ADVERTISEMENT

ಸಿರುಗುಪ್ಪ | ವಿದ್ಯುತ್‌ ಸಮಸ್ಯೆ: ಆಧಾರ್ ನೊಂದಣಿ ಕೇಂದ್ರದಲ್ಲಿ ಪರದಾಟ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:20 IST
Last Updated 26 ಜುಲೈ 2025, 6:20 IST
ಸಿರುಗುಪ್ಪ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಆಧಾರ್ ನೊಂದಣಿ ಕೇಂದ್ರದ ಮುಂದೆ ನಿಂತಿರುವ ಜನರು.
ಸಿರುಗುಪ್ಪ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಆಧಾರ್ ನೊಂದಣಿ ಕೇಂದ್ರದ ಮುಂದೆ ನಿಂತಿರುವ ಜನರು.   

ಸಿರುಗುಪ್ಪ: ಪ್ರತಿಯೊಂದಕ್ಕೂ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಿರುವ ಸರ್ಕಾರವು ಆಧಾರ್‌ ನೋಂದಣಿಗಾಗಿ ಸೂಕ್ತ ವ್ಯವಸ್ಥೆ ಮಾಡಿಲ್ಲ. ತಾಲ್ಲೂಕು ಕೇಂದ್ರದಲ್ಲೇ ನಗರದ ಜನತೆ ಇದಕ್ಕಾಗಿ ಪರದಾಡುವುದು ತಪ್ಪುತ್ತಿಲ್ಲ.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಆಧಾರ್ ನೋಂದಣಿ ಕೇಂದ್ರದಲ್ಲಿ ವಿದ್ಯುತ್‌ ಸಮಸ್ಯೆಯಿಂದ ನೋಂದಣಿಗೆ ಬಂದ ಜನರು ದಿನ ಪೂರ್ತಿ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ.

ತಾಲ್ಲೂಕಿನ ತೆಕ್ಕಲಕೋಟೆ ಹಾಗೂ ಸಿರುಗುಪ್ಪ ಹೋಬಳಿ ವ್ಯಾಪ್ತಿಯಲ್ಲಿನ ಆಧಾರ್ ನೊಂದಣಿ ಕೇಂದ್ರಕ್ಕೆ ಸುಮಾರು 50 ಹಳ್ಳಿಗಳ ಜನ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಿದ್ದಾರೆ.

ADVERTISEMENT

ಆದರೆ, ನಗರದಲ್ಲಿ ದಿನಕ್ಕೆ ನಾಲ್ಕಾರು ಬಾರಿಯಾದರೂ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಕೆಲವು ಬಾರಿ ದಿನಗಟ್ಟಲೆ ವಿದ್ಯುತ್ ಸಂಪರ್ಕ ಕಡಿತವಾಗುವುದು ಸಾಮಾನ್ಯವಾಗಿದೆ. ಆಧಾರ್ ನೋಂದಣಿ ಕೇಂದ್ರದಲ್ಲಿ ವಿದ್ಯುತ್ ಸಂಪರ್ಕಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲದೆ ಕೇಂದ್ರದ ಮುಂದೆ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಆಧಾರ್ ನೊಂದಣಿ ಕಚೇರಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ತುಂಬಾ ತೊಂದರೆಯಾಗುತ್ತಿದೆ. ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಅದು ಇಲ್ಲಿಯವರೆಗೆ ಯಾವುದೇ ವ್ಯವಸ್ಥೆ ಮಾಡಿಲ್ಲವೆಂದು ಆಧಾರ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ತಿಳಿಸಿದ್ದಾರೆ.

’ಜನರೇಟರ್ ವ್ಯವಸ್ಥೆ ಮಾಡಿಕೊಡಬೇಕೆಂದು ತಹಶೀಲ್ದಾರರಿಗೆ ಅನೇಕಬಾರಿ ಕೇಳಿಕೊಂಡಿದ್ದೇವೆ’ ಎಂದು ನೋಡಲ್ ಅಧಿಕಾರಿ ಬಸವರಾಜ ತಿಳಿಸಿದ್ದಾರೆ.

’ಆಧಾರ್ ಕೇಂದ್ರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಪರ್ಯಾಯ ವ್ಯವಸ್ಥೆ ಇಲ್ಲದೇ ಕಾಯಬೇಕಾದ ಪರಿಸ್ಥಿತಿದೆ. ತಾಲ್ಲೂಕು ಆಡಳಿತ ಇಲ್ಲಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ರಾಂಪುರ ಹುಸೇನಪ್ಪ, ಶೇಖರ ನಾಯಕ, ಸೋಮಯ್ಯ ಒತ್ತಾಯಿಸಿದ್ದಾರೆ.

’ನಗರದ ಅಂಚೆ ಕಚೇರಿ, ಬಿಎಸ್‌ಎನ್ಎಲ್ ಕಚೇರಿಯಲ್ಲಿ ಆಧಾರ್ ನೊಂದಣಿ ಕೇಂದ್ರ ತೆರೆಯಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ನಮ್ಮ ಕಚೇರಿ ಆವರಣದಲ್ಲಿರುವ ಆಧಾರ್ ಕೇಂದ್ರಕ್ಕೆ ಜನರೇಟರ್ ಅಥವಾ ಇನ್‌ವರ್ಟರ್ ವ್ಯವಸ್ಥೆ ಮಾಡಲಾಗುವುದು’ ಎಂದು ತಹಶೀಲ್ದಾರ್ ಗೌಸಿಯಾಬೇಗಂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.