ADVERTISEMENT

ಬಳ್ಳಾರಿ | ಎಸ್‌ಬಿಐ ಎಟಿಎಂ ಧ್ವಂಸ: ಇಬ್ಬರ ಸೆರೆ

ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:41 IST
Last Updated 3 ಆಗಸ್ಟ್ 2025, 6:41 IST
ಡಾ. ಶೋಭಾರಾಣಿ ವಿ.ಜೆ 
ಡಾ. ಶೋಭಾರಾಣಿ ವಿ.ಜೆ    

ಬಳ್ಳಾರಿ: ಈಚೆಗೆ ನಗರದ ತಾಳೂರು ರಸ್ತೆಯ 13ನೇ ಕ್ರಾಸ್‌ನಲ್ಲಿ ನಡೆದಿದ್ದ ಎಸ್‌ಬಿಐ ಬ್ಯಾಂಕ್‌
ಎಟಿಎಂ ಧ್ವಂಸ ಪ್ರಕರಣ ಬೇಧಿಸಲಾಗಿದ್ದು ಪ್ರಕರಣ ನಡೆದು 30 ತಾಸಿನೊಳಗೆ
ಆರೋಪಿಗಳಾದ ಜೆ.ಅವಿನಾಶ್ (27) ಹಾಗೂ ಕೆ.ಜಿ.ಶಿವರಾಜ್ (29) ಅವರನ್ನು ಬಂಧಿಸಲಾಗಿದೆ
ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಪಿತರ ಪೈಕಿ ಅವಿನಾಶ್ ಎಂಬಾತ ಬಿಇ ಸಿವಿಲ್ ಇಂಜಿನಿಯರ್ ಆಗಿದ್ದು, ಮತ್ತೊಬ್ಬ ಆರೋಪಿ ಶಿವರಾಜ್ ತಾಳೂರು ರಸ್ತೆಯಲ್ಲಿ ಮೊಟ್ಟೆ
ಅಂಗಡಿ ಇಟ್ಟುಕೊಂಡಿದ್ದಾನೆ. ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿರಬಹುದು ಎಂದು
ಅಂದಾಜಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ’ ಎಂದರು. 

‘ಅವಿನಾಶ್ ಎಂಬಾತ ಇಟ್ಟಿಗೆಯಿಂದ ಎಟಿಎಂ ಕೇಂದ್ರವನ್ನು ಧ್ವಂಸಗೊಳಿಸಿದ್ದಾನೆ ಎಂದು ಗೊತ್ತಾಗಿದೆ. ಇವರ ಉದ್ದೇಶ ಏನಾಗಿತ್ತು ಎಂಬುದು ಈವರೆಗೆ ತಿಳಿದು ಬಂದಿಲ್ಲ. ಆದರೆ, ಅವಿನಾಶ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಆತನ ತಂದೆಯ ಆರೋಗ್ಯ ಸರಿ ಇಲ್ಲ ಎಂಬುದು  ಗೊತ್ತಾಗಿದೆ. ವಿಚಾರಣೆ ಬಳಿಕ ಉದ್ದೇಶ ಸ್ಪಷ್ಟವಾಗಲಿದೆ. ಈ ಇಬ್ಬರ ಮೇಲೆ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ’  ಎಂದು ತಿಳಿಸಿದರು.

ADVERTISEMENT

ಎಟಿಎಂ ಧ್ವಂಸ ಕುರಿತಂತೆ  ಖಾಜಾಮೈನುದ್ದೀನ್ ಎಂಬುವರು ಜುಲೈ 31ರಂದು ಗ್ರಾಮೀಣ ಠಾಣೆಗೆ ದೂರು ನೀಡಿದ್ದರು ಎಂದರು. 

