ADVERTISEMENT

ಅಪೌಷ್ಟಿಕತೆ ಸಮಸ್ಯೆ: ಗಣಿಬಾಧಿತ ಜಿಲ್ಲೆಗಳ ಮಕ್ಕಳಿಗೆ ಉಸ್ಲಿ, ಹಣ್ಣು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:32 IST
Last Updated 1 ನವೆಂಬರ್ 2025, 5:32 IST
ಕಡಲೆಕಾಳಿನ ಖಾದ್ಯ 
ಕಡಲೆಕಾಳಿನ ಖಾದ್ಯ    

ಬಳ್ಳಾರಿ: ರಾಜ್ಯದ ಗಣಿಬಾಧಿತ ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳ ಅಪೌಷ್ಟಿಕತೆ ಸಮಸ್ಯೆ ನಿವಾರಿಸಲು ‘ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮವು (ಕೆಎಂಇಆರ್‌ಸಿ) ಸರ್ಕಾರಿ ಶಾಲೆಗಳಲ್ಲಿ ಉಸಲಿ, ಹಣ್ಣು ವಿತರಿಸಲು ನಿರ್ಧರಿಸಿದೆ. ಗಣಿಗಾರಿಕೆ ಪರಿಣಾಮ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆಯಡಿ ನಾಲ್ಕು ತಾಲ್ಲೂಕುಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.  

ಇದರ ಅನುಷ್ಠಾನಕ್ಕೆಂದೇ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಿ, ನಾಲ್ಕು ತಾಲೂಕುಗಳಿಗೆ ಕೆಎಂಇಆರ್‌ಸಿ ಪ್ರತ್ಯೇಕ ಆದೇಶ ಹೊರಡಿಸಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿಗೆ ₹13.38 ಕೋಟಿ, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿಗೆ ₹14.42 ಕೋಟಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿಗೆ ₹8.97ಕೋಟಿ ಮತ್ತು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿಗೆ ₹8.36 ಅನುದಾನ ಹಂಚಿಕೆ ಮಾಡಲಾಗಿದೆ. 

ಆರಂಭದಲ್ಲಿ ಮೊಟ್ಟೆ ವಿತರಿಸಲು ಪ್ರಸ್ತಾವ ಸಲ್ಲಿಸಲಾಗಿತ್ತು.ಆದರೆ, ಅಜೀಂ ಪ್ರೇಮ್‌ಜೀ ಪ್ರತಷ್ಠಾನವು ಈಗಾಗಲೇ ಶಾಲೆ ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ವಿತರಿಸುತ್ತಿರುವುದು ಕೆಎಂಇಆರ್‌ಸಿ ಗಮನಕ್ಕೆ ಬಂತು. ಬಳಿಕ ಪ್ರಸ್ತಾವವನ್ನು ಬದಲಿಸಲಾಯಿತು. ಅದರಂತೆ ವಿದ್ಯಾರ್ಥಿಗಳಿಗೆ ಕಡಲೆಕಾಳು, ಹೆಸರುಕಾಳು, ಕಡಲೆ ಉಸ್ಲಿ, ಕಿತ್ತಳೆ, ಮುಸುಂಬಿ ಮತ್ತು ಸಪೋಟಾ ಹಣ್ಣುಗಳನ್ನು ವಿತರಿಸಲಾಗುತ್ತದೆ.

ADVERTISEMENT

ಮೂರು ವರ್ಷಗಳಿಗೆ ಬೇಕಾದ ಸಾಮಾಗ್ರಿಯನ್ನು ಹಂತ ಹಂತವಾಗಿ ಖರೀದಿಸಲು, ಅಡುಗೆ ಸಹಾಯಕರಿಗೆ ಗೌರವಧನ, ತರಬೇತಿ ನೀಡಲು ಅನುದಾನವನ್ನು ಬಳಸಲು ಸೂಚಿಸಲಾಗಿದೆ.  

ಎಸ್‌ಒಪಿ ಪಾಲಿಸಲು ಸೂಚನೆ: ಉಸ್ಲಿ, ಹಣ್ಣು ವಿತರಣೆಯ ಈ ಯೋಜನೆಯಲ್ಲಿ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ಪಾಲಿಸುವಂತೆ ಕೆಎಂಇಆರ್‌ಸಿ ತನ್ನ ಆದೇಶದಲ್ಲಿ ಹೇಳಿದೆ. ಪೌಷ್ಟಿಕಾಂಶ, ನೈರ್ಮಲ್ಯ ಮತ್ತು ಸುರಕ್ಷತೆ ಕಾಪಾಡಿಕೊಳ್ಳಲು ತಾಕೀತು ಮಾಡಲಾಗಿದೆ. ಈ ಯೋಜನೆ ಮೇಲೆ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸೇರಿ ಸ್ಥಳೀಯ ಸರ್ಕಾರಿ ಸಂಸ್ಥೆಗಳು ನಿಗಾವಹಿಸಬೇಕು ಎಂದು ತಿಳಿಸಲಾಗಿದೆ.  

ಪೌಷ್ಟಿಕ ಆಹಾರ ವಿತರಣೆ ಯೋಜನೆ ಯಶಸ್ವಿಯಾದರೆ ಮತ್ತು ಉತ್ತಮ ಸ್ಪಂದನೆ ದೊರೆತರೆ ಕೆಎಂಇಆರ್‌ಸಿಯ ವ್ಯಾಪ್ತಿಯ 10 ತಾಲ್ಲೂಕುಗಳಿಗೆ ವಿಸ್ತರಿಸುವ ಉದ್ದೇಶವಿದೆ.
ಸಂಜಯ ಬಿಜ್ಜೂರು, ವ್ಯವಸ್ಥಾಪಕ ನಿರ್ದೇಶಕ, ಕೆಎಂಇಆರ್‌ಸಿ

‘ಗಣಿ ಬಾಧಿತ ಪ್ರದೇಶಗಳಲ್ಲಿ ಧೂಳು ಮತ್ತು ಸಂಬಂಧಿತ ಸಮಸ್ಯೆಯಿಂದ ಮಕ್ಕಳು ಅಪೌಷ್ಟಿತಕೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಈ ಕಾರ್ಯಕ್ರಮ ನೆರವಾಗಲಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.