ADVERTISEMENT

ಬಳ್ಳಾರಿ | ಉಪ ಚುನಾವಣೆ: ಮಿತಿ ಮೀರದ ವೆಚ್ಚ

ಸಂಡೂರಿನ ವಿಜೇತ, ಪರಾಜಿತ ಅಭ್ಯರ್ಥಿಗಳ ಚುನಾವಣಾ ಖರ್ಚು ಬಹಿರಂಗ

ಆರ್. ಹರಿಶಂಕರ್
Published 2 ಜನವರಿ 2025, 4:45 IST
Last Updated 2 ಜನವರಿ 2025, 4:45 IST
ಬಂಗಾರು ಹನುಮಂತು 
ಬಂಗಾರು ಹನುಮಂತು    

ಬಳ್ಳಾರಿ: ತೀವ್ರ ಪೈಪೋಟಿಯಿಂದ ಕೂಡಿದ್ದ, ಪ್ರತಿಷ್ಠೆಯೇ ಪಣವಾಗಿದ್ದ, ದುಡ್ಡು ಧಾರಾಳವಾಗಿ ಹರಿದಾಡಿದ ಸಂಡೂರು ಉಪ ಚುನಾವಣೆಯ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಿವರ ಬಹಿರಂಗವಾಗಿದೆ. ಗೆದ್ದ, ಸೋತ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ನೀಡಿರುವ ಖರ್ಚಿನ ಮಾಹಿತಿ ಆಶ್ಚರ್ಯ ಹುಟ್ಟಿಸುವಂತಿದೆ. 

ಅಲ್ಲಿ ಇಷ್ಟು ಹಂಚಲಾಯಿತು, ಒಬ್ಬ ಅಭ್ಯರ್ಥಿ ಎರಡನೇ ಭಾರಿಗೆ ಹಣ ಹಂಚಿದರು ಎಂಬ ಗುಲ್ಲು ಕ್ಷೇತ್ರದಾದ್ಯಂತ ಹರಿಡಿತ್ತು. ಮೂರೇ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದರಿಂದ ಎಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಜಿಲ್ಲೆ, ರಾಜ್ಯದ ಜನರಿಗೂ ಸ್ಪಷ್ಟವಾಗಿತ್ತು ಗೊತ್ತಾಗುತ್ತಿತ್ತು.  ಒಟ್ಟಿನಲ್ಲಿ ಹಣದ ಹೊಳೆಯೇ ಹರಿದ ಚುನಾವಣೆ ಇದಾಗಿತ್ತು ಎನ್ನುತ್ತಾರೆ ಎರಡೂ ಪಕ್ಷಗಳ ಮುಖಂಡರು. 

ಇಂಥ ಚುನಾವಣೆಯಲ್ಲಿ ತಾವು ಖರ್ಚು ಮಾಡಿದ್ದು ₹26,96,202 ಎಂದು ವಿಜೇತ ಅಭ್ಯರ್ಥಿ, ಕಾಂಗ್ರೆಸ್‌ನ ಇ.ಅನ್ನಪೂರ್ಣ ಅಫಿಡವಿಟ್‌ ಸಲ್ಲಿಸಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಹೆಚ್ಚು ಹಣ ಖರ್ಚು ಮಾಡಿದ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. 

ADVERTISEMENT

ತಾರಾ ಪ್ರಚಾರಕರು ಇಲ್ಲದ ರ್‍ಯಾಲಿಗಳಿಗೆ ₹4,32,062, ತಾರಾಪ್ರಚಾರಕರ ರ್‍ಯಾಲಿಗೆ ₹9,79,591, ಪ್ರಚಾರಕ್ಕೆ ಬಳಸಿದ ಸಾಮಾಗ್ರಿಗಳಿಗಾಗಿ ₹1,48,349, ಪ್ರಚಾರ ವಾಹನಗಳಿಗೆ ₹4,19,100, ಕಾರ್ಯಕರ್ತರು, ಏಜೆಂಟರಿಗೆ ₹4,90,700 ಖರ್ಚು ಮಾಡಿರುವುದಾಗಿ ಅನ್ನಪೂರ್ಣ ಆಯೋಗಕ್ಕೆ ತಿಳಿಸಿದ್ದಾರೆ. 

ಅನ್ನಪೂರ್ಣ ಅವರು ತಮ್ಮ ಸ್ವಂತದ ₹20,11,000 ಹಣವನ್ನು ಚುನಾವಣೆಗೆ ಬಳಸಿದ್ದಾರೆ. ಇದರಲ್ಲಿ ₹5,000 ಕೈಯಲ್ಲಿದ್ದ ಹಣವಾದರೆ, ₹20,06,000 ಬ್ಯಾಂಕ್‌ ಖಾತೆಗಳಿಂದ ತೆಗೆದುಕೊಂಡಿದ್ದು ಎಂದು ಅವರು  ವೆಚ್ಚ ವಿವರದಲ್ಲಿ ತಿಳಿಸಿದ್ದಾರೆ. ಒಟ್ಟು ₹24,69,802 ಹಣವನ್ನು ಅನ್ನಪೂರ್ಣ ಅಥವಾ ಅವರ ಚುನಾವಣಾ ಏಜೆಂಟರು ಖರ್ಚು ಮಾಡಿರುವುದಾಗಿ ಹೇಳಲಾಗಿದೆ. ಇತರೆ ಕಾಲಂನಲ್ಲಿ ₹2,26,400 ಸೇರಿಸಲಾಗಿದೆ. 

