ADVERTISEMENT

ಕುರುಗೋಡು | ಸೌಕರ್ಯವಿಲ್ಲದ ಸರ್ಕಾರಿ ಕಾಲೇಜು: ವಿದ್ಯಾರ್ಥಿಗಳ ದಾಖಲಾತಿ ಕುಸಿತ

ವಾಗೀಶ ಕುರುಗೋಡು
Published 9 ಅಕ್ಟೋಬರ್ 2025, 4:15 IST
Last Updated 9 ಅಕ್ಟೋಬರ್ 2025, 4:15 IST
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ   

ಕುರುಗೋಡು: ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಮೂಲಸೌಕರ್ಯಗಳಿಂದ ವಂಚಿತವಾಗಿದೆ.

ಗ್ರಾಮದಿಂದ ಎರಡು ಕಿ.ಮೀ. ದೂರದ, ಜನ ಸಂಚಾರವಿಲ್ಲದ ಪ್ರದೇಶದಲ್ಲಿ ಕಾಲೇಜು ಇರುವುದರಿಂದ ವಿದ್ಯಾರ್ಥಿಗಳು ನಿತ್ಯ ನಡೆದುಕೊಂಡು ಹೋಗುವುದು ಅನಿವಾರ್ಯ. ಕಾಲೇಜಿಗೆ ತೆರಳುವ ದಾರಿಯುದ್ದಕ್ಕೂ ಮುಳ್ಳುಗಂಟಿಗಳು ದಟ್ಟವಾಗಿ ಬೆಳೆದಿದ್ದು ವಿಷಜಂತುಗಳ ಕಾಟವಿದೆ. 

ಕಾಲೇಜು ಕಟ್ಟಡ ಹೊರವಲಯದಲ್ಲಿರುವುದರಿಂದ ರಾತ್ರಿಯಾಗುತ್ತಿದ್ದಂತೆ ಕುಡುಕರ ತಾಣವಾಗಿ ಮಾರ್ಪಾಡಾಗುತ್ತದೆ. ಕಟ್ಟಡಕ್ಕೆ ಸುತ್ತುಗೋಡೆ ಇಲ್ಲದ ಕಾರಣ ಕಿಡಿಗೇಡಿಗಳು ಕಿಟಕಿಯ ಗಾಜುಗಳಿಗೆ ಕಲ್ಲುಹೊಡೆದು ನಾಶಮಾಡಿದ್ದಾರೆ.

ADVERTISEMENT

ಕಾಲೇಜು ಕಟ್ಟಡದಲ್ಲಿ ಒಟ್ಟು 10 ಕೊಠಡಿಗಳಿದ್ದು 5 ಕೊಠಡಿಗಳು ಮಾತ್ರ ತರಗತಿ ನಡೆಸಲು ಬಳಕೆಯಾಗುತ್ತಿವೆ. ಉಳಿದ 5 ಕೊಠಡಿಗಳು ಪಾಳುಬಿದ್ದಿವೆ.

ಡಿ.ದರ್ಜೆ ಸಿಬ್ಬಂದಿ ಇಲ್ಲದೇ ಸ್ವಚ್ಛತೆ ಮರೀಚಿಕೆಯಾಗಿದೆ. ದೂಳು, ಕಸ ತುಂಬಿದ ಕೊಠಡಿಗಳಲ್ಲಿಯೇ ಕುಳಿತು ವಿದ್ಯಾರ್ಥಿಗಳು ಪಾಠ ಕೇಳುವ ಪರಿಸ್ಥಿತಿ ಇದೆ.

ಶುದ್ಧ ಕುಡಿಯುವ ನೀರಿಲ್ಲ. ನೀರಿನ ಸೌಲಭ್ಯವಿಲ್ಲದ ಕಾರಣ ಶೌಚಾಲಯಗಳು ಬಳಕೆಯಾಗದೆ ನಿರುಪಯುಕ್ತವಾಗಿವೆ. ಪಕೃತಿ ಕರೆಗೆ ವಿದ್ಯಾರ್ಥಿಗಳು ಕಾಲೇಜು ಸುತ್ತಮುತ್ತಲಿನ ಬಯಲಲ್ಲೇ ಓಗೊಡಬೇಕಾದ ಪರಿಸ್ಥಿತಿ ಇದೆ. 

