ADVERTISEMENT

ತುಂಗಭದ್ರಾ ಪುಷ್ಕರ ಬದಲಿಸಿತು ಚಹರೆ

ಕೊರೊನಾ ಭಯಬಿಟ್ಟು ಹಂಪಿಗೆ ದೌಡಾಯಿಸುತ್ತಿರುವ ಭಕ್ತರು, ಪ್ರವಾಸಿಗರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 30 ನವೆಂಬರ್ 2020, 19:30 IST
Last Updated 30 ನವೆಂಬರ್ 2020, 19:30 IST
ಹಂಪಿ ಉಗ್ರ ನರಸಿಂಹ ಸ್ಮಾರಕ ಬಳಿಯ ಬಯಲು ಪ್ರದೇಶದಲ್ಲಿ ಪ್ರವಾಸಿಗರ ವಾಹನಗಳು ನಿಂತಿರುವುದು
ಹಂಪಿ ಉಗ್ರ ನರಸಿಂಹ ಸ್ಮಾರಕ ಬಳಿಯ ಬಯಲು ಪ್ರದೇಶದಲ್ಲಿ ಪ್ರವಾಸಿಗರ ವಾಹನಗಳು ನಿಂತಿರುವುದು   

ಹೊಸಪೇಟೆ: ತುಂಗಭದ್ರಾ ನದಿ ಪುಷ್ಕರ ಮಹೋತ್ಸವವು ಹಂಪಿಯಲ್ಲಿನ ವಾತಾವರಣ ಸಂಪೂರ್ಣ ಬದಲಿಸಿ ಬಿಟ್ಟಿದೆ.

ಲಾಕ್‌ಡೌನ್‌ ಸಡಿಲಿಕೆಗೊಂಡು ದರ್ಶನಕ್ಕೆ ದೇವಸ್ಥಾನ ಮುಕ್ತಗೊಂಡಿತು. ಸ್ಮಾರಕಗಳು ಪ್ರವಾಸಿಗರಿಗೆ ಬಾಗಿಲು ತೆರೆದಿವೆ. ಆದರೆ, ಕೊರೊನಾ ಭೀತಿಯಿಂದ ಅಷ್ಟೇನೂ ದೊಡ್ಡ ಸಂಖ್ಯೆಯಲ್ಲಿ ಜನ ಹಂಪಿಯತ್ತ ಮುಖ ಮಾಡಿರಲಿಲ್ಲ. ಅಲ್ಪ ಪ್ರಮಾಣದ ಚೇತರಿಕೆ ಕಂಡಿತು. ಇತ್ತೀಚೆಗೆ ಆಯೋಜಿಸಿದ್ದ ಸಾಂಕೇತಿಕ ‘ಹಂಪಿ ಉತ್ಸವ’ದಲ್ಲೂ ಅಷ್ಟೇನೂ ಜನ ಪಾಲ್ಗೊಂಡಿರಲಿಲ್ಲ.

ಅಖಿಲ ಭಾರತ ಕಮ್ಮಚೇರು ಸಂಘವು ಪುಷ್ಕರ ಆಯೋಜನೆಗೆ ಕೋರಿದ್ದ ಅನುಮತಿಯನ್ನು ಜಿಲ್ಲಾಡಳಿತ ನಿರಾಕರಿಸಿತು. ಆದರೂ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪುಷ್ಕರ ಪುಣ್ಯ ಸ್ನಾನದಲ್ಲಿ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಿತ್ಯ ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದ ಅಪಾರ ಸಂಖ್ಯೆಯ ಭಕ್ತರು ಬಂದು ತುಂಗಭದ್ರೆಯಲ್ಲಿ ಮಿಂದೆದ್ದು ಹೋಗುತ್ತಿದ್ದಾರೆ.

ADVERTISEMENT

ಭಕ್ತರ ಸಂಖ್ಯೆ ಎಷ್ಟಿದೆ ಎಂದರೆ ಹಂಪಿಯ ಗ್ರಾಮ ಪಂಚಾಯಿತಿ ಕಚೇರಿ ಎದುರಿನ ವಿಶಾಲ ಪ್ರದೇಶವು ವಾಹನ ನಿಲುಗಡೆಗೆ ಸಾಲುತ್ತಿಲ್ಲ. ಹೀಗಾಗಿಯೇ ಸಂಚಾರ ಪೊಲೀಸರು ಕೃಷ್ಣ ದೇವಸ್ಥಾನದ ಹಿಂಭಾಗದಲ್ಲಿನ ಬಯಲನ್ನು ವಾಹನಗಳ ನಿಲುಗಡೆಗೆ ಬಳಸಿಕೊಳ್ಳುತ್ತಿದ್ದಾರೆ.

