ಸಂಡೂರಿನಲ್ಲಿ ಜಯ ಸಾಧಿಸಿದ ಅನ್ನಪೂರ್ಣ ತುಕಾರಾಂ (ಒಳಚಿತ್ರದಲ್ಲಿ ಬಂಗಾರು ಹನುಮಂತ)
ಬಳ್ಳಾರಿ: ಕಾಂಗ್ರೆಸ್ ಸಂಸದ ಇ. ತುಕಾರಾಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಅವರ ಪತ್ನಿ ಅನ್ನಪೂರ್ಣ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯ ಬಂಗಾರು ಹನುಮಂತ ಅವರಿಂದ ಆರಂಭಿಕ ಸುತ್ತುಗಳಲ್ಲಿ ನಿಕಟ ಪೈಪೋಟಿ ಎದುರಿಸಿದ್ದ ಅನ್ನಪೂರ್ಣ, ಅಂತಿಮವಾಗಿ 9,645 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಸಂಡೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಪೂರ್ಣಗೊಂಡಿದ್ದು, ಅನ್ನಪೂರ್ಣ ಅವರಿಗೆ ಒಟ್ಟು 93,616 ಮತಗಳು ಲಭಿಸಿವೆ. ಬಂಗಾರು ಹನುಮಂತ ಅವರು 83,967 ಮತಗಳನ್ನು ಪಡೆದಿದ್ದಾರೆ.
ಸೋಲು ತಿಳಿಯುತ್ತಲೇ ಮತ ಎಣಿಕೆ ಕೇಂದ್ರದಿಂದ ಹೊರನಡೆದ ಹನುಮಂತ ಅವರು, 'ಇದು ಧರ್ಮ ಯುದ್ಧ. ಅಧರ್ಮ ಗೆದ್ದಿದೆ. ಸೋಲಿನ ಹೊಣೆ ನಾನೇ ಹೊರುವೆ' ಎಂದಿದ್ದಾರೆ.
'ಈ ಕ್ಷೇತ್ರ ಗೆಲ್ಲುವ ಭರವಸೆಯನ್ನು ವರಿಷ್ಠರಿಗೆ ನೀಡಿದ್ದೆ. ಗೆಲ್ಲಲು ಸಾಧ್ಯವಾಗದೇ ಇರುವುದಕ್ಕೆ ಎಲ್ಲರ ಕ್ಷಮೆ ಕೇಳುವೆ. ಪಕ್ಷದ ವರಿಷ್ಠರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸುವೆ' ಎಂದು ಹೇಳಿದ್ದಾರೆ.
'ಮುಸ್ಲಿಂ, ಕುರುಬ ಸಮುದಾಯದ ವೋಟುಗಳು ನಮಗೆ ಬಂದಿಲ್ಲ. ಶಿವರಾಜ ತಂಗಡಗಿ ಉಸ್ತುವಾರಿ ವಹಿಸಿದ್ದ ಭಾಗದಲ್ಲಿ ಹಣದ ಹೊಳೆ ಹರಿದಿದೆ' ಎಂದು ಆರೋಪಿಸಿದ್ದಾರೆ.
'ಮುಖ್ಯಮಂತ್ರಿ ಮೂರು ದಿನ ಉಳಿದು ಕೆಲಸ ಮಾಡಿದರು. ಹಣ ಖರ್ಚು ಮಾಡಿ ಕಾಂಗ್ರೆಸ್ ಗೆದ್ದಿದೆ. ಗ್ಯಾರೆಂಟಿ ಹಣ ಬಿಡುಗಡೆಯೂ ಚುನಾವಣೆಯಲ್ಲಿ ಕೆಲಸ ಮಾಡಿದೆ' ಎಂದು ದೂರಿದ್ದಾರೆ.
ಈ ಕ್ಷೇತ್ರದಲ್ಲಿ ನವೆಂಬರ್ 13ರಂದು ಮತದಾನ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.