ಎಸ್.ಎಸ್.ಎಲ್.ಸಿ. ನಂತರ ಗ್ರಾಮದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಿರುಗುಪ್ಪ ಅಥವಾ ಬಳ್ಳಾರಿಗೆ ಹೋಗಬೇಕಿತ್ತು. ಬಡತನದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ನಗರ ಪ್ರದೇಶಗಳಿಗೆ ಹೋಗಲಾಗದೆ ಶಿಕ್ಷಣ ಮೊಟಕುಗೊಳಿಸುತ್ತಿದ್ದರು. ಹೆಚ್ಚಿನ ಶಿಕ್ಷಣದಿಂದ ವಂಚಿತರಾಗುತ್ತಿದ್ದ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಗ್ರಾಮದ ಮುಖಂಡರು ಜನಪ್ರತಿನಿಧಿಗಳ ಮೇಲೆ ಒತ್ತಡಹಾಕಿ ಕಾಲೇಜು ಮಂಜೂರು ಮಾಡಿಸಿಕೊಂಡಿದ್ದರು. ಆದರೆ, ಕಾಲೇಜಿನ ಇಂದಿನ ಪರಿಸ್ಥಿತಿ ನೋಡಿ ಮುಖಂಡರೇ ಮರುಗುತ್ತಿದ್ದಾರೆ. ಕೆಲವು ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹಿಂದೇಟುಹಾಕುತ್ತಿದ್ದು, ಉನ್ನತ ಶಿಕ್ಷಣಕ್ಕಾಗಿ ನಗರ ಪ್ರದೇಶಗಳ ಶಿಕ್ಷಣ ಸಂಸ್ಥೆಗಳತ್ತ ಮುಖಮಾಡುತ್ತಿದ್ದಾರೆ.

10 ವರ್ಷವಾದರೂ ಉಪನ್ಯಾಸಕರಿಲ್ಲ 
ಕಾಲೇಜು ಪ್ರಾರಂಭಗೊಂಡು 10 ವರ್ಷಕಳೆದಿದೆ. ಈವರೆಗೂ ಸರ್ಕಾರ ಉಪನ್ಯಾಸಕರನ್ನು ನೇಮಿಸಿಲ್ಲ. ಪರಿಣಾಮ ಅತಿಥಿ ಉಪನ್ಯಾಸಕರನ್ನು ಅವಲಂಭಿಸಬೇಕಾದ ಅನಿವಾರ್ಯತೆ ಇದೆ. ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗವಿದ್ದು 120 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಸೌಲಭ್ಯಗಳ ಕೊರತೆಯ ಪರಿಣಾಮ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಈ ವರ್ಷ ಕೇವಲ 52 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿನಲ್ಲಿ ಶೌಚಾಲಯ ನಿರುಪಯುಕ್ತವಾಗಿರುವುದು

ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿ ಆವರಣದಲ್ಲಿ ಮದ್ಯದಬಾಟಲಿ ಬಿದ್ದಿರುವುದು
ನನ್ನ ಅವಧಿಯಲ್ಲಿ ಕಾಲೇಜಿಗೆ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಖುದ್ದು ಭೇಟಿ ನೀಡಿ ಕಾಲೇಜಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಸಮಸ್ಯೆ ಪರಿಹರಿಸಲಾಗುವುದು
–ಬಿ.ಎಂ. ನಾಗರಾಜ, ಶಾಸಕ
ಪೀಠೋಪಕರಣ ಖರೀದಿಗೆ ₹2 ಲಕ್ಷ ಅನುದಾನ ಸಿಕ್ಕಿದೆ. ತಾ.ಪಂ. ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸಿಗುತ್ತಿದೆ. ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗುವುದು.
–ಎಚ್.ಜಿ. ವಿಶ್ವನಾಥ ಗೌಡ, ಪ್ರಭಾರ ಪ್ರಿನ್ಸಿಪಾಲ್‌
ಸರ್ಕಾರಿ ಪದವಿಪೂರ್ವ ಕಾಲೇಜು ಸೌಲಭ್ಯಗಳ ಕೊರತೆ ಪರಿಣಾಮ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಂಬಂಧಿಸಿದವರು ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕು
–ಮಂಜಣ್ಣ ಬಡಿಗೇರ್ ಸಾಹಿತಿ, ಸಿರಿಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.