ADVERTISEMENT

ಬಳ್ಳಾರಿ ಗಲಭೆ ಪ್ರಕರಣ ಸರಿಯಾಗಿ ನಿಭಾಯಿಸಿ: ಸೋಮಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 2:47 IST
Last Updated 5 ಜನವರಿ 2026, 2:47 IST
ವಿ. ಸೋಮಣ್ಣ 
ವಿ. ಸೋಮಣ್ಣ    

ಬಳ್ಳಾರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ, ದೇವರಾಜು ಅರಸು ಅವರ ಸ್ಥಾನ ತುಂಬಬೇಕಾದರೆ ಬಳ್ಳಾರಿ ಘಟನೆಯನ್ನು ಸರಿಯಾಗಿ ನಿಭಾಯಿಸಿ. ಆಗ ನಿಮ್ಮ ಹೆಸರು ಉಳಿಯುತ್ತದೆ. ಅದನ್ನು ಬಿಟ್ಟು ಸಣ್ಣ ಅಪಚಾರ ಮಾಡಿದರೂ ನೀವೇ ಹೊಣೆಗಾರರಾಗುತ್ತೀರಿ’ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ  ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೇಡಿನ ರಾಜಕಾರಣದ ಭಾಗವಾಗಿ ನಮ್ಮ ಪಕ್ಷದ ಶಾಸಕ ಜನಾರ್ಧನರೆಡ್ಡಿ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಇದರಿಂದ ಅಮಾಯಕನೊಬ್ಬ ಮೃತಪಟ್ಟಿದ್ದಾನೆ. ಇದು ರಾಜ್ಯ ಸರ್ಕಾರದ ಆಡಳಿತ ವೈಫಲಕ್ಕೆ ಹಿಡಿದ ಕೈಗನ್ನಡಿ’ ಎಂದು ಆರೋಪಿಸಿದರು.

‘ನಿಮ್ಮ ನಡವಳಿಕೆ, ದುರಹಂಕಾರ, ದ್ವೇಷವು ಒಂದು ಕುಟುಂಬವನ್ನು ನಾಶ ಮಾಡುವ ಹಂತಕ್ಕೆ ಬಂದಿದೆ. ಇದೊಂದು ಹೇಯ ಕೃತ್ಯ. ನಿಮ್ಮ ಪಾಪದ ಕೊಡ ತುಂಬಲಿದೆ. ಜಿಲ್ಲೆಯ ಪ್ರಭುದ್ಧ ಮತದಾರರು ತಕ್ಕ ಪಾಠ ಕಲಿಸುತ್ತಾರೆ. ಜಿಲ್ಲೆಯ ಜನರನ್ನು ಯಾವ ರೀತಿ ನಡೆಸಿಕೊಂಡಿದ್ದೀರಿ ಎನ್ನುವುದಕ್ಕೆ ಜನವರಿ 1ರ ಘಟನೆಯೇ ಸಾಕ್ಷಿ’ ಎಂದು ಹೇಳಿದರು.

ADVERTISEMENT

‘ವಾಲ್ಮೀಕಿಯಂಥ ಮಹಾನ್ ತಪಸ್ವಿ ಹೆಸರಿನಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳಲು ಈ ಪಾಪದ ಕೃತ್ಯ ಎಸಗಿದ್ದೀರಿ. ಕೆಲಸ ಇಲ್ಲದೆ ಖಾಲಿ ಕುಳಿತಿದ್ದ ಕಾಂಗ್ರೆಸ್‍ನ ಐವರ ಸಮಿತಿ ರಚಿಸಿ, ಕಣ್ಣೊರೆಸುವ ತಂತ್ರ ಮಾಡಲಾಗಿದೆ. ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸಿ, ಇಲ್ಲವೇ ಸಿಬಿಐಗೆ ಒಪ್ಪಿಸಿ’ ಎಂದು ಆಗ್ರಹಿಸಿದರು.

‘ಗೃಹಮಂತ್ರಿ ಸಂಭಾವಿತರು. ಅವರು ರಬ್ಬರ್ ಸ್ಟ್ಯಾಂಪ್ ಆಗಿಬಿಟ್ಟಿದ್ದಾರೆ. ರಾಜ್ಯದ ಆಡಳಿತ ಸತ್ತು ಹೋಗಿದೆ. ಅಧಿಕಾರ ಬೇಕಾಗಿದೆ ಅಷ್ಟೇ. ಕ್ರೌರ್ಯದ ರಾಜಕಾಣಕ್ಕೆ ಪ್ರೋತ್ಸಾಹ ನೀಡುತ್ತಿರುವ ಸರ್ಕಾರ, ತಮ್ಮ ಪಕ್ಷ ಶಾಸಕರನ್ನು ರಕ್ಷಿಸಲು, ತಮ್ಮ ವೈಫಲ್ಯ ಮುಚ್ಚಿಡಲು ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಿದೆ. ಈ ಮೂಲಕ ಪೊಲೀಸರ ನೈತಿಕತೆ, ಆತ್ಮಸ್ಥೈರ್ಯ ಕುಂದಿಸುವಂಥ ಕೆಲಸಕ್ಕೆ ಮುಂದಾಗಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.