ಯುವಕನ ಮೇಲೆ ಹಲ್ಲೆ–ಸೆರೆ: ವಾರದ ಹಿಂದೆ ಕೌಲ್‌ಬಜಾರ್ ಠಾಣೆ ವ್ಯಾಪ್ತಿಯ ಐಟಿಐ ಕಾಲೇಜಿನ ಆವರಣದಲ್ಲಿ ಯುವಕನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಹಲ್ಲೆ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಸಂಬಂಧ ಯುವಕ ದೊಡ್ಡಬಸವ ಅವರಿಂದ ದೂರು ಪಡೆದುಕೊಂಡು ಆರೋಪಿಗಳಾದ ಶಶಿಕುಮಾರ್, ಕೆ.ತಿಮ್ಮಪ್ಪ, ಸಾಯಿಕುಮಾರ್, ಪಿ.ಮಹೇಶ್, ಧನಂಜಯ, ಸಲೋಮಾನ್ ರಾಜ್, ಶಂಕರ್, ಮಾರಿ, ಕಾರ್ತೀಕ್, ಚೇತನ್, ಸಂತೋಷ್‌, ಪ್ರೇಮ್ ನಾಯ್ಕ ಸೇರಿದಂತೆ 10 ಜನರನ್ನು ದಸ್ತಗಿರಿ ಮಾಡಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಎಸ್‌ಪಿ ಶೋಭಾರಾಣಿ ಉತ್ತರಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರವಿಕುಮಾರ್‌, ಡಿಎಸ್‌ಪಿ ಸಂತೋಷ್‌ ಚೌಹಾಣ್‌ ಇದ್ದರು.

ಅಕ್ಕ ಭಾವನ ಜಗಳ ಬಿಡಿಸಲು ಹೋದ ಹತ್ಯೆಯಾದ:

ತಾಲೂಕಿನ ಎತ್ತಿನಬೂದಿಹಾಳ್‌ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಕೊಲೆ ನಡೆದಿದ್ದು ಮಹೇಶ್ (28) ಎಂಬಾತ ಮೃತಪಟ್ಟಿದ್ದಾನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದರು.  ಬೂದಿಹಾಳು ಗ್ರಾಮದ ಮಹೇಶನ ಅಕ್ಕ ಪದ್ಮಾವತಿಯನ್ನು ಇದೇ ಗ್ರಾಮದ ಬಸವರಾಜನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಬಸವರಾಜ್ ಕುಡಿದು ಗಲಾಟೆ ಮಾಡುತ್ತಿದ್ದ ಪದೇ ಪದೇ ಬಸರಾಜ್ ಪತ್ನಿ ಜತೆ ಜಗಳವಾಡುತ್ತಿದ್ದರಿಂದ ಮಹೇಶ್ ಮಹಿಳಾ ಠಾಣೆಗೆ ತೆರಳಿ ದೂರು ನೀಡಿದ್ದ. ಶುಕ್ರವಾರ ರಾತ್ರಿಯೂ ಗಲಾಟೆಯಾಗಿದ್ದು ಬಸವರಾಜ್ ತನ್ನ ಬಾಮೈದ ಮಹೇಶ್‌ನನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಆರೋಪಿ ಬಸವರಾಜ ನಾಪತ್ತೆಯಾಗಿದ್ದಾನೆ ಎಂದು ಎಸ್‌ಪಿ ತಿಳಿಸಿದರು.  ಹೆಲ್ಮೆಟ್‌ ಕಡ್ಡಾಯ  ಬಳ್ಳಾರಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಳಕೆ ಕಡ್ಡಾಯವಿದೆ ಎಂದುಎಸ್ಪಿ ಡಾ.ಶೋಭಾರಾಣಿ ತಿಳಿಸಿದರು. ಜನರ ಸುರಕ್ಷತೆಗಾಗಿಯೇ ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಯಾವುದೇ ರಿಯಾಯಿತಿಇಲ್ಲ. ಕಡ್ಡಾಯವಾಗಿ ಹೆಲ್ಮಟ್ ಹಾಕಿಕೊಂಡೇ ದ್ವಿಚಕ್ರ ವಾಹನ ಸವಾರರು ಹೊರಗಡೆಬರಬೇಕು. ತಪ್ಪಿದಲ್ಲಿ ದಂಡ ಖಚಿತ. ಹೆಲ್ಮೆಟ್‌ ಬಳಸದ ವಾಹನ ಸವಾರರಿಗೆ ದಂಡ ಹಾಕಲಾಗುತ್ತಿರುವ 150 ಪ್ರಕರಣಗಳು ವರದಿಯಾಗುತ್ತಿವೆ ಎಂದು ಎಸ್ಪಿಶೋಭಾರಾಣಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.