ADVERTISEMENT

ನಿಯಮ ಮಾಡಿದವರಿಂದಲೇ ನಿಯಮ ಉಲ್ಲಂಘನೆ!

ಕೆಟ್ಟು ಹೋದ ಬ್ಯಾಟರಿಚಾಲಿತ ವಾಹನಗಳು; ನಿರ್ಬಂಧಿತ ಪ್ರದೇಶದಲ್ಲಿ ಮ್ಯಾಕ್ಸಿಕ್ಯಾಬ್‌ ಸಂಚಾರಕ್ಕೆ ಅನುವು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಜನವರಿ 2019, 20:00 IST
Last Updated 1 ಜನವರಿ 2019, 20:00 IST
ಬ್ಯಾಟರಿಚಾಲಿತ ವಾಹನದಲ್ಲಿ ಕೆಲ ಪ್ರವಾಸಿಗರು ಹೋಗುತ್ತಿದ್ದರೆ, ಇನ್ನುಳಿದವರು ತಮ್ಮ ಪಾಳಿಗಾಗಿ ಸರತಿ ಸಾಲಿನಲ್ಲಿ ಕಾದು ನಿಂತಿರುವುದು
ಬ್ಯಾಟರಿಚಾಲಿತ ವಾಹನದಲ್ಲಿ ಕೆಲ ಪ್ರವಾಸಿಗರು ಹೋಗುತ್ತಿದ್ದರೆ, ಇನ್ನುಳಿದವರು ತಮ್ಮ ಪಾಳಿಗಾಗಿ ಸರತಿ ಸಾಲಿನಲ್ಲಿ ಕಾದು ನಿಂತಿರುವುದು   

ಹೊಸಪೇಟೆ: ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವುಪ್ರವಾಸಿಗರಿಗೆ ಮ್ಯಾಕ್ಸಿ ಕ್ಯಾಬ್‌ ವ್ಯವಸ್ಥೆ ಮಾಡಿ ಸ್ವತಃ ಹಂಪಿಯಲ್ಲಿ ಮಾಡಿರುವ ನಿಯಮಗಳನ್ನು ಗಾಳಿಗೆ ತೂರಿದೆ.

ಹಂಪಿಯವಿಜಯ ವಿಠಲ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹೇರಿದೆ. ವಾಹನಗಳಿಂದ ಉಂಟಾಗುವ ಮಾಲಿನ್ಯದಿಂದ ಸ್ಮಾರಕಗಳು ಕಳೆಗುಂದದಿರಲಿ ಎಂಬ ಉದ್ದೇಶದಿಂದ ಈ ನಿಯಮ ಜಾರಿಗೆ ತಂದಿದೆ.

ವಿಜಯ ವಿಠಲ ದೇಗುಲಕ್ಕೆ ಹೋಗಿ ಬರುವ ಪ್ರವಾಸಿಗರಿಗೆ ಪ್ರಾಧಿಕಾರವು ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಮಾಡಿದೆ. ಆದರೆ, ಒಟ್ಟು 25 ವಾಹನಗಳ ಪೈಕಿ ಐದು ವಾಹನಗಳಷ್ಟೇ ಕೆಲಸ ನಿರ್ವಹಿಸುತ್ತಿವೆ. ಬಹುತೇಕ ಕೆಟ್ಟು ಹೋಗಿವೆ. ನವೆಂಬರ್‌ನಿಂದ ಫೆಬ್ರುವರಿವರೆಗೆ ದೇಶ–ವಿದೇಶಗಳಿಂದ ಅಪಾರ ಸಂಖ್ಯೆಯ ಪ್ರವಾಸಿಗರು ಹಂಪಿಗೆ ಬರುತ್ತಾರೆ. ಅದರಲ್ಲೂ ವಿಜಯ ವಿಠಲ ದೇವಸ್ಥಾನಕ್ಕೆ ಹೆಚ್ಚಿನವರು ಭೇಟಿ ಕೊಡುತ್ತಾರೆ. ಸಪ್ತಸ್ವರ ಮಂಟಪ, ಕಲ್ಲಿನ ತೇರು ಅಲ್ಲಿರುವ ಕಾರಣ ಹೆಚ್ಚಿನ ಜನ ಅದನ್ನು ಕಣ್ತುಂಬಿಕೊಳ್ಳಲು ಇಷ್ಟಪಡುತ್ತಾರೆ.

