ADVERTISEMENT

ಹೊಸಪೇಟೆ: 'ವಾಲ್ಮೀಕಿ ಜಾತ್ರಾ ಮಹೋತ್ಸವದೊಳಗೆ ಮೀಸಲು ಹೆಚ್ಚಿಸಲಿ'

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 8:10 IST
Last Updated 23 ನವೆಂಬರ್ 2020, 8:10 IST
ಹರಿಹರ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ
ಹರಿಹರ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ   

ಹೊಸಪೇಟೆ: 'ಹರಿಹರದಲ್ಲಿ ಫೆ. 8, 9ರಂದು ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಲಿದೆ. ಅಷ್ಟರೊಳಗೆ ವಾಲ್ಮೀಕಿ ನಾಯಕ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 7.5ರಷ್ಟು ಮೀಸಲಾತಿ‌ ಸರ್ಕಾರ ನೀಡದಿದ್ದರೆ ಪುನಃ ಹೋರಾಟ ಆರಂಭಿಸಲಾಗುವುದು' ಎಂದು ಹರಿಹರದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗಿತ್ತು. ಅದಕ್ಕೆ ಮಣಿದು ಸರ್ಕಾರ, ಸದ್ಯ ಚುನಾವಣೆ ನೀತಿ ಸಂಹಿತೆ ಇದೆ. ಡಿಸೆಂಬರ್ ಒಳಗೆ ಬೇಡಿಕೆ ಈಡೇರಿಸಲಾಗುವುದು ಎಂದು ತಿಳಿಸಿತ್ತು. ಕೊನೆಯ ಪಕ್ಷ ಫೆಬ್ರುವರಿಯಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವದ ಒಳಗೆ ಮೀಸಲಾತಿ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಬೇಕು' ಎಂದು ಒತ್ತಾಯಿಸಿದರು.

'ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕುರುಬ ಸಮಾಜದವರು ನಡೆಸುತ್ತಿರುವ ಹೋರಾಟದ ಕುರಿತು ಪ್ರತಿಕ್ರಿಯಿಸುವುದಿಲ್ಲ' ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ADVERTISEMENT

'ಹೊಸಪೇಟೆ ಸೇರಿದಂತೆ ರಾಜ್ಯದ ನೂರು ವಿಧಾನಸಭೆ ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮಾಜದವರು ನಿರ್ಣಾಯಕರಾಗಿದ್ದಾರೆ. ಆದರೆ, ಆರ್ಥಿಕವಾಗಿ ಸಬಲರಾದವರಿಗೆ ಪಕ್ಷಗಳು ಟಿಕೆಟ್ ಕೊಡುತ್ತಿವೆ. ಅಸಂಘಟಿತ ವಾಲ್ಮೀಕಿ ಸಮಾಜದಲ್ಲಿ ಈಗಷ್ಟೇ ಅರಿವು ಮೂಡುತ್ತಿದೆ. ಅಲ್ಲದೇ ಟಿಕೆಟ್ ಕೊಡುವಾಗ ರಾಜಕೀಯ ಪಕ್ಷಗಳು ಅನುಸರಿಸುವ ಮಾನದಂಡಗಳೇ ಬೇರೆ.‌ ಆದರೂ ಸಮಾಜದ ಮುಖಂಡ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಅನೇಕ ನಾಯಕರು ಸಾಮಾನ್ಯ ಕ್ಷೇತ್ರಗಳಲ್ಲಿ ಗೆದ್ದು ಬರುತ್ತಿದ್ದಾರೆ' ಎಂದು ಹೇಳಿದರು.

'ಫೆಬ್ರುವರಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧ ಭಾಗಗಳಿಂದ ಸಮಾಜದ ಅಸಂಖ್ಯ ಜನ ಪಾಲ್ಗೊಳ್ಳುವರು. ಶೈಕ್ಷಣಿಕ, ಸಾಮಾಜಿಕ, ರಾಜಕೀಯ ವಿಷಯಗಳ ಕುರಿತು ಚಿಂತನ ಮಂಥನ ನಡೆಯಲಿವೆ. ಈ ಕುರಿತು ಸಮಾಜದವರಿಗೆ ಅರಿವು ಮೂಡಿಸಲಾಗುವುದು. ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಸರ್ಕಾರಕ್ಕೆ ಹಕ್ಕೊತ್ತಾಯ ಕೂಡ ಮಾಡಲಾಗುವುದು' ಎಂದು ತಿಳಿಸಿದರು.

'ವಿಜಯನಗರ ಜಿಲ್ಲೆ ಘೋಷಣೆಯಾಗಿರುವುದು ಸಂತಸದ ವಿಷಯ. ಹಂಪಿ, ಕಿಷ್ಕಿಂದೆ ಹಾಗೂ ಪಂಪಾ ಸರೋವರಗಳ ಉಲ್ಲೇಖ ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣದಲ್ಲಿ ಬರುತ್ತದೆ. ಈ ಸ್ಥಳ ಚಾರಿತ್ರಿಕವಾಗಿ ಮಹತ್ವ ಪಡೆದಿದೆ. ಇದು ಜಿಲ್ಲೆಯಾಗುತ್ತಿರುವುದರಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೂ ಅನುಕೂಲವಾಗಲಿದೆ' ಎಂದು ಅಭಿಪ್ರಾಯಪಟ್ಟರು.

ವಾಲ್ಮೀಕಿ ಸಮಾಜದ ಬಳ್ಳಾರಿ ಜಿಲ್ಲಾ ಧರ್ಮದರ್ಶಿ ಜಂಬಯ್ಯ ನಾಯಕ, ಮುಖಂಡ ಕಟಗಿ ಜಂಬಯ್ಯ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.