅಭಿಯಾನದಲ್ಲಿ ಉಪ ಮೇಯರ್‌ ಮುಬಿನಾ ಅವರು ಮಗುವೊಂದಕ್ಕೆ ಲಸಿಕೆ ಹಾಕಿದರು. ಮೇಯರ್‌ ಗಾದೆಪ್ಪ, ಲಿಡ್ಕರ್‌ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಜಿ.ಪಂ ಸಿಇಒ ಮೊಹಮದ್‌ ಹ್ಯಾರಿಸ್‌ ಸುಮೇರ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ಮತ್ತಿತರರು ಇದ್ದರು.    

ಬಳ್ಳಾರಿ: ರಾಜ್ಯದಾದ್ಯಂತ ಭಾನುವಾರ ಪಲ್ಸ್‌ ಪೋಲಿಯೋ ಅಭಿಯಾನ ಕೈಗೊಳ್ಳಲಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ದಿನ ಶೇ 96.10ರಷ್ಟು ಸಾಧನೆಯಾಗಿದೆ. 

ಜಿಲ್ಲೆಯಲ್ಲಿ 1,98,136 ಮಕ್ಕಳಿಗೆ ಪೋಲಿಯೊ ಲಸಿಕೆ ಗುರಿ ಹಾಕಿಕೊಳ್ಳಲಾಗಿತ್ತು. ಇದರಲ್ಲಿ ಈಗಾಗಲೇ 1,91,995 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. 24ರ ವರೆಗೆ ನಡೆಯಲಿರುವ ಅಭಿಯಾನದಲ್ಲಿ ಇನ್ನುಳಿದ ಮಕ್ಕಳಿಗೂ ಲಸಿಕೆ ಹಾಕುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಮೇಶ್‌ ಬಾಬು ಪ್ರಜಾವಾಣಿಗೆ ತಿಳಿಸಿದ್ದಾರೆ. 

ತಾಲೂಕುವಾರು ಪ್ರಗತಿ: ಬಳ್ಳಾರಿ ತಾಲೂಕಿನಲ್ಲಿ 92,931 ಗುರಿಗೆ ಪ್ರತಿಯಾಗಿ 90,335 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. 

ADVERTISEMENT

ಕಂಪ್ಲಿಯಲ್ಲಿ 15,683 ಗುರಿಗೆ ಪ್ರತಿಯಾಗಿ 15,071, ಕುರುಗೋಡು 18,193 ಗುರಿಗೆ 17,329, ಸಂಡೂರು 34,750 ಗುರಿಗೆ 33,981, ಕುರುಗೋಡು 36,579 ಗುರಿಗೆ ಪ್ರತಿಯಾಗಿ 35,259 ಮಕ್ಕಳಿಗೆ ಲಸಿಕೆ ಹಾಕಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.   

ಮಕ್ಕಳ ರಕ್ಷಿಸಲು ಲಸಿಕೆ ಹಾಕಿಸಿ: ಮಕ್ಕಳ ಅಂಗವೈಖಲ್ಯತೆ ತಡೆಗಟ್ಟಲು ಪೋಷಕರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಎಂದು ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಮನವಿ ಮಾಡಿದ್ದಾರೆ. 

ಜಿಲ್ಲಾಸ್ಪತ್ರೆ ಆವರಣದ ತಾಯಿ ಮತ್ತು ನವಜಾತ ಶಿಶುಗಳ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು, ಪೋಲಿಯೋ ಪ್ರಕರಣಗಳನ್ನು ತಡೆಯುಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಶ್ಲಾಘಿಸಿದರು.

ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಮಾತನಾಡಿ,‌ ‘ಡಿ.24 ರವರೆಗೆ ಅಭಿಯಾನ ನಡೆಯಲಿದೆ. ಪೋಷಕರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಹಾಗೂ ನೆರೆ-ಹೊರೆಯವರಿಗೂ ಈ ಮಾಹಿತಿ ತಿಳಿಸಿ ಲಸಿಕೆ ಹಾಕಿಸಬೇಕು’ ಎಂದು ಮನವಿ ಮಾಡಿದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ ಚಿದಾನಂದಪ್ಪ ಅವರೂ ಮಕ್ಕಳಿಗೆ ಲಸಿಕೆ ಹಾಕಿದರು. ಇದೇ ಕಾರ್ಯಕ್ರಮದಲ್ಲಿ ಪಲ್ಸ್ ಪೋಲಿಯೋ ಪೋಸ್ಟರ್ ಬಿಡುಗಡೆ ಮಾಡಲಾಯಿತು. 

ಕಾರ್ಯಕ್ರಮಕ್ಕೂ ಮುನ್ನ ಚಿಗುರು ಕಲಾ ತಂಡದ ಎಸ್.ಎನ್ ಹುಲುಗಪ್ಪ ಮತ್ತು ಸಂಗಡಿಗರಿಂದ ಪಲ್ಸ್ ಪೋಲಿಯೋ ಬಗ್ಗೆ ಜಾಗೃತಿ ಗೀತೆಗಳನ್ನು ಹಾಡಲಾಯಿತು. 

ಪಾಲಿಕೆ  ಉಪಮೇಯರ್ ಮುಬಿನಾ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಎನ್ ಝಬೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ.ಎನ್., ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ ಮತ್ತಿತರರು ಇದ್ದರು. ‌