ADVERTISEMENT

ಮಳೆ ಕೊರತೆ; ಮಲ್ಲಿಗೆ ನಾಡಿನಲ್ಲಿ ಮತ್ತೆ ಬರದ ಛಾಯೆ- ಬೆಳೆ ನಾಶಕ್ಕೆ ಮುಂದಾದ ರೈತರು

ಕೆ.ಸೋಮಶೇಖರ
Published 22 ಆಗಸ್ಟ್ 2021, 12:10 IST
Last Updated 22 ಆಗಸ್ಟ್ 2021, 12:10 IST
ಹೂವಿನಹಡಗಲಿ ತಾಲ್ಲೂಕು ಹೊಳಗುಂದಿಯಲ್ಲಿ ಮಳೆ ಇಲ್ಲದೆ ಒಣಗುತ್ತಿರುವ ಮೆಕ್ಕೆಜೋಳ ಬೆಳೆಯನ್ನು ಟ್ರ್ಯಾಕ್ಟರ್ ನಿಂದ ನಾಶಪಡಿಸುತ್ತಿರುವ ರೈತರು
ಹೂವಿನಹಡಗಲಿ ತಾಲ್ಲೂಕು ಹೊಳಗುಂದಿಯಲ್ಲಿ ಮಳೆ ಇಲ್ಲದೆ ಒಣಗುತ್ತಿರುವ ಮೆಕ್ಕೆಜೋಳ ಬೆಳೆಯನ್ನು ಟ್ರ್ಯಾಕ್ಟರ್ ನಿಂದ ನಾಶಪಡಿಸುತ್ತಿರುವ ರೈತರು   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಯಾಗದ ಕಾರಣ ಬೆಳೆಗಳು ಬಾಡಲಾರಂಭಿಸಿದ್ದು, ರೈತರು ಬೆಳೆ ನಾಶಕ್ಕೆ ಮುಂದಾಗಿದ್ದಾರೆ.

ತೇವಾಂಶ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಸದ್ಯ ಮಳೆ ಬಿದ್ದರೂ ಬೆಳೆಗಳು ಚೇತರಿಕೊಳ್ಳಲಾರದ ಸ್ಥಿತಿ ತಲುಪಿವೆ. ಮುಂಗಾರು ಆರಂಭದಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ತಾಲ್ಲೂಕಿನ ರೈತರು ಉತ್ಸಾಹದಿಂದ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದರು.

ಜೂನ್, ಜುಲೈನಲ್ಲಿ ಮೋಡ ಮುಸುಕಿದ ವಾತಾವರಣದ ನಡುವೆ ತುಂತುರು ಮಳೆ ಸುರಿದಿದ್ದರಿಂದ ಬೆಳೆಗಳು ನಳನಳಿಸುತ್ತಿದ್ದವು. ಕಳೆದ ಒಂದು ತಿಂಗಳಿಂದ ಮಳೆ ಸುರಿಯದೇ ಬಿಸಿಲ ತಾಪ ಹೆಚ್ಚಿ, ಪೈರು ಒಣಗಲಾರಂಭಿಸಿವೆ. ಬೆಳೆಗಳು ಕಾಳು ಕಟ್ಟುವ ಸಮಯದಲ್ಲಿ ಮಳೆ ಕೈ ಕೊಟ್ಟಿದ್ದರಿಂದ ರೈತರಿಗೆ ಮತ್ತೊಮ್ಮೆ ಬರಗಾಲ ಬಾಗಿಲಲ್ಲಿ ನಿಂತಿರುವ ಅನುಭವ ಆಗುತ್ತಿದೆ.

ADVERTISEMENT

ಮಳೆ ಕೊರತೆಯಿಂದ ಕೆಲವೆಡೆ ಬೆಳೆಗಳು ಕಳೆಗುಂದಿವೆ. ಇನ್ನು ಕೆಲ ಕಡೆ ಬೆಳವಣಿಗೆ ಕುಂಠಿತವಾಗಿ ಮೆಕ್ಕೆಜೋಳ ಅವಧಿಪೂರ್ಣ (ಸೂಲಂಗಿ) ಹೂವಾಡಿದೆ. ಬೆಳೆ ಕೈ ಸೇರುವುದಿಲ್ಲ ಎಂದು ಖಾತ್ರಿಯಾಗುತ್ತಿದ್ದಂತೆ ರೈತರು ಬೆಳೆನಾಶ ಮಾಡುತ್ತಿದ್ದಾರೆ. ಮುಂಗಾರು ಬಿತ್ತನೆಯ ಸಾಲ ಬೆನ್ನೇರಿದ್ದರೂ, ಹಿಂಗಾರು ಬೆಳೆಯಾದರೂ ಕೈ ಹಿಡಿದೀತೆಂಬ ಆಶಾವಾದದೊಂದಿಗೆ ರೈತರು ಹೊಲ ಹದಗೊಳಿಸುವ ಉದ್ದೇಶದಿಂದ ಬೆಳೆ ನಾಶಪಡಿಸುತ್ತಿದ್ದಾರೆ.

