ಸಿರುಗುಪ್ಪ: ತಾಲ್ಲೂಕಿನಲ್ಲಿ ಭಾನುವಾರ ಸಂಜೆ ಉತ್ತಮ ಮಳೆ ಸುರಿಯಿತು. ತಗ್ಗಿನ ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಯಿತು.
ನಗರದ ಮುಖ್ಯರಸ್ತೆ ಸೇರಿದಂತೆ ವಾರ್ಡ್‍ಗಳ ರಸ್ತೆಬದಿಯ ಚರಂಡಿಗಳಲ್ಲಿ ಮಳೆ ನೀರು ತುಂಬಿ ರಸ್ತೆಗಳಲ್ಲಿ ಹರಿಯಿತು. ನಗರದ ಬಿ.ಜಿ.ಮಂಜುನಾಥ ರೆಡ್ಡಿ ಮನೆ ಮುಂದೆ, ಪೊಲೀಸ್ ಠಾಣೆ ಮುಂದೆ, ದಿನದ ತರಕಾರಿ ಮಾರುಕಟ್ಟೆಯಲ್ಲಿ ಹರಿದು ಬಂದ ಮಳೆ ನೀರು ಹಾಗೂ ಚರಂಡಿ ನೀರು ತಗ್ಗು ಪ್ರದೇಶಗಳಲ್ಲಿ ನುಗ್ಗಿದೆ. ಮಹಿಳೆಯರು, ಮಕ್ಕಳು ನೀರನ್ನು ನೀರಿನಲ್ಲಿ ದಾಟಿಕೊಂಡು ಹೋದರು.
ಚರಂಡಿ ನೀರು ಸಮರ್ಪಕವಾಗಿ ಹರಿದುಹೋಗದೆ ಕೆರೆ ಸೃಷ್ಟಿಯಾಗಿತ್ತು. ಮೊಣಕಾಲುದ್ದಷ್ಟು ನೀರು ಸಂಗ್ರಹದಿಂದ ಜನರು ರಸ್ತೆಯಲ್ಲಿ ನಡೆಯಲು ಹರಸಾಹಸಪಟ್ಟರು.
‘ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯವನ್ನು ಹೊರಹಾಕದೇ ಇರುವುದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಈ ಬಗ್ಗೆ ಪುರಸಭೆಯವರು ಶಾಶ್ವತವಾದ ಪರಿಹಾರ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ಸೋಮಯ್ಯ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.