ಕಂಪ್ಲಿ: ಸ್ಥಳೀಯ ಪುರಸಭೆ ಆಡಳಿತ ಮಂಡಳಿಯಿಂದ ಅಮೃತ್ 2.0 ಯೋಜನೆಯಡಿ ತಾಯಿ ಹೆಸರಿನಲ್ಲೊಂದು ಸಸಿ ನೆಡುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ‘ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭೂಮಿಯ ತಾಪಮಾನವನ್ನು ಕಡಿಮೆ ಮಾಡಲು ಹಾಗೂ ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿಯನ್ನು ಪಡೆಯಲು ಪ್ರತಿಯೊಬ್ಬ ನಾಗರಿಕರು ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕಾದ ಅಗತ್ಯವಿದೆ’ ಎಂದು ಹೇಳಿದರು.
ಪರಿಸರ ಎಂಜಿನಿಯರ್ ಶರಣಪ್ಪ ಮಾತನಾಡಿ, ‘ಪ್ರಸ್ತುತ ಯೋಜನೆಯಡಿ ಪಟ್ಟಣದ ಬಳ್ಳಾರಿ, ಹೊಸಪೇಟೆ, ಕುರುಗೋಡು, ಸಣಾಪುರ, ಗಂಗಾವತಿ ರಸ್ತೆ ಪಕ್ಕದಲ್ಲಿ ಮತ್ತು ಸ್ಥಳೀಯ ಸೋಮಪ್ಪ ಕೆರೆ ಪ್ರದೇಶದಲ್ಲಿ 500 ಸಸಿ ನೆಡಲು ಯೋಜಿಸಲಾಗಿದೆ. ಜೊತೆಗೆ ಎಲ್ಲ ಉದ್ಯಾನಗಳಲ್ಲಿಯೂ ಸಸಿಗಳನ್ನು ನೆಟ್ಟು ಪೋಷಿಸಲು ಮಹಿಳಾ ಸ್ವ ಸಹಾಯ ಗುಂಪಿನ ಕಾರ್ಯಕರ್ತೆಯರಿಗೆ ಎರಡು ವರ್ಷ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಸದ್ಯ 3 ಗುಂಪುಗಳನ್ನು ಆಯ್ಕೆ ಮಾಡಿದ್ದು, ಅವರಿಗೆ ಗುರುತಿನ ಚೀಟಿ, ಕಿಟ್‍ಗಳನ್ನು ವಿತರಿಸಲಾಗಿದೆ’ ಎಂದರು.
ಪುರಸಭೆ ಸದಸ್ಯರಾದ ಸಿ.ಆರ್. ಹನುಮಂತ, ವಿ.ಎಲ್. ಬಾಬು, ಪ್ರಮುಖರಾದ ಆಟೊ ರಾಘು, ಜಿ. ಸುಧಾಕರ, ಪುರಸಭೆ ವ್ಯವಸ್ಥಾಪಕ ಪ್ರಶಾಂತ್ ಚಿತ್ರಗಾರ, ಆನಂದ ಗಿರಿಜಾಲಿ ಇದ್ದರು. ಯೋಜನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಥಾ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.