
ಬಳ್ಳಾರಿ: ‘ಮೃತ ರಾಜಶೇಖರ ಅವರ ಶವಪರೀಕ್ಷೆ ಒಂದೇ ಬಾರಿ ಆಗಿದೆ. ಎರಡು ಬಾರಿ ಆಗಿದೆ ಎಂದು ಯಾರು ಹೇಳಿದರೋ ಗೊತ್ತಿಲ್ಲ. ಆದರೂ ರಾಜ್ಯದ ಜನರಿಗೆ ತಪ್ಪು ಸಂದೇಶ ನೀಡಲಾಗಿದೆ. ಈ ಬಗ್ಗೆ ಜನ ಪ್ರಶ್ನೆ ಮಾಡಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮರಣೋತ್ತರ ಪರೀಕ್ಷೆಗೆ ತನಿಖಾಧಿಕಾರಿಯಿಂದ ಬಂದ ಅರ್ಜಿ ಒಂದೇ. ಅದರ ಆಧಾರದಲ್ಲಿ ಒಂದೇ ಬಾರಿ ಶವ ಪರೀಕ್ಷೆ ನಡೆದಿದೆ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ತಪ್ಪು ಮಾಹಿತಿ ನೀಡಿದ್ದಾರೆ. ರಾಜಕೀಯದ ಕೆಲ ಮಂದಿಗೆ ಸುಳ್ಳು ಹೇಳುವ, ಪ್ರೆಸ್ ಮಾಡುವ ಚಟ ಇದೆ. ಅದಕ್ಕೆ ನಾವು ಏನೂ ಮಾಡಲಾಗದು. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವರು ಹೀಗೆ ಹೇಳಿದ್ದಾರೆ. ಎಲ್ಲ ವರದಿ ಕೋರ್ಟ್‌ಗೆ ನೀಡಲಾಗುತ್ತದೆ’ ಎಂದರು.
‘ಘಟನೆ ಬಗ್ಗೆ ಅಧಿಕಾರಿ, ಶಾಸಕರು ಮತ್ತು ನನ್ನದೇ ತಂಡದಿಂದ ಪ್ರತ್ಯೇಕವಾಗಿ ಮಾಹಿತಿ ತರಿಸಿಕೊಂಡಿದ್ದೇನೆ. ಸತ್ಯ ಮುಚ್ಚಿಹಾಕಲು ಸಾಧ್ಯವಿಲ್ಲ’ಎಂದರು.
‘ವಾಲ್ಮೀಕಿ ಪ್ರತಿಮೆಗೆ ಸರ್ಕಾರದ ಅನುಮತಿ ದೊರೆಯುವ ಹಂತದಲ್ಲಿತ್ತು. ಪಕ್ಷಾತೀತವಾಗಿ ಅನಾವರಣ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆದರೆ, ಕಾರ್ಯಕ್ರಮಕ್ಕೆ ಮೂರು ದಿನ ಮೊದಲು ಶ್ರೀರಾಮುಲು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಏನೇ ಹೇಳಬಹುದು. ಆದರೆ, ಪ್ರತಿಮೆ ಮಾಡುವುದು ತಪ್ಪೇನಿಲ್ಲ’ ಎಂದು ಅವರು ಹೇಳಿದರು.
‘ಕಾರ್ಯಕ್ರಮದ ಬ್ಯಾನರ್ ಅನ್ನು ಯಾರ ಮನೆಯಲ್ಲೂ ಕಟ್ಟಿಲ್ಲ. ಸಾರ್ವಜನಿಕ ರಸ್ತೆಯಲ್ಲಿ ಕಟ್ಟಲಾಗಿತ್ತು. ಇದರ ಬಗ್ಗೆ ಆಕ್ಷೇಪ ಇದ್ದಿದ್ದರೆ ಜನಾರ್ದನ ರೆಡ್ಡಿ ಸ್ಥಳೀಯ ಆಡಳಿತ, ಮುಖಂಡರ ಮೂಲಕ ತಿಳಿಸಬಹುದಿತ್ತು. ಆದರೆ, ಅವರ ಮುಖಂಡತ್ವದಲ್ಲೇ ತೆರವು ಮಾಡಿದ್ದು ತಪ್ಪು’ ಎಂದರು.
