ಬಳ್ಳಾರಿ: ಸಂಡೂರು ಉಪಚುನಾವಣೆ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು 9,645 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಎದುರಾಳಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು 83,967 ಮತಗಳನ್ನು ಪಡೆದಿದ್ದಾರೆ.
ಸಂಭ್ರಮಾಚರಣೆಗೆ ಸಿದ್ಧತೆ
ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಸಂಡೂರಿನ ವಿಜಯ ವೃತ್ತದಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದೆ. ಪಟಾಕಿ, ಹಾರ, ಡಿಜೆಯೊಂದಿಗೆ ಸಿದ್ದಗೊಂಡಿರುವ ಕಾರ್ಯಕರ್ತರು ಅನ್ನಪೂರ್ಣ ತುಕಾರಾಂ ಆಗಮನಕ್ಕೆ ಕಾದು ಕುಳಿತಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರನ್ನು ಕಂಡು ತೊಡೆತಟ್ಟಿದ ಬಂಗಾರು ಹನುಮಂತ
ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಳಿಕ ಮತ ಎಣಿಕೆ ಕೇಂದ್ರದಿಂದ ಹೊರ ನಡೆಯುತ್ತಿದ್ದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ, ಕಾಂಗ್ರೆಸ್ ಕಾರ್ಯಕರ್ತರನ್ನು ಕಂಡು ತೊಡೆತಟ್ಟಿ ಪ್ರಚೋದಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಅವರನ್ನು ತಡೆದು ಕಾರು ಹತ್ತಿಸಿ ಕಳುಹಿಸಿದರು.
ಮುಖ್ಯಾಂಶಗಳು:
ಮತಯಂತ್ರಗಳನ್ನು ಇರಿಸಿರುವ ಸ್ಟ್ರಾಂಗ್ ರೂಮ್ ಅನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚುನಾವಣಾಧಿಕಾರಿ ಸಮ್ಮುಖದಲ್ಲಿ ಬೆಳಿಗ್ಗೆ ತೆರೆಯಲಾಯಿತು
ಅಂಚೆ ಮತ ಗಳಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಮುನ್ನಡೆ ಸಾಧಿಸಿದ್ದಾರೆ.
19 ಸುತ್ತುಗಳ ಮತ ಎಣಿಕೆ
ಮೊದಲ ನಾಲ್ಕು ಸುತ್ತಿನ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿಗೆ 5ನೇ ಸುತ್ತಿನಲ್ಲಿ (1,001 ಮತಗಳ) ಹಿನ್ನಡೆ
10 ಸುತ್ತಿನ ಅಂತ್ಯಕ್ಕೆ, ಅನ್ನಪೂರ್ಣ ಅವರಿಗೆ 3,488 ಮತಗಳಿಂದ ಮುನ್ನಡೆ
15ನೇ ಸುತ್ತಿನ ಅಂತ್ಯಕ್ಕೆ, ಮುನ್ನಡೆಯ ಅಂತರ 8,239 ಮತಗಳಿಗೆ ಏರಿಕೆ
ಮತ ಎಣಿಕೆ ಪೂರ್ಣಗೊಳ್ಳುವ ಮುನ್ನವೇ ಸೋಲೊಪ್ಪಿಕೊಂಡ ಬಿಜೆಪಿ ಅಭ್ಯರ್ಥಿ. 'ಉಪ ಚುನಾವಣೆಯಲ್ಲಿ ಮುಸ್ಲಿಂ, ಕುರುಬ ಸಮುದಾಯದ ಮತಗಳು ಬಂದಿಲ್ಲ. ಶಿವರಾಜ ತಂಗಡಗಿ ಉಸ್ತುವಾರಿ ವಹಿಸಿದ್ದ ಭಾಗದಲ್ಲಿ ಹಣದ ಹೊಳೆ ಹರಿದಿದೆ. ಅಧರ್ಮ ಗೆದ್ದಿದೆ' ಎಂದು ಆಕ್ರೋಶ
ಅನ್ನಪೂರ್ಣಗೆ ಆರಂಭದಿಂದಲೂ ನಿಕಟ ಪೈಪೋಟಿ ನೀಡಿದ ಬಂಗಾರು ಹನುಮಂತಗೆ 9,645 ಮತಗಳ ಅಂತರದಿಂದ ಸೋಲು.
ಸಂಸದ ಇ. ತುಕಾರಾಂ ಅವರ ರಾಜೀನಾಮೆಯಿಂದ ತೆರವಾದ ಸಂಡೂರು ಕ್ಷೇತ್ರದಲ್ಲಿ ಅವರ ಪತ್ನಿ ಅನ್ನಪೂರ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರಿಗೆ ಬಿಜೆಪಿಯ ಬಂಗಾರು ಹನುಮಂತ ಸವಾಲೊಡ್ಡಿದ್ದಾರೆ. ನವೆಂಬರ್ 13ರಂದು ಚುನಾವಣೆ ನಡೆದಿದ್ದು, ಸಂಡೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಮತ ಎಣಿಕೆ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.