ಕಳೆದ ವಾರ ಹಿರೇಕೊಳಚಿಯ ರೈತ ಗಿರಿಗೌಡ್ರ ಶಂಕರಪ್ಪ ಐದು ಎಕರೆ ಮೆಕ್ಕೆಜೋಳ ಬೆಳೆಯಿದ್ದ ಹೊಲಕ್ಕೆ ಜಾನುವಾರು, ಕುರಿಗಳನ್ನು ಮೇಯಲು ಬಿಟ್ಟು ಬೆಳೆ ನಾಶಪಡಿಸಿದ್ದರು. ಇದೀಗ ಹೊಳಗುಂದಿಯ ಸಣ್ಣ ಸ್ವಾಮಿ 8 ಎಕರೆ ಮೆಕ್ಕೆಜೋಳ, ಗೌಡ್ರು ಗುರುವಪ್ಪ 10 ಎಕರೆ, ಮಸಲವಾಡದ ವಿದ್ಯಾದರ 12 ಎಕರೆ ಮೆಕ್ಕೆಜೋಳ ಬೆಳೆಯನ್ನು ಟ್ರ್ಯಾಕ್ಟರ್ ನಿಂದ ನಾಶಪಡಿಸಿದ್ದಾರೆ. ತಾಲ್ಲೂಕಿನಲ್ಲಿ ಬೆಳೆನಾಶ ಸರಣಿ ಹೀಗೇ ಮುಂದುವರಿದಿದೆ.

‘ಹತ್ತು ಎಕರೆ ಮೆಕ್ಕೆಜೋಳ ಬೆಳೆ ನಿರ್ವಹಣೆಗೆ ₹1.15 ಲಕ್ಷ ಖರ್ಚು ಮಾಡಿದ್ದೇವೆ. ಮಳೆ ಕೈ ಕೊಟ್ಟಿದ್ದರಿಂದ ಬೆಳೆಯಲ್ಲಾ ಒಣಗಿ ಸಂಕಟ ಆಗುತಿತ್ತು. ಹಿಂಗಾರಿನಲ್ಲಾದರೂ ದೇವರು ಕಣ್ಣು ತೆರೆಯುವ ಭರವಸೆಯಿಂದ ಮೆಕ್ಕೆಜೋಳ ಬೆಳೆಯನ್ನು ನಾಶಪಡಿಸಿ, ಹಿಂಗಾರಿಗೆ ಹೊಲ ಸಜ್ಜುಗೊಳಿಸುತ್ತೇವೆ’ ಎಂದು ಹೊಳಗುಂದಿಯ ರೈತ ಗೌಡ್ರ ಗುರುವಪ್ಪ ನೋವಿನಿಂದ ಹೇಳಿದರು.

ತಾಲ್ಲೂಕಿನಲ್ಲಿ ಮುಂಗಾರು ವಾಡಿಕೆ ಮಳೆ 326.1 ಮಿ.ಮೀ. ಬೀಳಬೇಕಿದ್ದು, 395 ಮಿ.ಮೀ. ದಾಖಲಾಗಿದೆ. ಜೂನ್‌ನಲ್ಲಿ ವ್ಯಾಪಕ ಮಳೆಯಾಗಿದ್ದರೆ ಜುಲೈ ಅಂತ್ಯ, ಆಗಸ್ಟ್‌ನಲ್ಲಿ ತೀವ್ರ ಕೊರತೆ ಉಂಟಾಗಿದೆ. ಈ ತಿಂಗಳಲ್ಲಿ ಶೇ 44.5% ಮಳೆ ಕೊರತೆ ಉಂಟಾಗಿದೆ. ಸಂದಿಗ್ದ ಸ್ಥಿತಿಯಲ್ಲಿ ಮಳೆ ಸುರಿಯದೇ ಬೆಳೆಗಳ ಸ್ಥಿತಿ ಗಂಭೀರವಾಗಿವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಹೂವಿನಹಡಗಲಿ ತಾಲ್ಲೂಕಿನ ಮುಂಗಾರು ಋತುವಿನಲ್ಲಿ 54 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದ್ದು, 46,936 ಹೆಕ್ಚೇರ್ ಬಿತ್ತನೆಯಾಗಿದೆ. ಮೆಕ್ಕೆಜೋಳ 27,369 ಹೆಕ್ಟೇರ್, ಜೋಳ 3499 ಹೆಕ್ಟೇರ್, ರಾಗಿ 132 ಹೆಕ್ಟೇರ್, ತೊಗರಿ 3325 ಹೆಕ್ಟೇರ್, ಸೂರ್ಯಕಾಂತಿ 2163 ಹೆಕ್ಟೇರ್, ಸಜ್ಜೆ 2274 ಹೆಕ್ಟೇರ್, ಶೇಂಗಾ 2614 ಹೆಕ್ಟೇರ್, ಹತ್ತಿ 399 ಹೆಕ್ಟೇರ್, ಭತ್ತ 2309 ಹೆಕ್ಟೇರ್ ಬಿತ್ತನೆ ಆಗಿದೆ.

ತಾಲ್ಲೂಕಿನ ಮೂರು ಹೋಬಳಿಗಳಲ್ಲೂ ಬೆಳೆಗಳ ಸ್ಥಿತಿ ಗಂಭೀರವಾಗಿದೆ. ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಕಪ್ಪುನೆಲದಲ್ಲೇ ಬೆಳೆಗಳು ಗರ ಬಡಿದ ಸ್ಥಿತಿ ತಲುಪಿವೆ. ಹಡಗಲಿ ಹೋಬಳಿಯ ಬೆಳೆಗಳಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಲುವೆ ನೀರು ಆಸರೆ ಆಗಿರುವುದು ರೈತರಿಗೆ ಕೊಂಚ ಸಮಾಧಾನ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.