‘ಒಂದು ವೇಳೆ ಜನಾರ್ದನ ರೆಡ್ಡಿಗೆ ತೊಂದರೆ ಆಗಿದ್ದಿದ್ದರೆ ಗನ್‌ಮ್ಯಾನ್‌ಗಳೂ ದೂರು ಕೊಡಬಹುದಿತ್ತು. ಆದರೆ, ಅಂಥ ದೂರುಗಳು ಗನ್‌ಮ್ಯಾನ್‌ಗಳಿಂದ ಬಂದಿಲ್ಲ. ರೆಡ್ಡಿ ಝಡ್ ಪ್ಲಸ್ ಭದ್ರತೆ ಕೇಳಿದ್ದಾರೆ. ಆದರೆ ಅದನ್ನು ಕೇಂದ್ರ ಸರ್ಕಾರ ಕೊಡಬೇಕು’ ಎಂದರು.
‘ಬಳ್ಳಾರಿಯ ಗೌರವಕ್ಕೆ ಧಕ್ಕೆ ಬಾರದಂತೆ ಎಲ್ಲರೂ ನಡೆದುಕೊಳ್ಳಬೇಕು. ನಮ್ಮ ಶಾಸಕರಿಗೂ ನಾನು ಅದೇ ರೀತಿಯಲ್ಲೇ ಬುದ್ಧಿವಾದ ಹೇಳಿದ್ದೇನೆ. ತಮ್ಮ ಹಾಗೂ ಊರಿನ ಗೌರವ ಕಾಪಾಡುವಷ್ಟರ ಮಾಟ್ಟಕ್ಕೆ ಜನಾರ್ದನ ರೆಡ್ಡಿ ಪ್ರಯತ್ನ ಪಟ್ಟರೆ ಅವರಿಗೂ ನಮಗೂ ಇಬ್ಬರಿಗೂ ಕ್ಷೇಮ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.
‘ಸರ್ಕಾರದಿಂದ, ಪಕ್ಷದಿಂದ ರಾಜಶೇಖರ ಅವರಿಗೆ ನೀಡಬೇಕಾದ ಸಹಕಾರ ನೀಡಲಿದ್ದೇವೆ’ ಎಂದರು.
ಎಸ್‌ಪಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ: ಗಲಭೆ ನಡೆದ ದಿನ ಶ್ರೀರಾಮುಲು ಮಾಹಿತಿ ನೀಡಿದ್ದರು. ಬಳಿಕ ನಾನು ಎಸ್‌ಪಿಗೆ ಕರೆ ಮಾಡಿದ್ದೆ. ಆದರೆ, ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ನನಗೆ ಪ್ರತಿಕ್ರಿಯೆ ನೀಡಲಾಗದ ಪರಿಸ್ಥಿತಿಯಲ್ಲಿದ್ದರು. ಸರ್ಕಾರ ಹಿರಿಯ ಅಧಿಕಾರಿಯೊಬ್ಬರ ಶಿಫಾರಸಿನಂತೆ ಅಮಾನತು ಮಾಡಲಾಗಿದೆ.
ಅಸೂಯೆಯಿಂದ ಹೀಗಾಗಿದೆ... ಸತ್ಯ ಶೋಧನಾ ಸಮಿತಿಯು ಅನೌಪಚಾರಿಕವಾಗಿ ನನಗೆ ವರದಿ ನೀಡಿದೆ. ಪ್ರತಿಮೆ ಸ್ಥಾಪಿಸುತ್ತಿದ್ದೇವೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ ಎಂಬ ಅಸೂಯೆಯಿಂದ ಬಿಜೆಪಿ ಕಡೆಯವರು ಹೀಗೆ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು. ಪ್ರತಿಮೆಗೆ ಎಂಎಲ್‌ಎ ಕ್ಷೇತ್ರಾಭಿವೃದ್ಧಿ ಅನುದಾನ ನೀಡಬಾರದೆಂದು ಹೇಳಿಲ್ಲ. ಕೊಡಲು ಅವಕಾಶವಿದೆ ಎಂದು ಹೇಳಿದರು. ಸರ್ಕಾರದ ಹಂತದಲ್ಲಿ ಚರ್ಚೆ ಮಾಡಿ ಪ್ರತಿಮೆಯ ಅನಾವರಣದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಾಂತ್ವನ ಹೇಳಿದ ಡಿಸಿಎಂ
ಇದಕ್ಕೂ ಮೊದಲು ನಗರದ ಹುಸೇನ್ ನಗರದ ಮೃತ ರಾಜಶೇಖರ ನಿವಾಸಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಗನ ಆತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕು ಎಂದು ರಾಜಶೇಖರ ತಾಯಿ ಡಿಕೆಶಿಗೆ ಮನವಿ ಮಾಡಿದರು. ಬಳಿಕ ಹೊಸ ಜಿಲ್ಲಾಡಳಿತ ಭವನದಲ್ಲಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.