
ಹೊಸಪೇಟೆ: ‘ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಅ. 2ರಂದು ನಗರದ ಗಾಂಧಿ ವೃತ್ತದಲ್ಲಿ ‘ಸರ್ವೋದಯ ಪರ್ವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಲೋಕನಾಯಕ ಜಯಪ್ರಕಾಶ ನಾರಾಯಣ ಸರ್ವೋದಯ ಟ್ರಸ್ಟ್ ಅಧ್ಯಕ್ಷ ನಾರಾಯಣ ಭಟ್ಟ ತಿಳಿಸಿದರು.
ನಗರದ ಮಹಿಳಾ ಸಮಾಜ ಶಾಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಂದು ಬೆಳಿಗ್ಗೆ 9.30ಕ್ಕೆ ಗಾಂಧಿ ವೃತ್ತದಿಂದ ಪ್ರಭಾತ ಫೇರಿ ನಡೆಯಲಿದೆ. ವಿವಿಧ ಶಾಲಾ, ಕಾಲೇಜಿನ ಮಕ್ಕಳು, ನಗರಸಭೆಯ ಎಲ್ಲ ಸದಸ್ಯರು ಪಾಲ್ಗೊಳ್ಳುವರು’ ಎಂದು ವಿವರಿಸಿದರು.
‘10ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತ ವಿ. ರಮೇಶ ಉದ್ಘಾಟಿಸುವರು. ಜಿಂದಾಲ್ ಆರ್ಥಿಕ ವಿಭಾಗದ ಮುಖ್ಯ ಎಂಜಿನಿಯರ್ ಆಂಜನೇಯಲು, ಕಿರ್ಲೊಸ್ಕರ್ ಫೆರೋಸ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ರವಿ ಗುಮಾಸ್ತೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನಗರಸಭೆ ಅಧ್ಯಕ್ಷ ಗುಜ್ಜಲ್ ನಿಂಗಪ್ಪ ಅಧ್ಯಕ್ಷತೆ ವಹಿಸುವರು’ ಎಂದು ಮಾಹಿತಿ ನೀಡಿದರು.
ಗಾಂಧಿ ತತ್ವ ಕಡೆಗಣನೆ:
‘ಇಂದು ಇಡೀ ವಿಶ್ವ ಮಹಾತ್ಮ ಗಾಂಧೀಜಿಯವರು ಹಾಕಿಕೊಟ್ಟಿರುವ ತತ್ವಗಳ ಅಡಿಯಲ್ಲಿ ಮುನ್ನಡೆಯುತ್ತಿದೆ. ಆದರೆ, ಭಾರತ ಮಾತ್ರ ಅದರಿಂದ ವಿಮುಖವಾಗುತ್ತಿದೆ. ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದರೂ ಅಧಿಕಾರ ವಿಕೇಂದ್ರೀಕರಣ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಮಾತೃ ಭಾಷೆಯ ಬದಲಾಗಿ ಇಂಗ್ಲಿಷ್‌ನಲ್ಲಿ ಬೋಧನೆಗೆ ಒತ್ತು ಕೊಡುತ್ತಿರುವುದು ದುರದೃಷ್ಟಕರ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಬಹುತ್ವ, ಸಹಬಾಳ್ವೆಯಿಂದ ಈ ದೇಶವನ್ನು ಗುರುತಿಸಲಾಗುತ್ತಿತ್ತು. ಆದರೆ, ಈಗ ಅದು ಮಾಯವಾಗುತ್ತಿದೆ. ಎಲ್ಲೆಡೆ ಕೋಮುವಾದ ವಿಜೃಂಭಿಸುತ್ತಿದೆ. ವಿನೋಬಾ ಭಾವೆ, ಜಯಪ್ರಕಾಶ ನಾರಾಯಣ ಮತ್ತು ಮಹಾತ್ಮ ಗಾಂಧೀಜಿಯವರ ವಿಚಾರಗಳನ್ನು ಹೆಚ್ಚು ಪ್ರಚುರಪಡಿಸುವ ಅಗತ್ಯ ಇಂದು ಹೆಚ್ಚು ಕಾಣಿಸುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.