ADVERTISEMENT

ನರಸಿಂಗಪುರ ಬಂಡಿದಾರಿಯಲ್ಲಿ ಚೆಕ್‌ಪೋಸ್ಟ್‌ ತೆರವಿಗೆ ಆರ್‌ಐಪಿಎಲ್‌ ನಕಾರ

ಅದಿರುವ ಸಾಗಣೆಗೆ ಕಿರ್ಲೋಸ್ಕರ್‌ ಅಕ್ರಮ ದಾರಿ ಆರೋಪ * ಜಂಟಿ ಸಮಿತಿಯಿಂದ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 5:58 IST
Last Updated 10 ಅಕ್ಟೋಬರ್ 2025, 5:58 IST
ಸಂಡೂರು ತಾಲೂಕಿನ ನರಸಿಂಗಪುರ ಗ್ರಾಮ ಪಂಚಾಯಿತಿಯ ರಣಜಿತ್‌ಪುರ ಗ್ರಾಮದ ವ್ಯಾಪ್ತಿಯಲ್ಲಿ ಕಿರ್ಲೋಸ್ಕರ್‌ ಸಂಸ್ಥೆಯು ತನ್ನ ಗಣಿಯಿಂದ ಅದಿರು ಸಾಗಣೆಗೆ ಬಳಸುತ್ತಿರುವ ದಾರಿಯನ್ನು ಅಧಿಕಾರಿಗಳು ಗುರುವಾರ ಪರಿಶೀಲಿಸಿದರು
ಸಂಡೂರು ತಾಲೂಕಿನ ನರಸಿಂಗಪುರ ಗ್ರಾಮ ಪಂಚಾಯಿತಿಯ ರಣಜಿತ್‌ಪುರ ಗ್ರಾಮದ ವ್ಯಾಪ್ತಿಯಲ್ಲಿ ಕಿರ್ಲೋಸ್ಕರ್‌ ಸಂಸ್ಥೆಯು ತನ್ನ ಗಣಿಯಿಂದ ಅದಿರು ಸಾಗಣೆಗೆ ಬಳಸುತ್ತಿರುವ ದಾರಿಯನ್ನು ಅಧಿಕಾರಿಗಳು ಗುರುವಾರ ಪರಿಶೀಲಿಸಿದರು   

ಬಳ್ಳಾರಿ: ನರಸಿಂಗಪುರ ಗ್ರಾಮ ಪಂಚಾಯಿತಿ, ರಣಜಿತ್‌ ಗ್ರಾಮದ ವ್ಯಾಪ್ತಿಯಲ್ಲಿ ರೈತರು ಓಡಾಡಲು ಹಿಂದಿನಿಂದಲೂ ಬಳಸುತ್ತಿರುವ ಬಂಡಿದಾರಿಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ ಅನ್ನು ತೆರವುಗೊಳಿಸುವಂತೆ ತಹಶೀಲ್ದಾರ್‌ ನೀಡಿದ ಸೂಚನೆಯನ್ನು ‘ರಣಜಿತ್‌ಪುರ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ (ಆರ್‌ಐಪಿಎಲ್‌)’ ಗುರುವಾರ ನಿರ್ಲಕ್ಷಿಸಿತು.

ಕಿರ್ಲೋಸ್ಕರ್ ಕಂಪನಿಯು ಸರ್ಕಾರದ ಪೂರ್ವಾನುಮತಿ ಪಡೆಯದೆ ಕಂದಾಯ ಭೂಮಿಯ ಮೂಲಕ ಅದಿರು ಸಾಗಾಣಿಕೆ ಮಾಡುತ್ತಿದೆ ಎಂದು ಆರೋಪಿಸಿ ಜನಸಂಗ್ರಾಮ ಪರಿಷತ್‌ ನೀಡಿದ್ದ ದೂರು ಮತ್ತು ‘ಪ್ರಜಾವಾಣಿ’ ವರದಿ ಆಧರಿಸಿ, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ರಚನೆಯಾಗಿರುವ ಪರಿಶೀಲನಾ ತಂಡ ಗುರುವಾರ ಸ್ಥಳದಲ್ಲಿ ಅವಲೋಕನ ನಡೆಸಿತು. 