ವಿಠೋಬಾ ಭಕ್ತರು:

ಮಹಾರಾಷ್ಟ್ರದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ದೇವಸ್ಥಾನಗಳು ಬಾಗಿಲು ತೆರೆದಿಲ್ಲ. ಪಂಡರಾಪುರದ ವಿಠೋಬಾ, ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನವೂ ಹೊರತಾಗಿಲ್ಲ. ವಿಠೋಬಾ ಭಕ್ತರು ಈಗ ಹಂಪಿಯತ್ತ ಮುಖ ಮಾಡಿದ್ದಾರೆ.

ಹಂಪಿಯಲ್ಲಿ ವಿಜಯ ವಿಠಲ ದೇವಸ್ಥಾನವಿದ್ದು, ಅಲ್ಲಿಗೆ ಪಂಡರಾಪುರದ ಭಕ್ತರು ಭೇಟಿ ಕೊಡುತ್ತಿದ್ದಾರೆ. ಆದರೆ, ಹಂಪಿಯ ವಿಜಯ ವಿಠ್ಠಲ ದೇವಸ್ಥಾನದಲ್ಲಿ ಪೂಜೆಗೆ ಅವಕಾಶವಿಲ್ಲ.

ಪುಷ್ಕರ ಪುಣ್ಯಸ್ನಾನ, ವಿಠ್ಠಲನ ಭಕ್ತರು ದಂಡಿ ದಂಡಿಯಾಗಿ ಹಂಪಿಗೆ ಬರುತ್ತಿರುವುದು ನೋಡಿದರೆ ಯಾರೊಬ್ಬರಲ್ಲೂ ಕೊರೊನಾ ಕುರಿತ ಭಯ, ಅಳುಕು ಕಾಣುತ್ತಿಲ್ಲ. ಈ ಆತ್ಮವಿಶ್ವಾಸವೇ ಜನ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಲು ಮುಖ್ಯ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು. ಹೊರರಾಜ್ಯದವರು ಬರುತ್ತಿರುವುದನ್ನು ನೋಡಿ ನೆರೆಯ ಕೊಪ್ಪಳ, ರಾಯಚೂರು, ವಿಜಯಪುರ, ಗದಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಬರುತ್ತಿದ್ದಾರೆ. ಮಕ್ಕಳಿಂದ ಹಿರಿಯರ ವರೆಗೆ ಎಲ್ಲರೂ ಬರುತ್ತಿರುವುದು ವಿಶೇಷ.

ವ್ಯಾಪಾರಿಗಳಲ್ಲಿ ಸಂತಸ:

ನದಿ ಸ್ನಾನಘಟ್ಟ, ದೇವಸ್ಥಾನ, ಸ್ಮಾರಕ ಹೀಗೆ ಎಲ್ಲೆಡೆ ಭಕ್ತರು, ಪ್ರವಾಸಿಗರೇ ಕಾಣಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿರುವುದರಿಂದ ಸ್ಥಳೀಯ ವ್ಯಾಪಾರಿಗಳಲ್ಲಿ ಸಂತಸ ಮೂಡಿದೆ.

ತೆಂಗಿನಕಾಯಿ, ಹೂ, ಬಾಳೆಹಣ್ಣು, ಎಳನೀರು, ತಂಪುಪಾನೀಯ, ಕಡಲೆಕಾಯಿ, ಮಿರ್ಚಿ ಭಜ್ಜಿ, ಆಟಿಕೆ ಸೇರಿದಂತೆ ಇತರೆ ಸಣ್ಣ ವ್ಯಾಪಾರಿಗಳು ಕೈತುಂಬ ಹಣ ಗಳಿಸುತ್ತಿದ್ದಾರೆ. ಇಷ್ಟು ದಿನ ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದ ಆಟೊ ಚಾಲಕರಿಗೆ ಈಗ ಮೈತುಂಬ ಕೆಲಸ.

ಅದರಲ್ಲೂ ಕೃಷ್ಣ ದೇವಸ್ಥಾನದ ಹಿಂಭಾಗದಲ್ಲಿ ಪ್ರವಾಸಿಗರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದ್ದರಿಂದ ಆಟೊ ರಿಕ್ಷಾದವರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಅಲ್ಲಿಂದ ನದಿ ವರೆಗೆ ಸುಮಾರು ಒಂದು ಕಿ.ಮೀ. ದೂರವಾಗುತ್ತದೆ. ಸಹಜವಾಗಿಯೇ ಆಟೊದವರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.