ಕಂಪ್ಲಿ: ಪಟ್ಟಣದಲ್ಲಿ ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ನಿಲಯ ಹಾಗೂ ಮೊರಾರ್ಜಿ ವಸತಿ ಶಾಲೆ ಆರಂಭಿಸುವಂತೆ ಎಸ್.ಸಿ ಮತ್ತು ಎಸ್.ಟಿ ಮುಖಂಡರು ಒತ್ತಾಯಿಸಿದರು.
ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಮುಖಂಡರು ಪರಿಶಿಷ್ಟರಿಗೆ ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು.
ಬೆಳಗೋಡುಹಾಳು ಗ್ರಾಮದಲ್ಲಿ ಅಂಬೇಡ್ಕರ್ ನೂತನ ಭವನ ನಿರ್ಮಾಣ, ಪಡಿತರ ಚೀಟಿ ವಂಚಿತ ಪರಿಶಿಷ್ಟರಿಗೆ ಪಡಿತರ ಚೀಟಿ ವಿತರಣೆಗೆ ಕ್ರಮ, ನೆಲ್ಲೂಡಿ-ಕೊಟ್ಟಾಲ್ ಗ್ರಾಮದ ಪರಿಶಿಷ್ಟ ವರ್ಗದ ಸಮುದಾಯ ಭವನವನ್ನು ಗ್ರಂಥಾಲಯ ಕಟ್ಟಡವನ್ನಾಗಿ ಪರಿವರ್ತಿಸುವಂತೆ, ಪರಿಶಿಷ್ಟರ ಸ್ಮಶಾನಕ್ಕಾಗಿ ಭೂಮಿ ನೀಡಿ ಮೂಲಸೌಕರ್ಯ ಒದಗಿಸುವಂತೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಎಸ್.ಸಿ, ಎಸ್.ಟಿ ಕುಂದುಕೊರತೆ ಸಭೆ ಆಯೋಜಿಸುವಂತೆ ಆಗ್ರಹಿಸಿದರು.
ತಹಶೀಲ್ದಾರ್ ಜೂಗಲ ಮಂಜುನಾಯಕ ಸಭೆ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಇಒ ಆರ್.ಕೆ. ಶ್ರೀಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಾದಿಲಿಂಗಪ್ಪ, ಗ್ರೇಡ್-1 ಸಹಾಯಕ ನಿರ್ದೇಶಕಿ ಬಿ. ರಾಜೇಶ್ವರಿ, ನಿಲಯ ಪಾಲಕ ಕೆ. ವಿರುಪಾಕ್ಷಿ ಸೇರಿದಂತೆ ಎಸ್.ಸಿ, ಎಸ್.ಟಿ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು, ಪಿಡಿಒಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.