ಕಿರ್ಲೋಸ್ಕರ್‌ ಕಂಪನಿಯು ಆರ್‌ಐಪಿಎಲ್‌ ಕಂಪನಿಯ ಸುಪರ್ದಿಯಲ್ಲಿರುವ ದಾರಿಯಲ್ಲಿ ಅದಿರು ಸಾಗಣೆ ಮಾಡುತ್ತಿದೆ. ಇದು ರೈತರು ಬಳಸುತ್ತಿರುವ ಬಂಡಿದಾರಿ. ಆರ್‌ಐಪಿಎಲ್‌ ಕಂಪನಿಯು ಇಲ್ಲಿ ಚೆಕ್ ಪೋಸ್ಟ್ ಹಾಕಿದ್ದೂ ಅಲ್ಲದೇ, ರೈತರ ಸಂಚಾರವನ್ನೇ ತಡೆಯುತ್ತಿದೆ ಎಂದು ಜನಸಂಗ್ರಾಮ ಪರಿಷತ್‌ ಮತ್ತು ರೈತ ಮುಖಂಡರು ಆರೋಪಿಸಿದರು. ಚೆಕ್‌ಪೋಸ್ಟ್ ತೆರವು ಮಾಡುವಂತೆ ಸಂಡೂರು ತಹಶೀಲ್ದಾರ್ ಅನಿಲ್‌ ಕುಮಾರ್‌ ಆರ್‌ಐಪಿಎಲ್‌ಗೆ ತಾಕೀತು ಮಾಡಿದರು. ಇವರ ಆದೇಶಕ್ಕೆ ಕಂಪನಿ ಅಧಿಕಾರಿಗಳು ಮನ್ನಣೆ ನೀಡಲಿಲ್ಲ. ಆರ್‌ಐಪಿಎಲ್‌ನ ನಡೆಯನ್ನು ರೈತರು ಆಕ್ಷೇಪಿಸಿದರು. ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

‘ಈ ಜಾಗ ‘ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ’ಯಿಂದ ನಮಗೆ ಸಿಕ್ಕಿದೆ’ ಎಂಬ ವಾದಕ್ಕೆ ಆರ್‌ಐಪಿಎಲ್‌ ಅಂಟಿಕೊಂಡಿತು. ಆದರೆ, ಇದರ ಬಗ್ಗೆ ಸ್ಪಷ್ಟನೆ ನೀಡಲು ಜಂಟಿ ಸಮಿತಿಯ ಭಾಗವಾಗಿದ್ದ ಕೆಐಎಡಿಬಿ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಜಂಟಿ ಪರಿಶೀಲನೆ ಅರ್ಧಕ್ಕೆ ಮೊಟಕುಗೊಂಡಿತು. ಸ್ಥಳ ಪರಿಶೀಲನೆಯನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡಲು ನಿರ್ಧರಿಸಲಾಯಿತು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಉಪ ವಲಯ ಅರಣ್ಯ ಅಧಿಕಾರಿ, ಕಿರ್ಲೋಸ್ಕರ್ ಗಣಿ ಸಿಬ್ಬಂದಿ ಜಂಟಿ ಸಮಿತಿಯಲ್ಲಿ ಇದ್ದರು. 

ಸ್ಥಳ ಪರಿಶೀಲನೆ ವೇಳೆ, ಕಿರ್ಲೋಸ್ಕರ್‌ ಕಂಪನಿಯ ಅಧಿಕಾರಿಗಳು, ಜನಸಂಗ್ರಾಮ ಪರಿಷತ್‌ನ ಮುಖಂಡರಾದ ಟಿ.ಎಂ ಶಿವಕುಮಾರ್, ಶ್ರೀಶೈಲ ಆಲದಳ್ಳಿ, ರೈತ ಮುಖಂಡ ಎಂ. ಎಲ್. ಕೆ. ನಾಯ್ಡು, ಮೌನೇಶ್, ಜಿ.ಕೆ. ನಾಗರಾಜ್, ಈರಣ್ಣ ಮೂಲಿಮನಿ, ಮಂಜುನಾಥ್ ಕಾಡಪ್ಪ, ಕಾಶಪ್ಪ, ನರಸಿಂಗಾಪುರ, ರಣಜಿತ್‌ಪುರ ಗ್ರಾಮದ ರೈತರು ಇದ್ದರು.

ಬಂಡಿ ದಾರಿಯಲ್ಲಿ ಅಕ್ರಮವಾಗಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಅದಿರು ಲಾರಿಗಳ ಸಂಚಾರಕ್ಕಷ್ಟೇ ಅವಕಾಶ ನೀಡಲಾಗಿದೆ. ಚೆಕ್‌ಪೋಸ್ಟ್‌ ತೆರವು ಮಾಡಿ ರೈತರ ಬಳಕೆಗೆ ಅನುಮತಿ ನೀಡಬೇಕು

ಟಿ.ಎಂ. ಶಿವಕುಮಾರ್‌ ಮುಖಂಡರು ಜನಸಂಗ್ರಾಮ ಪರಿಷತ್‌

ಕಿರ್ಲೋಸ್ಕರ್‌ ಕಂಪನಿ ಅದಿರು ಸಾಗಣೆಗೆ ಬಳಸುತ್ತಿರುವ ರಸ್ತೆಯ ಸ್ಥಳ ಪರಿಶೀಲನೆ ನಡೆಸಲಾಯಿತು. ಕೆಐಎಡಿಬಿ ಅಧಿಕಾರಿಗಳು ಗೈರಾಗಿದ್ದರಿಂದ ಕೆಲ ವಿಷಯಗಳಲ್ಲಿ ಸ್ಪಷ್ಟತೆ ಸಿಕ್ಕಿಲ್ಲ. ಅವರ ಉಪಸ್ಥಿತಿಯಲ್ಲಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಲಾಗುವುದು

ಅನಿಲ್‌ ಕುಮಾರ್‌ ಸಂಡೂರು ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.