ADVERTISEMENT

ಹಂಪಿಯಲ್ಲಿ ಮಕರ ಸಂಕ್ರಮಣ ಪುಣ್ಯಸ್ನಾನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 7:12 IST
Last Updated 14 ಜನವರಿ 2021, 7:12 IST
ಮಕರ ಸಂಕ್ರಮಣದ ಪ್ರಯುಕ್ತ ಭಕ್ತರು ಗುರುವಾರ ಹಂಪಿ ಬಳಿಯ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು
ಮಕರ ಸಂಕ್ರಮಣದ ಪ್ರಯುಕ್ತ ಭಕ್ತರು ಗುರುವಾರ ಹಂಪಿ ಬಳಿಯ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು   

ಹೊಸಪೇಟೆ: ಮಕರ ಸಂಕ್ರಮಣದ ನಿಮಿತ್ತ ನೂರಾರು ಭಕ್ತರು ಗುರುವಾರ ತಾಲ್ಲೂಕಿನ ಹಂಪಿಗೆ ಹೊಂದಿಕೊಂಡಂತೆ ಹರಿಯುವ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು.

ಸೂರ್ಯೋದಯಕ್ಕೂ ಮುನ್ನವೇ ವಿವಿಧ ಕಡೆಗಳಿಂದ ಹಂಪಿಗೆ ಬಂದಿದ್ದ ಜನ ನೇರವಾಗಿ ನದಿ ಕಡೆಗೆ ತೆರಳಿದರು. ನದಿ ತಟದಲ್ಲಿ ಎಳ್ಳು, ಅರಿಶಿಣವನ್ನು ಮೈಗೆ ಲೇಪನ ಮಾಡಿಕೊಂಡರು. ಬಳಿಕ ಚುಮು ಚುಮು ಚಳಿಯಲ್ಲಿಯೇ ನದಿಯಲ್ಲಿ ಮಿಂದೆದ್ದರು.

ನಂತರ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿರೂಪಾಕ್ಷ, ಪಂಪಾಂಬಿಕೆ, ಭುವನೇಶ್ವರಿ ದೇವಿಯ ದರ್ಶನ ಪಡೆದುಕೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದದ್ದರಿಂದ ಉದ್ದನೆಯ ಸಾಲು ಕಂಡು ಬಂತು. ಹಬ್ಬದ ನಿಮಿತ್ತ ಎಲ್ಲ ದೇವರುಗಳಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ನೆರವೇರಿಸಲಾಯಿತು.

ADVERTISEMENT

ಸ್ನಾನ, ದೇವರ ದರ್ಶನದ ಬಳಿಕ ಭಕ್ತರು ಪರಸ್ಪರ ಎಳ್ಳು, ಬೆಲ್ಲ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು. ನಂತರ ಅವರೊಂದಿಗೆ ತಂದಿದ್ದ ಬುತ್ತಿ ಬಿಚ್ಚಿಕೊಂಡು ಕಲ್ಲು, ಬಂಡೆಗಳ ಸುತ್ತ ಕುಳಿತುಕೊಂಡು ಸವಿದರು. ನಂತರ ಕಡಲೆಕಾಳು, ಸಾಸಿವೆಕಾಳು ಗಣಪ, ಉಗ್ರ ನರಸಿಂಹ, ಕಮಲ ಮಹಲ್‌, ಗಜಶಾಲೆ, ಮಹಾನವಮಿ ದಿಬ್ಬ, ರಾಣಿ ಸ್ನಾನಗೃಹ, ವಿಜಯ ವಿಠಲ ದೇವಸ್ಥಾನ, ಕಲ್ಲಿನ ರಥ ಕಣ್ತುಂಬಿಕೊಂಡರು.

ಕೋವಿಡ್‌ ಹಿನ್ನೆಲೆಯಲ್ಲಿ ಈ ವರ್ಷ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜನ ಕಡಿಮೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.