ಬಳ್ಳಾರಿ: ‘ಜನರಿಗೆ ಬೆಲೆ ಏರಿಕೆ ಬರೆ ಹಾಕಿರುವ ಸರ್ಕಾರ ಅದರ ಮೂಲಕ ಬೊಕ್ಕಸ ತುಂಬಿಕೊಳ್ಳುವಲ್ಲಿ ನಿರತವಾಗಿದೆ’ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮಂಗಳವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಲಿನ ದರ ಏರಿಸಲಾಗಿದೆ. ಆದರೆ, ರೈತರಿಗೆ ಬಾಕಿ ಇರುವ ಸಹಾಯಧನ ನೀಡುತ್ತಿಲ್ಲ. ಬಳ್ಳಾರಿಯಲ್ಲಿ ಹಾಲಿನ ಖರೀದಿ ದರ ಕಡಿತ ಮಾಡಲಾಗಿದೆ. ಇದು ಆತಂಕಕಾರಿ. ಗ್ರಾಹಕರಿಗೆ, ರೈತರಿಗೆ ತೊಂದರೆಯಾಗಿದೆ. ಆದರೂ, ಬೊಕ್ಕಸ ತುಂಬಿಕೊಳ್ಳುವಲ್ಲಿ ಸರ್ಕಾರ ನಿರತವಾಗಿದೆ. ಜನರ ಕಾಳಜಿ ಗೌಣವಾಗಿದೆ’ ಎಂದು ಅವರು ಹೇಳಿದರು.
‘ಸ್ಮಾರ್ಟ್ ಮಿಟರ್ ಅಳವಡಿಕೆಯಲ್ಲಿ ಅವ್ಯವಹಾರ ಆಗಿದೆ. ರೈತರು, ಮಹಿಳೆಯರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ. ವಿದ್ಯುತ್ ದರ, ವೈದ್ಯಕೀಯ ಸೌಲಭ್ಯಗಳು ಏರಿಕೆಯಾಗಿವೆ. ಮುದ್ರಾಂಕ, ದತ್ತು ಸ್ವೀಕಾರ ಪತ್ರ, ಅಪಿಡವಿಟ್, ಮಾರಾಟ ಒಪ್ಪಂದ, ತೆರಿಗೆ, ಮುದ್ರಾಂಕ ಶುಲ್ಕ, ಮಾರ್ಗಸೂಚಿ ದರ, ನಿವೇಶನ, ಅಪಾರ್ಟ್ ಮೆಂಟ್, ವಾಹನ ನೋಂದಣಿ ಶುಲ್ಕ ಏರಿಕೆಯಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕಾಲೇಜು, ಸೀಟುಗಳ ಶುಲ್ಕ, ಮೆಟ್ರೋ ದರ, ವಿದ್ಯುತ್ ಚಾಲಿತ ವಾಹನಗಳ ಬೆಲೆ, ಬಸ್ ದರ ಏರಿಕೆಯಾಗಿದೆ. ಮದ್ಯ ಮಾರಾಟ ದರವೂ ಏರಿದೆ’ ಎಂದು ಹೇಳಿದರು.
‘ಬೆಲೆ ಏರಿಕೆ ಮತ್ತು ಶಾಸಕರ ಅಮಾನತು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ಆಹೋರಾತ್ರಿ ಧರಣಿ ಮಾಡುತ್ತಿದ್ದೇವೆ. ಬಳ್ಳಾರಿಯಿಂದಲೂ ಕಾರ್ಯಕರ್ತರು ಹೋಗುತ್ತಿದ್ದೇವೆ’ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.
‘ಸ್ಥಳೀಯ ಸಮಸ್ಯೆಗಳೂ ಹೆಚ್ಚಾಗಿವೆ. ಈ ವಿಷಯಗಳನ್ನು ಕೈಗೆತ್ತಿಕೊಂಡು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ಬಳ್ಳಾರಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಮೆಗಾ ಡೇರಿಯನ್ನು ಹಗರಿಬೊಮ್ಮನಹಳ್ಳಿಗೆ ವರ್ಗಾಯಿಸುವ ಹುನ್ನಾರ ನಡೆದಿದೆ. ಅದರ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದು ತಿಳಿಸಿದರು.
‘ನಾನು ಕೆಎಂಎಫ್ ಅಧ್ಯಕ್ಷನಾಗಿದ್ದಾಗ ₹9 ಸಾವಿರ ಕೋಟಿ ವಹಿವಾಟು ನಡೆಯುತ್ತಿತ್ತು. ಆದರೆ, ಈಗ ಕೆಎಂಎಫ್ ನಷ್ಟದಲ್ಲಿದೆ. ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಶ್ರೀರಾಮುಲು ಅವರ ಕುರಿತು ಕೇಳಲಾದ ಪ್ರಶ್ನೆಗೆ, ‘ಆ ಬಗ್ಗೆ ನಾನು ಮಾತನಾಡುವುದಿಲ್ಲ. ಬೆಲೆ ಏರಿಕೆ ಬಗ್ಗೆ ಮಾತನಾಡುವಂತೆ ನನಗೆ ಪಕ್ಷದ ಸೂಚನೆ ಇದೆ. ಅದಷ್ಟೇ ಮಾತನಾಡುತ್ತೇನೆ’ ಎಂದರು.
ಸ್ಥಳೀಯ ಬಿಜೆಪಿ ಮುಖಂಡ ಬಿ.ಕೆ ಸುಂದರ್, ಓಬಳೇಶ, ಅರುಣಾ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.