ಅನ್ನಪೂರ್ಣ ಈ ಚುನಾವಣೆಯಲ್ಲಿ ಯಾವುದೇ ಮಾಧ್ಯಮಗಳಿಗೆ ಜಾಹೀರಾತು ನೀಡಿಲ್ಲ ಎಂದು ಉಲ್ಲೇಖಿಸಲಾಗಿದೆ. 

ಬಂಗಾರು ವೆಚ್ಚ ₹24.97 ಲಕ್ಷ: ಚುನಾವಣೆಯಲ್ಲಿ ಅನ್ನಪೂರ್ಣ ಅವರಿಗೆ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು ಚುನಾವಣಾ ವೆಚ್ಚದಲ್ಲೂ ಪೈಪೋಟಿ ನೀಡಿರುವುದು ದಾಖಲೆಗಳಿಂದ ಗೊತ್ತಾಗಿದೆ. ತಾವು ಈ ಚುನಾವಣೆಯಲ್ಲಿ ವ್ಯಯಿಸಿದ್ದು ₹24,97,564 ಎಂದು ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. 

ತಾರಾ ಪ್ರಚಾರಕರಿಲ್ಲದ ರ್‍ಯಾಲಿಗಳಿಗೆ ₹7,01,300, ತಾರಾ ಪ್ರಚಾರಕರಿದ್ದ ಸಮಾವೇಶಗಳಿಗೆ ₹5,80,044, ಚುನಾವಣಾ ಪರಿಕರಗಳಿಗೆ 1,10,930, ಪ್ರಚಾರ ವಾಹನಗಳಿಗೆ 21,660 ಕಾರ್ಯಕರ್ತರು, ಏಜೆಂಟರಿಗೆ ₹1,82,700 ನೀಡಿರುವುದಾಗಿ ಅವರು ತಿಳಿಸಿದ್ದಾರೆ. 

ಬಂಗಾರು ಹನುಮಂತ ಅವರು ಈ ಚುನಾವಣೆಯಲ್ಲಿ ತಮ್ಮ ಕೈನಿಂದ ಬಳಸಿದ ದುಡ್ಡು ₹5,55,000 ಎಂದು ಆಯೋಗಕ್ಕೆ ತಿಳಿಸಿದ್ದಾರೆ. ಇನ್ನುಳಿದಂತೆ ತಮ್ಮ ಚುನಾವಣಾ ಏಜೆಂಟರ ಮೂಲಕ ₹15,95,464 ಹಣ ಖರ್ಚು ಮಾಡಿಸಲಾಗಿದೆ. ಇತರೆ ಕಾಲಂನಲ್ಲಿ ₹9,02,100 ತೋರಿಸಲಾಗಿದೆ. 

ಚುನಾವಣೆಗೆ ಬಂಗಾರು ಅವರು ನಗದು ₹5,000 ಖರ್ಚು ಮಾಡಿದ್ದರೆ, ‌ಬ್ಯಾಂಕ್‌ನಿಂದ ₹5,50,000 ತೆಗೆದುಕೊಂಡು ವ್ಯಯಿಸಿದ್ದಾರೆ.  

ಹನುಮಂತ ಈ ಚುನಾವಣೆಯಲ್ಲಿ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಿಗೆ ಯಾವುದೇ ಜಾಹಿರಾತುಗಳನ್ನೂ ನೀಡಿಲ್ಲ ಎಂದು ಶೆಡ್ಯೂಲ್‌ 8ರಲ್ಲಿ ತೋರಿಸಿದ್ದಾರೆ. 

ಚುನಾವಣಾ ಫಲಿತಾಂಶ ಘೋಷಣೆಯಾದ 30 ದಿನಗಳ ಒಳಗಾಗಿ ಅಭ್ಯರ್ಥಿಗಳು‌ ತಮ್ಮ ಚುನಾವಣಾ ವೆಚ್ಚದ ವಿವರವನ್ನು ಚುನಾವಣಾಧಿಕಾರಿಗೆ ಸಲ್ಲಿಸಬೇಕು ಎಂಬುದು ಚುನಾವಣಾ ಆಯೋಗದ ನಿಯಮ. ಅದರಂತೆ ಎಲ್ಲರೂ ಸಕಾಲಕ್ಕೆ ವಿವರ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಕೇಂದ್ರ ಸರ್ಕಾರ 2022ರಲ್ಲಿ ಪರಿಷ್ಕರಿಸಿದೆ. ಅದರಂತೆ, ವಿಧಾನಸಭಾ ಚುನಾವಣಾ ವೆಚ್ಚದ ಗರಿಷ್ಠ ಮಿತಿ ₹40 ಲಕ್ಷ ಎಂದು ಚುನಾವಣಾ ಆಯೋಗ ಹೇಳಿದೆ. ಸದ್ಯ ಈ ಚುನಾವಣೆಯಲ್ಲಿ ಯಾರೂ ಈ ಮಿತಿಯನ್ನು ಮೀರಿಲ್ಲ ಎಂದು ದಾಖಲೆಗಳು ಹೇಳುತ್ತಿವೆ. 

ಅನ್ನಪೂರ್ಣ ತುಕಾರಾಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.