ADVERTISEMENT

ಅಪಾಯಕ್ಕೆ ಕಾದಿದೆ ಸೋಮೇಶ್ವರ ದೇವಸ್ಥಾನದ ಉತ್ತರ ಪ್ರವೇಶ ದ್ವಾರ

ಪ್ರಜಾವಾಣಿ ವಿಶೇಷ
Published 25 ಆಗಸ್ಟ್ 2024, 4:51 IST
Last Updated 25 ಆಗಸ್ಟ್ 2024, 4:51 IST
ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ಪ್ರವೇಶ ದ್ವಾರ ಶಿಥಿಲಗೊಂಡಿರುವುದು
ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ಪ್ರವೇಶ ದ್ವಾರ ಶಿಥಿಲಗೊಂಡಿರುವುದು   

ಲಕ್ಷ್ಮೇಶ್ವರ: ಅಂದಾಜು ಹನ್ನೊಂದು ನೂರು ವರ್ಷಗಳ ಹಿಂದೆ ಹಾಗೂ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಮಹತ್ವದ ದಿಕ್ಕು ಸೂಚಿಸುವ ಪ್ರವೇಶ ದ್ವಾರ ಶಿಥಿಲಗೊಂಡಿದ್ದು, ಅಪಾಯದ ಗಂಟೆ ಬಾರಿಸುತ್ತಿದೆ.

ಅತ್ಯಂತ ನಾಜೂಕಿನ, ನಯನಮನೋಹರ ಶಿಲ್ಪ ಕಲೆಯನ್ನು ಒಳಗೊಂಡಿರುವ ದೇವಸ್ಥಾನವನ್ನು ಪೂರ್ವ, ಉತ್ತರ ಮತ್ತು ದಕ್ಷಿಣ ದಿಕ್ಕಿನಿಂದ ಪ್ರವೇಶಿಸಬಹುದು. ಬಾದಾಮಿ ಚಾಲುಕ್ಯರು ನಿರ್ಮಿಸಿದ್ದು ಎಂದು ಹೇಳಲಾಗುವ ಸೋಮನಾಥ ಊರ ಜನರ ಆರಾಧ್ಯ ದೈವ.

ಪ್ರತಿದಿನ ನೂರಾರು ಭಕ್ತರು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಇನ್ನು ಸೋಮವಾರ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ವಿಶಾಲವಾದ ಬಯಲಿನಲ್ಲಿ ನಿರ್ಮಾಣಗೊಂಡಿರುವ ದೇವಸ್ಥಾನದ ಉತ್ತರ ಪ್ರವೇಶ ದ್ವಾರ ಸಂಪೂರ್ಣ ಶಿಥಿಲಗೊಂಡಿದ್ದು, ದೇವಸ್ಥಾನದ ಸೌಂದರ್ಯಕ್ಕೆ ಧಕ್ಕೆ ಬಂದಿದೆ.

ADVERTISEMENT

ಉತ್ತರ ಪ್ರವೇಶ ದ್ವಾರ ವಿಶಾಲವಾಗಿದ್ದು, ಅದನ್ನು ದೊಡ್ಡ ಗಾತ್ರದ ಕಾಡುಗಲ್ಲುಗಳಿಂದ ಕಟ್ಟಲಾಗಿದೆ. ಹತ್ತಾರು ಬೃಹತ್ ಕಂಬಗಳನ್ನು ನಿಲ್ಲಿಸಿ ಅದರ ಮೇಲೆ ಕಲ್ಲಿನ ಚಾವಣಿ ನಿರ್ಮಿಸಲಾಗಿದೆ. ಅಷ್ಟು ಕಂಬಗಳ ಪೈಕಿ ನಾಲ್ಕು ಕಂಬಗಳ ಮೇಲೆ ಸುಂದರವಾದ ಕೆತ್ತನೆ ಇದೆ. ಉಳಿದ ಕಂಬಗಳು ಕಾಡು ಕಲ್ಲಿನ ಕಂಬಗಳಾಗಿವೆ. ಆದರೆ ಇದೀಗ ಪ್ರವೇಶ ದ್ವಾರ ಶಿಥಿಲಗೊಂಡಿದ್ದು ಅಲ್ಲಲ್ಲಿ ಕಂಬಗಳು ಮುರಿದು ಬೀಳುತ್ತಿವೆ. ಇದರಿಂದಾಗಿ ಸಾಕಷ್ಟು ವಿಶಾಲವಾಗಿರುವ ದ್ವಾರಕ್ಕೆ ಧಕ್ಕೆ ಬಂದೊದಗಿದೆ.

ಇನ್ನು ಪ್ರತಿವರ್ಷ ನಡೆಯುವ ಜಾತ್ರೆ ಸಂದರ್ಭದಲ್ಲಿ ನೂರಾರು ಭಕ್ತರು ಶಿಥಿಲಗೊಂಡ ಚವಣಿ ಮೇಲೆ ಹತ್ತಿ ನಿಲ್ಲುತ್ತಾರೆ. ಈ ಸಂದರ್ಭದಲ್ಲಿ ಚಾವಣಿ ಕುಸಿದು ಬಿದ್ದರೆ ದೊಡ್ಡ ಅನಾಹುತ ಸಂಭವಿಸುವ ಭಯ ಇದೆ.

‘ಲಕ್ಷ್ಮೇಶ್ವರದ ಪುರದೈವ ಸೋಮೇಶ್ವರ ದೇವಸ್ಥಾನದ ಉತ್ತರ ಭಾಗದ ಪ್ರವೇಶ ದ್ವಾರ ಶಿಥಿಲಗೊಂಡಿದ್ದು ಆಗಲೋ ಈಗಲೋ ಬೀಳುವಂತಿದೆ. ಅದನ್ನು ಬೇಗನೇ ದುರಸ್ತಿ ಮಾಡಿಸಬೇಕಾದ ಅಗತ್ಯ ಇದ್ದು ಸಂಬಂಧಿಸಿದ ಪ್ರಾಚೀನ ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಪ್ರವೇಶ ದ್ವಾರವನ್ನು ಕೂಡಲೇ ದುರಸ್ತಿ ಮಾಡಿಸಲು ಕ್ರಮಕೈಗೊಳ್ಳಬೇಕು’ ಎಂದು ವಕೀಲ ಬಿ.ಎಸ್. ಬಾಳೇಶ್ವರಮಠ ಆಗ್ರಹಿಸಿದರು.

ಶಿಥಿಲಗೊಂಡ ದೇವಸ್ಥಾನದ ಉತ್ತರ ಪ್ರವೇಶ ದ್ವಾರದ ದುರಸ್ತಿ ಕುರಿತು ಸಂಬಂಧಿಸಿದವರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ
–ಚಂಬಣ್ಣ ಬಾಳಿಕಾಯಿ ಸೋಮೇಶ್ವರ ಭಕ್ತರ ಸೇವಾ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.