ADVERTISEMENT

ಐದು ವಾಹನಗಳಷ್ಟೇ ಓಡಾಡುತ್ತಿರುವುದರಿಂದ ಪ್ರವಾಸಿಗರು ಗಂಟೆಗಟ್ಟಲೇ ಕಾದು ಕೂರುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವರು ನಡೆದುಕೊಂಡೇ ದೇಗುಲಕ್ಕೆ ಹೋಗುತ್ತಿದ್ದರೆ, ಹಿರಿಯ ನಾಗರಿಕರು, ಮಕ್ಕಳ ಜೊತೆ ಬಂದವರು ಅನಿವಾರ್ಯವಾಗಿ ತಡಹೊತ್ತು ಕಾದು ಕುಳಿತುಕೊಳ್ಳಬೇಕಾಗಿದೆ. ‘ಇಡೀ ದಿನ ಕಳೆದರೂ ಹಂಪಿಯ ಎಲ್ಲ ಸ್ಮಾರಕಗಳನ್ನು ನೋಡಲು ಆಗುವುದಿಲ್ಲ. ಅಂತಹದ್ದರಲ್ಲಿ ವಿಜಯ ವಿಠಲ ದೇಗುಲವೊಂದೆ ನೋಡಲು ಅರ್ಧ ದಿನ ಕಳೆದು ಹೋಗುತ್ತಿದೆ’ ಎಂದು ಅನ್ಯ ಭಾಗದಿಂದ ಬಂದ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ನಾನು ಕುಟುಂಬ ಸಮೇತ ಮುಂಬೈನಿಂದ ಇಲ್ಲಿಗೆ ಬಂದಿರುವೆ. ಇಷ್ಟೊಂದು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುವ ಸ್ಥಳಕ್ಕೆ ನಾಲ್ಕೈದು ವಾಹನಗಳಷ್ಟೇ ವ್ಯವಸ್ಥೆ ಮಾಡಿದರೆ ಹೇಗೆ? ಪ್ರವಾಸಿಗರು ಹಣ ಕೊಡಲು ಸಿದ್ಧರಿದ್ದರೂ ಸರಿಯಾದ ವ್ಯವಸ್ಥೆ ಮಾಡಲು ನಮ್ಮನ್ನಾಳುವವರಿಗೆ ಆಗುತ್ತಿಲ್ಲ. ಅರ್ಧ ದಿನ ವಿಠಲ ದೇಗುಲ ನೋಡಲು ಕಳೆದು ಹೋಗಿದೆ’ ಎಂದು ನಿವೃತ್ತ ಬ್ಯಾಂಕ್‌ ಉದ್ಯೋಗಿ ಕರ್ಣಂ ತಿಳಿಸಿದರು.

ಈ ಕುರಿತು ಪ್ರಾಧಿಕಾರದ ಆಯುಕ್ತ ಮೋತಿಲಾಲ್‌ ಲಮಾಣಿ ಅವರನ್ನು ಸಂಪರ್ಕಿಸಿದಾಗ, ‘25 ವಾಹನಗಳ ಪೈಕಿ 16 ಓಡಾಡುತ್ತಿವೆ. ಎಂಟು ವಾಹನಗಳು ಚಾರ್ಚ್‌ ಆಗುವಾಗ ಇನ್ನುಳಿದ ವಾಹನಗಳು ಸಂಚರಿಸುತ್ತವೆ. ಈಗ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದರಿಂದ ಸ್ವಲ್ಪ ಸಮಸ್ಯೆಯಾಗುತ್ತಿದೆ. ಹೀಗಾಗಿ ಮ್ಯಾಕ್ಸಿ ಕ್ಯಾಬ್‌ ವ್ಯವಸ್ಥೆ ಮಾಡಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರವಾಸಿಗರ ಅಗತ್ಯಕ್ಕೆ ತಕ್ಕಂತೆ ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗುವುದು. ಹೊಸ ವಾಹನಗಳಿಗೆ ಸಂಬಂಧಿಸಿದಂತೆ ಶೀಘ್ರ ಪ್ರಸ್ತಾವ ಕಳಿಸಿಕೊಡಲಾಗುವುದು’ ಎಂದು ಹೇಳಿದರು.

‘ವಿವಿಧ ಕಡೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಭೇಟಿ ಕೊಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರಾಧಿಕಾರ ವಾಹನಗಳ ವ್ಯವಸ್ಥೆ ಮಾಡಬೇಕು’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.